ಕಳೆದವಾರ ನಮ್ಮ ಗೆಳೆಯರ ಬಳಗದಲ್ಲಿ ಸಂಭ್ರಮವೋ ಸಂಭ್ರಮ. ಕಾರಣ ಸತತ ಎರಡು ವರ್ಷಗಳ ಪ್ರೇಮ ಫಲ ನೀಡಿದ ಗಳಿಗೆ ಅದು. ತುಮಕೂರಿನ ಗೆಳೆಯ ದೇವರಾಜ್ ಬಿ. ಹಿರೇಹಳ್ಳಿ ಮತ್ತು ರಾವಿಯ ತಸ್ಲೀಮ ದಾಂಪತ್ಯದ ಬದುಕಿಗೆ ಅಡಿಯಿಟ್ಟಿದ್ದಾರೆ. ನೂರು ಮತದ ಹೊಟ್ಟ ತೂರಿ, ಎಲ್ಲಾ ತತ್ವಗಳನು ಮೀರಿ, ದಿಗ್ಧಿಗಂತವಾಗಿ ಏರಿ ನಿಂತಿರುವ ಈ ಜೋಡಿಗೆ ಶುಭವಾಗಲಿ.
ಹಾಗೆ ನೋಡಿದರೆ ನಮ್ಮ ಗೆಳೆಯರ ಬಳಗದಲ್ಲಿ ಸುಮಾರು ಅರ್ಧಕ್ಕೆ ಅರ್ಧ ಪ್ರೇಮ ವಿವಾಹಗಳೇ. ಬೇದ್ರೆ ಮಂಜುನಾಥ್-ಸುಧಾ, ಶಿಕ್ಷಕ ಏಕನಾಥ್-ವೀಣಾ, ಪತ್ರಕರ್ತ ಶ.ಮಂಜುನಾಥ್-ಸುಮನಾ, ಅಹೋಬಲಪತಿ-ಶಾಂತ, ಶಶಿ ಸಂಪಳ್ಳಿ-ಅನಿತಾ, ಪ್ರಕಾಶ್ ಕುಗ್ವೆ- ಯಶೋಧ. ಈಗ ದೇವರಾಜ್- ತಸ್ಲೀಮ ಸೇರ್ಪಡೆ.
ಇದೇ ಸಂದರ್ಭದಲ್ಲಿ ಗೆಳೆಯ ಮಂಜು ಯಳನಾಡು ಪ್ರೇಮ ವಿವಾಹದ ಬಗ್ಗೆ ಒಂದು ಲೇಖನ ಬರೆದುಕೊಟ್ಟಿದ್ದಾರೆ. ಅಂದಹಾಗೆ ಮಂಜು ಯಳನಾಡು ವಿಜಯ ಕರ್ನಾಟಕ ಪತ್ರಿಕೆ ಚಿತ್ರದುರ್ಗದ ವರದಿಗಾರರಾಗಿ ಕಾರ್ಯನಿರ್ವಯಿಸುತ್ತಿದ್ದಾರೆ. ಇವರದೂ ಪ್ರೇಮ ವಿವಾಹ. ಪತ್ನಿ ವಿಜಯಲಕ್ಷ್ಮಿ.
ಒಂದು ರೀತಿಯ ಪ್ರಕ್ಷಬ್ಧ ವಾತಾವರಣ ನಿರ್ಮಾಣವಾಗಿರುವಂತೆ ಕಂಡು ಬರುತ್ತಿರುವ ಈ ಕಾಲಘಟ್ಟದಲ್ಲಿ ನಡೆಯುವ ಘಟನಾವಳಿಗಳಿಗೆ ನಮ್ಮ, ನಿಮ್ಮಂತೆಯೇ ಸೂಕ್ಷ್ಮವಾಗಿ ಸ್ಪಂದಿಸುತ್ತ, ಪ್ರತಿಕ್ರಿಯಿಸುತ್ತ ಸಾತ್ವಿಕ, ತಾತ್ವಿಕ ಆಕ್ರೋಶ ಉಳ್ಳಂತಹ ವ್ಯಕ್ತಿ ದೇವರಾಜ್. ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ತುಮಕೂರು ಜಿಲ್ಲೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದ್ವಂದ್ವ, ತಳಮಳಗಳಲ್ಲಿಯೇ ಸದಾ ಹೊಸತನ್ನು ಹುಡುಕುವ, ಕಟ್ಟುವ ಸಾಂಸ್ಕೃತಿಕ ಮನಸ್ಸುಳ್ಳವನು. ಆರಂಭದಲ್ಲಿ, ಈ ಜೋಡಿ ಹೆಸರುಗಳನ್ನು ಓದಿದ ತಕ್ಷಣವೇ ನಿಮ್ಮ ಊಹೆಗೆ ಒಂದಿಷ್ಟು ವಿಷಯಗಳು ನಿಲುಕಿರಬಹುದು. ಮತಗಳ ಹೊಟ್ಟ ತೂರಿ ಗಡಿ ದಾಟುವ ಆಗತ್ಯ, ಅನಿವಾರ್ಯ ಎರಡೂ ಈ ಸಂದರ್ಭದಲ್ಲಿವೆ. ಅದನ್ನು ಗೆಳೆಯ ದೇವರಾಜ್ ಮತ್ತು ತಸ್ಲೀಮ ಮಾಡಿರುವುದಕ್ಕೆ ಹೆಮ್ಮೆಯಿದೆ. ಒಂದಿಡಿ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿರಿಸಿ, ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ಪಟ್ಟಭದ್ರರು ಹುನ್ನಾರ ನಡೆಸುತ್ತಿರುವ ಈ ಹೊತ್ತಿನಲ್ಲಿ, ಅದಕ್ಕೆ ಪೂರಕವಾಗಿ ವಿಕ್ಷಿಪ್ತ ಮನಸ್ಸುಗಳಿಂದ ದುರಂತಗಳು ಸಂಭವಿಸುತ್ತಿರುವ ಈ ಹೊತ್ತಿನಲ್ಲಿ, ಮೂಲಭೂತವಾದ ಗರಿಗೆದರಿ ಮನಸ್ಸುಗಳು ಒಡೆದು ಕಂದಕ ಸೃಷ್ಠಿಯಾಗುತ್ತಿರುವ ಈ ಸಂದರ್ಭದಲ್ಲಿ ಗೆಳೆಯ ದೇವರಾಜ್ ಒಡೆದ ಮನಸ್ಸುಗಳ, ಕಂಡ ಕನಸುಗಳ ಕಟ್ಟುವ ಕೆಲಸ ಮಾಡಿ ಮಾದರಿಯಾಗಿದ್ದಾನೆ ಎನ್ನುವುದು ನನ್ನ ಭಾವನೆ. ಜಾತ್ಯಾತೀತ ರಾಷ್ಟ್ರದಲ್ಲಿ ಜಾತಿ, ಮತಗಳನ್ನು ಮೀರಿ ಬುದುಕುತ್ತೇನೆಂದರೆ ಅದು ಯಾವತ್ತಿಗೂ ಸ್ವಾಗತವೇ ತಾನೇ. ಎಲ್ಲಾ ಮತ ಧರ್ಮಗಳ ಗುರಿ ಪ್ರೀತಿ, ಪ್ರೇಮ, ಸಹಬಾಳ್ವೆ. ಶ್ರೇಷ್ಠತೆಯ ವ್ಯಸನಿಗಳಿಗೆ, ಧರ್ಮ ಲಾಂಛನವಿಡಿದು ಮೆರವಣಿಗೆ ಹೊರಡುವ ಲಾಭಕೋರರಿಗೆ ಇದು ಬೇಕಿಲ್ಲ. ಯುವ ಮನಸ್ಸುಗಳಿಗೆ ಧರ್ಮದ ಅಫೀಮು ತಿನ್ನಿಸಿ ಸದಾ ಅವರನ್ನು ಮತ್ತಿನಲ್ಲಿರಿಸಿ ದಾರಿ ತಪ್ಪಿಸುತ್ತಿರುವ ಇವರ ಬಗ್ಗೆ , ಇಂತಹ ಮನಸ್ಸುಗಳಿಗೆ ಮಣೆ ಹಾಕುವ ಮುನ್ನ ಯೋಚಿಸುವುದು ಒಳಿತು.
ಹೌದು, ಮನಸ್ಸುಗಳ ನಡುವೆಯಿರುವ ಜಾತಿ, ಮತದ ಅಡ್ಡ ಗೋಡೆಯುರುಳಿಸಲು ಸಾಧ್ಯವಿರುವುದು ಪ್ರೇಮ ವಿವಾಹಗಳಿಗೆ ಮಾತ್ರ. ಪ್ರೇಮದ ಆರಂಭದಲ್ಲಿ ಅದು ಮನಸ್ಸಿನ ವ್ಯವಹಾರ ಅನ್ನಿಸಿದರೂ, ಮದುವೆ ಹಂತದಲ್ಲಿ ಈ ಎಲ್ಲಾ ಗಡಿಗಳನ್ನು ಮೀರಿ ಅದು ಸಮಾಜಮುಖಿಯಾಗುತ್ತದೆ. ವೈಚಾರಿಕ ನಿಲುವಾಗುತ್ತದೆ. ಶ್ರೇಷ್ಠತೆಯ ವ್ಯಸನಿಗಳ ಈ ನಾಡಿನಲ್ಲಿ ಜಾತ್ಯಾತೀತನಾಗಿ ಅಸ್ಮಿತೆ ಕಂಡುಕೊಳ್ಳುವುದು ಕಷ್ಟ ಸಾಧ್ಯದ ಕೆಲಸ. ಸಮಾಜವೇ ಒಪ್ಪಿ, ಅಥವಾ ಕುಟುಂಬಗಳು ನೇರವಾಗಿ ಜಾತಿ ಮೀರಿ ವಿವಾಹ ಸಂಬಂಧ ಏರ್ಪಡಿಸುವುದನ್ನು ಈ ನಾಡಿನಲ್ಲಿ ಊಹಿಸಿಕೊಳ್ಳಲು ಸಾಧ್ಯವೆ ? (ಇದಕ್ಕೆ ವ್ಯತಿರಿಕ್ತವಾಗಿ ಒಂದಿಷ್ಟು ಸೂಕ್ಷ್ಮಮತಿಗಳಿರಬಹುದು) . ಈ ಕಾರಣದಿಂದಲೇ ಪ್ರೇಮವಿವಾಹಗಳಿಂದ ಮಾತ್ರ ಜಾತಿ, ಮತದ ಗೋಡೆಯನ್ನು ಒಡೆಯಲು ಸಾಧ್ಯ. ಪ್ರೇಮ ಜಾತ್ಯಾತೀತನಾಗಲು ಇರುವ ರಹದಾರಿ.
ಅಂತಹ ಪ್ರೇಮ ಅಷ್ಟೇ ಜವಾಬ್ಧಾರಿ, ಸೂಕ್ಷ್ಮಮತಿಯನ್ನು ಬೇಡುತ್ತದೆ ಎನ್ನುವುದು ನೆನಪಿರಬೇಕು. ಪ್ರೇಮ ವಿವಾಹಗಳ ವೈಫಲ್ಯದ ಬಗ್ಗೆ ಬಹಳ ದೊಡ್ಡ ಧ್ವನಿಯಲ್ಲಿ ಮಾತನಾಡುತ್ತಾರೆ. ಈ ಸಮಾಜದಲ್ಲಿ ನಡೆಯುವ ಪ್ರೇಮ ವಿವಾಹ, ಅಂತರ್ಜಾತಿ ವಿವಾಹಗಳ ಸಂಖ್ಯೆ, ಕುಟುಂಬಗಳು ಒಪ್ಪಿ ತಮ್ಮದೇ ಜಾತಿಯಲ್ಲಿ ಮಾಡಿಕೊಳ್ಳುವ ಅರೇಂಜ್ ಮ್ಯಾರೇಜ್ ಗಳ ಸಂಖ್ಯೆ ಎಷ್ಟು ? ಹಾಗೆ ನೋಡಿದರೆ ಈ ಸಮಾಜದಲ್ಲಿ ಪ್ರೇಮವಿವಾಹ ಶೇ.೪ ರಿಂದ ೫ ರಷ್ಟಿರಬಹುದು. ಉಳಿದ ಎಲ್ಲವೂ ಅರೇಂಜ್ ಮ್ಯಾರೇಜ್ ಗಳಾಗಿರುತ್ತವೆ. ಶೇ. ೪ ರಲ್ಲಿ ವೈಫಲ್ಯ ಕಾಣುವ ಅನುಪಾತಕ್ಕೂ, ಉಳಿದ ಶೇ.೯೬ ರಲ್ಲಿ ಕಂಡುಬರುವ ವಿವಾಹ ವೈಫಲ್ಯಗಳನ್ನು ಹೋಲಿಸಿ ನೋಡಿ ನಿಮಗೆ ಸತ್ಯ ತಿಳಿದು ಬಿಡುತ್ತದೆ.
ದೇವರಾಜ್ ಮತ್ತು ತಸ್ಲೀಮ ಬದುಕು ಸಂತಸಮಯವಾಗಿರಲಿ. ಸಾಂಸ್ಕೃತಿಕವಾಗಿ ಸದಾ ಎಚ್ಚರವಾಗಿದ್ದು ಮತ್ತೊಂದಿಷ್ಟು ಮಾನವೀಯ ಮನಸ್ಸುಗಳನ್ನು ರೂಪಿಸಲಿ ಎಂದು ಹಾರೈಸೋಣ.
"ಜಾತಿ ಸುಡೋ ಮಂತ್ರ ಕಿಡಿ ಪ್ರೀತಿ."