Wednesday, August 20, 2008

ಫುಕುವೋಕಾ ಕೂಡ ಆಧುನಿಕ ಆಶ್ಚರ್ಯ ಮತ್ತು ನಿರ್ಲಕ್ಷ್ಯ



ನಿನ್ನೆ ರಾತ್ರಿ ಚಿತ್ರದುರ್ಗದ ಮಿತ್ರ ಮಂಜು ಯಳನಾಡು ಅವರಿಗೆ ಫೋನ್ ಮಾಡಿದಾಗ ತುಂಬಾ ಗರಮ್ ಆಗಿದ್ದರು. ಅವರಿಗೆ ಮಾಧ್ಯಮಗಳ ಬಗ್ಗೆ ರೇಜಿಗೆ ಬಂದಿತ್ತು. ಕಾರಣ ನಮ್ಮ ಕಾಲದ ಒಬ್ಬ ಮಹಾನ್ ಚೇತನ ಫುಕುವೋಕಾ ತೀರಿಕೊಂಡ ಸಮಾಚಾರವನ್ನು ನಾವು ತಿಳಿದುಕೊಳ್ಳಲು ನಾಲ್ಕು ದಿನಗಳೇ ಬೇಕಾಗಿದ್ದು. ಅವರನ್ನು ಸಮಾಧಾನ ಮಾಡಿ ಫುಕುವೋಕಾ ಬಗ್ಗೆ ನಮಗಿದ್ದ ಆಸಕ್ತಿ, ಅವರಿಂದ ಪ್ರೇರಿತರಾಗಿ ಮಾಡಿದ ಕೆಲಸಗಳ ಬಗ್ಗೆ ಮಾತನಾಡಿಕೊಂಡೆವು.

ಡಿಗ್ರಿ ಮೊದಲ ವರ್ಷದಲ್ಲಿರುವಾಗ ತೇಜಸ್ವಿಯವರ 'ಜುಗಾರಿ ಕ್ರಾಸ್' ಪಾತ್ರಗಳಾದ ಸುರೇಶ ಮತ್ತು ಗೌರಿಯರಂತೆ ನಾನೂ ಒಂದು ತೋಟ ಮಾಡಿ ಸ್ವಾವಲಂಬಿ ಕೃಷಿಕನಾಗಬೇಕೆಂದು ಕನಸು ಕಂಡಿದ್ದೆ. ಅದೇ ಸಮಯದಲ್ಲಿ ಫುಕುವೋಕಾರವರ 'ಒಂದು ಹುಲ್ಲಿನ ಕ್ರಾಂತಿ' ಓದುವ ಅವಕಾಶ ಸಿಕ್ಕಿತು. ಅವರ ಸಹಜ ಕೃಷಿಯಿಂದ ಎಷ್ಟು ಪ್ರಭಾವಿತನಾದೆನೆಂದರೆ ನಮ್ಮ ಜಮೀನಿನಲ್ಲೀಯೂ ಅದರ ಪ್ರಯೋಗ ಮಾಡಬೇಕೆಂದು ತೀರ್ಮಾನಿಸಿ ನನ್ನ ತಾತನವರಲ್ಲಿ ಆಸೆ ವ್ಯಕ್ತಪಡಿಸಿದೆ. ಅವರಾಗಲೇ ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿ, ಕೃಷಿಯಲ್ಲಿ ತೊಡಗಿಸಿಕೊಂಡು, ಸಾವಿರಾರು ರುಪಾಯಿಗಳ ಕಳೆದುಕೊಂಡು ಹತಾಶರಾಗಿದ್ದರು. ನನ್ನ ಆಸೆಯನ್ನು ಕೇಳಿ ಮತ್ತೂ ಕಂಗಾಲಾದರು. ಬೇಸಾಯದ ಕುರಿತು ಒಂದು ಗಾದೆ ಇದೆ 'ಬೇಸಾಯ ಅಂದ್ರೆ ನಾಸಾಯ, ನೀಸಾಯ, ಮನೆಮಂದಿಯೆಲ್ಲ ಸಾಯ' ಅಂತ. ನಿನ್ನ ಪ್ರಯೋಗ ಏನಿದ್ದರೂ ಓದಿನಲ್ಲಿ ಮಾಡು, ಇನ್ನೆಂದು ನೀನು ನಮ್ಮ ಹಳ್ಳಿಗೆ ಬರಬೇಡ ಎಂದು ನನ್ನನು ಗದರಿ ದುರ್ಗಕ್ಕೆ ಅಟ್ಟಿದ್ದರು. ಮೊಳಕೆಯಲ್ಲಿಯೇ ನನ್ನ ಸಹಜ ಕೃಷಿಯ ಭತ್ತ ಕಮರಿ ಹೋಯಿತು.

ಇವತ್ತು ವ್ಯವಸಾಯ ತುಂಬಾ ನಷ್ಟದ ವ್ಯವಹಾರ ಆಗಿದೆ. ನಾವು ರಾಸಾಯನಿಕ ಬಳಸಿ ಬಳಸಿ ಭೂಮಿ ಕಣ್ಣು ಮುಚ್ಚಿಕೊಂಡಿದೆ. ನಮ್ಮ ರೈತ ಕೂಡಾ ಕಣ್ಣು ಮುಚ್ಚಿಕೊಂಡಿದ್ದಾನೆ. ರಸಗೊಬ್ಬರ ಸಿಗುತ್ತಿಲ್ಲವೆಂದು ರೈತ ಬೀದಿಗಿಳಿದು ಗಲಾಟೆ ಮಾಡುತ್ತಿರುವ ಈ ಹೊತ್ತಿನಲ್ಲಿ ಫುಕುವೋಕಾ ತೀರಿಕೊಂಡಿದ್ದಾರೆ. ಫುಕುವೋಕಾ ಅವರ ನೈಸರ್ಗಿಕ ಕೃಷಿಯನ್ನು ಯಾವ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕೋ ತಿಳಿಯುತ್ತಿಲ್ಲ.

ಫೂಕುವೋಕಾ ಬಗ್ಗೆ ಲಂಕೇಶ್ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಪತ್ರಿಕೆಯಲ್ಲಿ ಬರೆದಿದ್ದರು. ಗಾಂಧಿ ತತ್ವ ಮತ್ತು ಫುಕುವೋಕಾರ ಜೀವನದ ಪ್ರಸ್ತುತತೆಯನ್ನು ವಿವರಿಸುವ ಆ ಲೇಖನದ ಒಂದಷ್ಟು ಭಾಗ ಇಲ್ಲಿದೆ.
ದೈತ್ಯ ನಾಗರಿಕತೆಯ ಎದುರು ನಿಂತು ಸರಳವಾಗಿ, ಸ್ಪಷ್ಟವಾಗಿ ಮಾತಾಡುವ ಫುಕುವೋಕಾನ ಎಲ್ಲ ಮಾತುಗಳಿಗೆ ಮಾತ್ರಿಕ ಶಕ್ತಿ ಬರುವುದು ಆತನ ಯಶಸ್ವಿಯಾದ ಕೃಷಿಕ ಕ್ರಿಯೆಯಿಂದ. ಆತ ಕೇವಲ ಹೇಳುವವನಲ್ಲ. ಮಾಡಿ ತೋರಿಸುವ ವ್ಯಕ್ತಿ. ಇಲ್ಲಿ ಒಂದು ಸೂಕ್ಷ್ಮವನ್ನು ಅರಿಯಬೇಕು. ಫುಕುವೋಕಾನ ಸೂಕ್ಷ್ಮಜ್ಞತೆ, ತಿಳಿವಳಿಕೆ, ತಾದತ್ಮ್ಯವಿಲ್ಲದೆ ಆತನ ಶೈಲಿಯ ಕೃಷಿಗಾಗಿ ಪ್ರಯತ್ನಿಸುವುದು ಕಷ್ಟ. ಹಕ್ಕಿ ತನ್ನ ವಂಶದ ಆರಂಭದ ದಿನಗಳಲ್ಲಿ ಸಾವಿರಾರು ವರ್ಷ ಪ್ರಯತ್ನಿಸಿ, ಸೋತು ಮತ್ತೆ ಮತ್ತೆ ಯತ್ನಿಸಿ ಗೂಡು ಕಟ್ಟುವ ಕಲೆಯನ್ನು ಕಲಿತಂತೆ ಫುಕುವೋಕಾ ಮೂವತ್ತು ವರ್ಷ ಮಣ್ಣಿನೊಂದಿಗೆ, ಸಸ್ಯದೊಂದಿಗೆ ಸಂಬಂಧ ಬೆಳೆಸಿ ತನ್ನ ಗದ್ದೆಯ, ತನ್ನ ವ್ಯಕ್ತಿತ್ವದ ಕೃಷಿ ಮಾಡಿಕೊಂಡ. ಹುಚ್ಚು ಆಧುನಿಕತೆಗೆ ಸವಾಲಾಗಬಲ್ಲ ನೈಸರ್ಗಿಕ ವಿಧಾನ ಕಂಡುಕೊಂಡ. ಫುಕುವೋಕಾನ ಸಾಧನೆಯ ಆಕರ್ಷಣೆ ಅದರ ಲಾಭಧಾಯಕ, ಆರೋಗ್ಯವಂತ ಗುಣದಲ್ಲಿದೆ. ಗಾಂಧೀಜಿ ಕನಸಿದ ಆರೋಗ್ಯವಂತ, ಸರಳ, ಕೃತ್ರಿಮವಿಲ್ಲದ ಪ್ರಜೆಯ ಋತುಮಾನಕ್ಕೆ ತಕ್ಕಂಥ ನಾಗರಿಕತೆಗಾಗಿ ಮನುಷ್ಯನ ಕ್ರಿಯೆಯ ಪುನರ್ರಚನೆಯನ್ನು ಬಯಸುತ್ತಾನೆ. ಗಾಂಧೀಜಿಯಂತೆಯೇ ಫುಕುವೋಕಾ ಕೂಡ ಆಧುನಿಕ ಆಶ್ಚರ್ಯ ಮತ್ತು ನಿರ್ಲಕ್ಷ್ಯಕ್ಕೆ ತುತ್ತಾಗುವ ಅಪಾಯವಿದೆ.

ಯಾಕೆಂದರೆ ಆಧುನಿಕ ಮನುಷ್ಯನ ವೈಜ್ಞಾನಿಕ ತಪ್ಪು ಹೆಜ್ಜೆ, ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಗೀಳು, ಕೃಷಿಯನ್ನು ಕೂಡ ಅಂತರಾಷ್ಟ್ರೀಯ ಶೋಷಣೆಯ ಭಾಗವಾಗಿಸಿರುವುದು ಎಲ್ಲರಿಗೆ ಸ್ಪಷ್ಟವಾಗಿ ಕಾಣುವುದು ಈ ಶತಮಾನದಲ್ಲಿ ಎಲ್ಲವೂ ವೇಗವಾಗಿ ದಾಳಿ ನಡೆಸಿದ್ದರಿಂದ. ಫುಕುವೋಕಾ, ಗಾಂಧೀಜಿಯ ಆದರ್ಶ ಮನುಷ್ಯನಂತೆ ಪ್ರಶಾಂತ, ಸರಳ, ನಿರಪೇಕ್ಷಿ ಮತ್ತು ಆರೋಗ್ಯವಂತ; ಆದರೆ ಸಾವಿರಾರು ವರ್ಷಗಳಿಂದ ಕೃಷಿ, ಪಾಕಶಾಸ್ತ್ರ, ವಸ್ತ್ರಾಲಂಕಾರದ ವೈವಿಧ್ಯಮಯ ವಾಂಛಲ್ಯಗಳಿಗೆ ಬಿದ್ದಿರುವಾತ ಮನುಷ್ಯ; ಪ್ರಕೃತಿಯನ್ನು ತನ್ನ ಮೂಗಿನ ನೇರಕ್ಕೆ ತಿದ್ದಲು ಯತ್ನಿಸಿದವನು ಈತ. ಅಷ್ಟೇ ಅಲ್ಲ, ಮಹಾಭಾರತದ ಧರ್ಮರಾಯ ಕೂಡ ಜೂಜಿನ ಮೋಜಿಗೆ ಶರಣಾಗಿ, ಕೃಷ್ಣ ರಾಜಕೀಯ ತಂತ್ರದ ನಿಷ್ಣಾತನಾಗಿ ನಾಗರಿಕತೆ ಪಡೆಯುವ ಚಿತ್ರವಿಚಿತ್ರ ಆಯಾಮಗಳನ್ನು ಪ್ರದರ್ಶಿಸಿ ಫುಕುವೋಕಾ, ಗಾಂಧೀಜಿಯ ತಣ್ಣನೆಯ ಮನುಷ್ಯನನ್ನು ಅಣಕಿಸುತ್ತಾರೆ. ವಿಕೃತಿ ಮನುಷ್ಯನ ಪ್ರಕೃತಿಯ ಅಂಗವಾಗಿಯೇ ಕೆಲಸ ಮಾಡುತ್ತ ಪೂರ್ಣವಾಗಿ ತೊಲಗಲು ನಿರಾಕರಿಸುತ್ತದೆ. ಸಿಟ್ಟು ನೈಸರ್ಗಿಕವೆನ್ನಿಸಿಕೊಂಡು ಕ್ರೌರ್ಯದೊಂದಿಗೆ ಮಿಲನಗೊಳ್ಳುವ ಅಪಾಯ ಸದಾ ಇರುತ್ತದೆ.

ಆದರೆ ಫುಕುವೋಕಾ ತನಗೆ ವೈಯಕ್ತಿಕವಾಗಿ ಅಗತ್ಯವೆಂದು ಆರಂಭಿಸಿದ ಅನ್ವೇಷಣೆ ನಾಗರಿಕತೆಯ ಅನಿವಾರ್ಯ ದ್ರವ್ಯವೆನಿಸುತ್ತದೆ. ಮನುಷ್ಯ ತನ್ನ ಐಲುಗಳ ನಡುವೆಯೂ ಕೈಚಾಚಿ ಪಡೆಯಬಲ್ಲ ನಿಧಿ ಫುಕುವೋಕಾನ ಕೃಷಿ ಮತ್ತು ತತ್ತ್ವದಲ್ಲಿದೆ.

6 comments:

Anonymous said...

Fukuoka koduge kuritu yavude dainika pratikriyisuva munna ee blog ondu chandada lekhana upload madiruvudu santasada sangati.

- sahaja

ಕಳ್ಳ ಕುಳ್ಳ said...

"Aadunika aascharya mathu nirlaksya" yendu helidde avara bagge yellavannu helitheno!
ulida sensational newsgala madhye Fukuvaka bagge banda single, double (chowkashi!)newsgalu kaneye agiddavu.
krushi pradhanigalu navu, kannadigaru. adru 'hallige hache' hakisuva suddiginthalu fukuvaka suddi keela, swami?
-Vikas Negiloni

Anonymous said...

Negiloni - negilayogi Fukuoka - bagge vyaktapadisiro abhiprayakke namdu sahamata ide kanrapppoooo

- moolehola muniya

Anonymous said...

ಫುಕಕವೊಕಾ ನಿಧನದ ಬಗ್ಗೆ ಯಾವುದೇ ದೈನಿಕಗಳು ಸುದ್ದಿ ಪ್ರಕಟಿಸಲಿಲ್ಲ. ಏಕೆಂದರೆ ಅವರು ರಾಜಕಾರಣಿ ಅಲ್ಲ; ಭ್ರಷ್ಟ ಅಧಿಕಾರಿಯಲ್ಲ. ಕೇವಲ ನೆಮ್ಮದಿಯ ಜೀವನ ನಡೆಸುತ್ತಿದ್ದ ರೈತ.
ಇನ್ನು ಟಿವಿ ವಾಹಿನಿಗಳು.. ಹೇಳದಿರುವುದೇ ಉತ್ತಮ. ದಾರಿಯಲ್ಲಿ ಎಲ್ಲೋ ಸಣ್ಣ ಅಪಘಾತವಾಗಿ ಇಬ್ಬರಿಗೆ ಅಲ್ಪ ಗಾಯವಾದರೂ ತಾಸುಗಟ್ಟಲೇ ಕೊರೆಯುತ್ತವೆ!! ಅಷ್ಟಕ್ಕೂ ವಾಹಿನಿ ಅಥವಾ ಪತ್ರಿಕೆಗಳಲ್ಲಿ ಇರುವ ಹಿರಿಯ ಸಿಬ್ಬಂದಿಗೆ ವರ್ತೂರು ಪ್ರಕಾಶ, ಡಿ.ಕೆ.ಶಿವಕುಮಾರ ಬಗ್ಗೆ ಗೊತ್ತಿದ್ದಷ್ಟು ಫುಕುವೊಕಾ ಬಗ್ಗೆ ಗೊತ್ತಿರುವುದಿಲ್ಲ. ಅವರಿಗೆ ಈ ಅಜ್ಜನ ನಿಧನದ ಸುದ್ದಿ ಒಂದು ಕಾಲಂ ಹಾಗೂ ನಾಲ್ಕು ಪ್ಯಾರಾ ಅಷ್ಟೇ!
- ಸಹಜ

Anonymous said...

ಫುಕಕವೊಕಾ ನಿಧನದ ಬಗ್ಗೆ ಯಾವುದೇ ದೈನಿಕಗಳು ಸುದ್ದಿ ಪ್ರಕಟಿಸಲಿಲ್ಲ. ಏಕೆಂದರೆ ಅವರು ರಾಜಕಾರಣಿ ಅಲ್ಲ; ಭ್ರಷ್ಟ ಅಧಿಕಾರಿಯಲ್ಲ. ಕೇವಲ ನೆಮ್ಮದಿಯ ಜೀವನ ನಡೆಸುತ್ತಿದ್ದ ರೈತ.
ಇನ್ನು ಟಿವಿ ವಾಹಿನಿಗಳು.. ಹೇಳದಿರುವುದೇ ಉತ್ತಮ. ದಾರಿಯಲ್ಲಿ ಎಲ್ಲೋ ಸಣ್ಣ ಅಪಘಾತವಾಗಿ ಇಬ್ಬರಿಗೆ ಅಲ್ಪ ಗಾಯವಾದರೂ ತಾಸುಗಟ್ಟಲೇ ಕೊರೆಯುತ್ತವೆ!! ಅಷ್ಟಕ್ಕೂ ವಾಹಿನಿ ಅಥವಾ ಪತ್ರಿಕೆಗಳಲ್ಲಿ ಇರುವ ಹಿರಿಯ ಸಿಬ್ಬಂದಿಗೆ ವರ್ತೂರು ಪ್ರಕಾಶ, ಡಿ.ಕೆ.ಶಿವಕುಮಾರ ಬಗ್ಗೆ ಗೊತ್ತಿದ್ದಷ್ಟು ಫುಕುವೊಕಾ ಬಗ್ಗೆ ಗೊತ್ತಿರುವುದಿಲ್ಲ. ಅವರಿಗೆ ಈ ಅಜ್ಜನ ನಿಧನದ ಸುದ್ದಿ ಒಂದು ಕಾಲಂ ಹಾಗೂ ನಾಲ್ಕು ಪ್ಯಾರಾ ಅಷ್ಟೇ!
- ಸಹಜ

Anonymous said...

Asahaja asked...

adyarappa sahaja hesarinalli 3
comment hakdoru?