Wednesday, December 17, 2008

ನಮ್ಮಜ್ಜಿ ಹೇಳಿದ ಕತೆ



ಒಂದಾನೊಂದು ಕಾಲದಲ್ಲಿ, ಮೈಸೂರು ರಾಜ್ಯದ ಮುಸ್ಟೂರು ಎಂಬ ಹಳ್ಳಿಯಲ್ಲಿ ಇಬ್ಬರು ಅಣ್ಣ ತಂಮ್ಮಂದಿರಿದ್ದರು. ದೊಡ್ಡವನು ಸ್ವಾಮಿ ಸಣ್ಣವನು ಸುನಿ. ದೊಡ್ಡಣ್ಣ ಸ್ವಾಮಿ ಅವರ ತಾತನ ಹೊಲ ನೋಡಿಕೊಂಡು ಸುಖವಾಗಿದ್ದ. ತಮ್ಮ ದೊಡ್ಡವನಿಗಿಂತ ಜಾಣ ಪಟ್ಟಣ ದುರ್ಗದಲ್ಲಿ ಓದೋಕೋಗಿದ್ದ. ಅಣ್ಣ ಸ್ವಾಮಿ ಪ್ರತಿ ವರ್ಷದಂತೆ ಕಪ್ಲೆ ಗುಡಿಸಲು ಹೊಲ್ದಗೆ ಸೌತೆಕಾಯಿ ಹಾಕಿದ್ದ. ನೋಡ ನೋಡುತ್ತಾ ಬೀಜ ಗಿಡವಾಗಿ, ಗಿಡ ಬಳ್ಳಿಯಾಗಿ, ಬಳ್ಳಿ ಹೂಬಿಟ್ಟು, ಹೂ ಹೀಚಲೊಡದ್ವು. ದಿನವೆಲ್ಲ ಕಲ್ಲೊಲದಲ್ಲಿ ಸೇಂಗಾ ಕಳೆ ತೆಗೆದು, ಹೊತ್ತು ಮುಳುಗೋವತ್ತಿಗೆ ಸೌತೆ ಬಳ್ಳಿ ಕಾಯೋಕೆ ಅವರಜ್ಜಿ ಮಾಡಿಕೊಟ್ಟ ಜ್ವಾಳದ ಮುದ್ದೆ ಹುಣಸೆ ಚಿಗುರಿನ ಉದಕ ಬುತ್ತಿ ಕಟ್ಟಿಕೊಂಡು ಸ್ವಾಮಿ ದಿನಾಲು ಹೊಲ ಕಾಯೋಕೆ ಹೋಗ್ತಿದ್ದ.

ಒಂದಿನ ರಾತ್ರಿ ಮುದ್ದೆ ಉಂಡು ಕಂಬ್ಳಿ ಹೊದ್ಕೊಂಡು ಇನ್ನೇನು ಮಕ್ಕಬೇಕು ಅನ್ನೋ ಹೊತ್ಗೆ ಒಂದು ಬಲವಾದ ಕಪ್ಪಲಾಟ ಪಕ್ಕದ ಹುಣಿಸೇ ಮರದ್ ಕೆಳ್ಗೆ ಗುಟುರಾಕಿತು. ಸ್ವಾಮಿ ಗಡ ಗಡಾ ಅಂತ ನಡುಗೋಗಿಬಿಟ್ಟ. ಕಪ್ಪಲಾಟ ಘರ್ಜಿಸುತ್ತಾ ಕೇಳಿತು ಎಲ್ಲಿ ನಿಮ್ಮಜ್ಜ ಲಿಂಗಪ್ಪ ಎಲ್ಲಿ ನಿಮ್ಮಪ್ಪ ಮುಸ್ಟೂರ.. ನಾನು ದಿನಾಲು ಇದೇ ಹೊತ್ತಿಗೆ ಬರ್ತೀನಿ ನನ್ಗೆ ಕರಿಕಂಬ್ಳಿ ಗದ್ಗೆ ಹಾಸಿ, ನಾಲ್ಕು ಮೂಲಗೆ ನಾಲ್ಕು ಸೌತೆಕಾಯಿ ಇಡಬೇಕು ಅಂತ ಹೇಳಿತು. ಕಪ್ಪಲಾಟ ಸೌತೆಕಾಯಿನ ಕಟಕ್ಕನೆ ತಿಂದು ಪುಟುಕ್ಕನೆ ಸ್ವಾಮಿ ಬಾಯಲ್ಲಿ ಹೂಸು ಬಿಟ್ಟಿತು. ದಿನಾ ಕಪ್ಪಲಾಟ ಬರೋದು, ಸ್ವಾಮಿ ಕರಿಕಂಬ್ಳಿ ಗದ್ದುಗೆ ಹಾಸೋದು, ನಾಲ್ಕು ಮೂಲೆಗೆ ನಾಲ್ಕು ಸೌತೆಕಾಯಿ ಇಡೋದು ನಡೀತಾ ಇತ್ತು.

ಬರಬರುತ್ತ ಸ್ವಾಮಿ ಸಣ್ಣಗಾದ. ಮನೆಯಲ್ಲಿ ಅವರಜ್ಜಿ ಕೇಳಿದ್ರೆ ಏನೂ ಹೇಳ್ತಿರ್ಲಿಲ್ಲ. ಒಂದಿನ ಸುನಿ ದುರ್ಗದಿಂದ ಬ್ಯಾಸಿಗೆ ರಜಕ್ಕೆ ಊರಿಗೆ ಬಂದ. ಅಣ್ಣ ಸಣ್ಣಗಾಗಿದ್ದನ್ ನೋಡಿ ಗದರಿಸಿ ಕೇಳಿದ. ಆಗ ಸ್ವಾಮಿ ಬಾಯಿ ಬಿಟ್ಟ. ಸುನಿ, ಗುಡುಸ್ಲೊಲಕ್ಕೆ ಒಂದು ಕಪ್ಪಲಾಟ ಗಂಟು ಬಿದ್ದಿದೆ. ದಿನಾಲು ಸೌತೆಕಾಯಿ ತಿಂದು ನನ್ನ ಬಾಯಿಗೆ ಹೂಸು ಬಿಡುತ್ತೆ ಅಂತ ನಿಜ ಉಸುರಿದ. ತಮ್ಮಂಗೆ ಮೈಯಲ್ಲಾ ಉರ್ದೋಯ್ತು. ನಮ್ಮಣ್ಣನ ಕಾಡ್ತಿರೋ ಕಪ್ಪಲಾಟನ ಮಟ್ಟ ಹಾಕಬೇಕೂಂತ ತೀರ್ಮಾನ ಮಾಡ್ದ. ಅಣ್ಣ ನೀನು ಇವತ್ತು ಕಲ್ಲೊಲಕ್ಕೆ ಹೋಗು, ನಾನು ಸೌತೆಕಾಯಿ ಕಾಯೋಕೋಗ್ತಿನಿ ಅಂದ.

ಸಾಯಂಕಾಲ ಅವರಜ್ಜಿ ಕಟ್ಟಿಕೊಟ್ಟ ಬುತ್ತಿ ತಗೊಂಡು ಹೊಲಕ್ಕೆ ಹೋದ. ಜೊತೆಗೆ ಒಂದು ಚುಚ್ಗ ತಗಂಡು ಹೋದ. ಹೊತ್ತು ಮುಳುಗಿ ಕತ್ಲಾಗ್ತಾ ಬಂತು. ಚುಚ್ಗನ ಸರಿಯಾಗಿ ಬೆಂಕಿಯಲ್ಲಿ ಕೆಂಪಗೆ ಕಾಸಿಕೊಂಡ. ಹುಣಿಸೆ ಮರದ ಕೆಳಗೆ ಕಪ್ಪಲಾಟಕ್ಕಾಗಿ ಕಾದ್ಕೊಂಡು ಕುಂತ್ಗಂಡ. ಸರಿಯಾದ ಸಮಯಕ್ಕೆ ಕಪ್ಪಲಾಟ ಬಂತು. ಜೋರಾಗಿ ಘರ್ಜಿಸುತ್ತಾ 'ಸ್ವಾಮೀ.. ಕರಿಕಂಬ್ಳಿ ಗದ್ಗೆ ಹಾಸಿದಿಯೇನೋ?' 'ಹೂಂ ಸ್ವಾಮಿ...' 'ನಾಲ್ಕು ಮೂಲೆಗೆ ನಾಲ್ಕು ಸೌತೆಕಾಯಿ ಇಟ್ಟಿದಿಯೇನೋ...?' 'ಹೂಂ ಸ್ವಾಮಿ...' 'ಹಾ ಜಾಣ' ಅಂದು ಒಂದು ಸೌತೆ ಕಾಯಿ ತಿಂದು ಸುನಿ ಬಾಯಿಗೆ ಹೂಸು ಬಿಟ್ಟಿತು. ಕೆಟ್ಟು ವಾಸನೆ. ಸುನಿ ಸಹಿಸಿಕೊಂಡು ಇನ್ನೊಂದು ಸೌತೆಕಾಯಿತಿಂದು ಮತ್ತೆ ಹೂಸು ಬಿಡೋಕೆ ಬಂತು, ಸರಿಯಾಗಿ ಕಾಯಿಸಿದ ಚುಚ್ಗನ ಕಪ್ಪಲಾಟದ ಮುಕುಳಿಗೆ ಇಟ್ಟು ಬಿಟ್ಟ. ಕುಯ್ಯಯ್ಯೋ ಅಂತ ಕೂಗ್ತಾ ಗೂರ್ನಳ್ಳಿ ಗುಡಿಗೆ ಬಂತು. ಏನು ಮಾಡಿದರೂ ಚುಚ್ಗ ಉದುರುತ್ತಿಲ್ಲ. ಕಡೆಗೆ ಗೂರ್ನಳ್ಳಿ ಹನುಮಂತನಿಗೆ ಬೇಡ್ಕೊಂತು. 'ಸ್ವಾಮಿ ಹನುಂತರಾಯ.. ಈ ಕಾದಿರೋ ಚುಚ್ಗ ಉದುರಿದರೆ ಬರೋ ವಾರ ನಿನಗೆ ಪರ್ವ್ ಮಾಡ್ತಿನಿ ಅಂತ ಕೈ ಮುಕ್ಕೊಂತು. ಬರ್ನೆ ಚುಚ್ಗ ಕೆಳಗೆ ಬಿತ್ತು. ದೇವರೆ ಹಮನುಂತ ನೀನು ದೊಡ್ಡೋನು ಅಂತ ಕೈ ಮುಗಿದು. ಗೋಕಟ್ಟೆ ಕಡೆಗೆ ಹೋಯ್ತು.

ಆಯ್ತವಾರ ಆಯ್ತು, ಬೆಸ್ತವಾರ ಆಯ್ತು, ಕಪ್ಪಲಾಟ ಪರ್ವಗೆ ಹೋಜು ಮಾಡಿಕೊಳ್ಳದೆ ಕಾಲ ಕಳಿತಿತ್ತು. ಶನಿವಾರ ಬಂದೇ ಬಿಡ್ತು ಏನು ಮಾಡೊದು ಅಂತ ಕಪ್ಪಲಾಟ ಕಂಗಾಲಾಗಿ ಕೂತಿದ್ದಾಗ ಒಂದು ಮೊಲ ಬಂತು. ಅದನ್ನು ಹಿಡ್ಕೊಂಡು ತಿನ್ನಬೇಕು ಅನ್ನೋದ್ರೊಳಗೆ ದೊಣ್ಣೇಹಳ್ಳಿ ಕಡೆಯಿಂದ ಒಂದು ಗಾಡಿ ಬರೋ ಸಪ್ಪಳ ಹಾಯಿತು. ಮೊಲನ ಹಿಡ್ಕೊಂಡು ಗುಡಿಯಿಂದಕ್ಕೆ ಹೋಯ್ತು. ಜಗಳೂರು ಸಾಬರು ನಾಯ್ಕನಟ್ಟಿ ಸಂತೆಗೆ ಉಪ್ಪು, ಮೆಣಸು, ಬೆಲ್ಲೆ, ಗೋದಿ ತುಂಬಿಕೊಂಡು ಹೋಗುತ್ತಿದ್ದರು. ದಾರಿ ಪಕ್ಕ ಗುಡಿ ಬಾವಿ ಅತ್ರ ನಿಲ್ಲಿಸಿ ನೀರು ಕುಡಿಯೋಕೆ ಹೋದ್ರು. ಇದೇ ಸಮಯ ಎಂದು ಕಪ್ಪಲಾಟ ಮೊಲಕ್ಕೆ ಹೇಳಿತು ' ನೀನು ನಂಗೆ ಸಾಯ ಮಾಡಿದರೆ ನಿನ್ನನ್ನು ಬಿಟ್ ಬಿಡ್ತೀನಿ ನಾವು ಇಬ್ರೂ ಸೇರಿ ಹನುಮಂತ್ರಾಯನ ಪರ್ವ ತೀರ್ಸೋಣ' ಅಂತ್ ಹೇಳಿ ಇಬ್ರೂ ಸೇರಿ ಸಾಬ್ರ ಗಾಡಿ ಹತ್ತಿ ಗೋದಿ, ಬೆಲ್ಲ ಕದ್ದು ಗುಡಿ ಹಿಂದೆ ತಂದು ಇಟ್ಟವು.

ಮುಸ್ಟೂರಿನ ಕುಂಬಾರು ಜಗಳೂರು ಸಂತೆಗೆ ಮಡಿಕೆ ಮಾರಲು ಹೊರಟಿದ್ರು. ಗುಡಿಬಳಿ ಬಂದಾಗ ಗಾಡಿ ನಿಲ್ಲಿಸಿ ಗಂಟೆ ಹೊಡೆದು ಕೈಮುಗಿಯೊದ್ರೊಳಗೆ ಕಪ್ಪಲಾಟ ಮತ್ತು ಮೊಲ ಮಡಿಕೆ ಹಾರಿಸಿಕೊಂಡು ಬಂದವು. ಎಲ್ಲ ಹೋಜು ಮಾಡಿಕೊಂಡು ಸಾಯಂಕಾಲ ಕಲ್ಲು ಹೂಡಿ ಬೆಂಕಿ ಇಟ್ಟು ಗೋದಿ ಹುಗ್ಗಿ ಮಾಡಿ ಹನುಮಂತರಾಯನಿಗೆ ಎಡೆ ಹಾಕಿದವು. ಮೊಲ ಕಪ್ಪಲಾಟಕ್ಕೆ ಬಾ ಮಾವ ಉಣ್ಣೋಣ ಅಂತು. ಕಪ್ಪಲಾಟ ನೀನು ಮೊದಲು ಉಣ್ಣು ಅಂತು. ಇಲ್ಲ ನೀನೇ ಮೊದಲು ಉಣ್ಣು ನಾನು ಬಡಿಸ್ತಿನಿ ಅಂತು ಮೊಲ. ರುಚಿಯಾದ ಗೋದಿ ಹುಗ್ಗಿನ ಚನ್ನಾಗಿ ಹೊಟ್ಟೆ ತುಂಬಾ ತಿಂದು ಬಿಡ್ತು ಕಪ್ಪಲಾಟ. ಮೊಲಕ್ಕೆ ಏನೂ ಉಳಿಯಲೇ ಇಲ್ಲ. ಆಗ ಕಪ್ಪಲಾಟ 'ಮೊಲರಾಯ ನೀನು ಮಡಿಕೆ ಹೊಳಗೆ ಇಳಿದು ತಳಕೆರೆದು ತಿನ್ನು ಅಂದಿತು. ಮೊಲ ಮಡಿಕೆಯೊಳಗೆ ಇಳಿತಿದ್ದಂಗೆ ಬಾಯಿ ಮುಚ್ಚಿ ಉರಿ ಇಟ್ಟಿತು. ಮೊಲ ತಗಿ ಮಾವ ಮೀಸೆ ಸುಡ್ತವೆ... ತಗಿ ಮಾವ ಬಾಲ ಸುಡ್ತತೆ ಅಂತ ಎಷ್ಟು ಕೂಗಿದ್ರೂ ಕಪ್ಪಲಾಟ ಮಡಿಕೆ ಬಾಯಿ ತಗಿಲಿಲ್ಲ. ಮೊಲ ಕಡೆಗೆ ಪ್ರಾಣ ಬಿಡ್ತು. ಇತ್ಲಾಗೆ ಊರಲ್ಲಿ ಅಣ್ಣತಮ್ಮ ಸುಖವಾಗಿದ್ರು.

5 comments:

ಹರೀಶ್ ಕೇರ said...

ಚಂದದ ಕತೆ, ಮಂಜುನಾಥ್.
ಎಷ್ಟು ದೇಸಿಯಾಗಿ, ಕಾವ್ಯಾತ್ಮಕವಾಗಿದೆ. ಇಂಥ ಕತೆಗಳು ಇನ್ನಷ್ಟು ಇದೆಯಾ ?
- ಹರೀಶ್ ಕೇರ

Anonymous said...

ಕನ್ನಡದ ಹೊಸ ಕಥೆಗಾರನೊಬ್ಬನ ಬರುವಿಕೆಯನ್ನು ಎಲ್ಲ ಸಹೃದಯರೂ ಕಾದು ಕುಳಿತಿದ್ದಾರೆ. ವೆಲ್ ಕಂ. ಒಳ್ಳೇ ಕಥೆ. ಚೆನ್ನಾಗಿ ಬರೆಯುವ ಕಲೆ ಸಿದ್ಧಿಸಲಿ. ಪ್ರಕಟಗೊಳ್ಳಲಿ.
ಬೇದ್ರೆ ಮಂಜುನಾಥ
http://bedrefoundation.blogspot.com

ಗೋವಿಂದ್ರಾಜ್ said...

Tumba chendada kathe manju...desi maatugau mattu aadu nudi, grameena sogadu kateya jeevala enisutte khusiyagutte.

Unknown said...

shivu heliddu
olle kategallannu innuondishtu haki sir,

Unknown said...

GUD ONE