Friday, September 19, 2008

ಯಾವುದು ಮತಾಂತರ, ಯಾರು ಮತಾಂತರಿ?



ಯಾವುದು ಮತಾಂತರ,

ಯಾರು ಮತಾಂತರಿ?

ತಮ್ಮ ಮುಖವನ್ನು ಕನ್ನಡಿಯಲ್ಲಿ

ನೋಡುವುದನ್ನು

ಮುಖ್ಯಮಂತ್ರಿ ಯಡಿಯೂರಪ್ಪ

ಬಿಟ್ಟಿರುವಂತೆ ಕಾಣುತ್ತದೆ.

12ನೆಯ ಶತಮಾನದಲ್ಲಿ

ಆದದ್ದು ಏನು ಎಂಬುದನ್ನು

ಯಡಿಯೂರಪ್ಪ ತಿಳಿದಿಲ್ಲವೆಂದು

ನಂಬುವುದು ಕಷ್ಟ.

ತಮ್ಮ ಜನ್ಮದ ಬೇರು

ಎಲ್ಲಿದೆ ಎನ್ನುವುದನ್ನು

ಅವರು ಮರೆಯಬಾರದಲ್ಲವೇ?

ವಿದ್ವಾಂಸ ಡಾ.ಎಂ. ಚಿದಾನಂದ ಮೂರ್ತಿಯವರನ್ನಾದರೂ

ಕೇಳಿ ತಿಳಿದುಕೊಳ್ಳಬಹುದು.

ಮೂರ್ತಿಯವರೂ ಒಮ್ಮೆ ತಮ್ಮ ಬೆನ್ನನ್ನು ನೋಡಿ ನಂತರ

ವಾಸ್ತವಾಂಶ ತಿಳಸಬಹದು!

- ಕೆ.ಎನ್. ರಾಮಮೂರ್ತಿ

(ಕೃಪೆ: ವಾಚಕರವಾಣಿ)

Wednesday, September 10, 2008

ಇದಪ್ಪಾ ವರಸೆ ಅಂದರೆ...



ಅದು ಜೋಗಿಯವರ ಎರಡು ಕೃತಿಗಳ ಬಿಡುಗಡೆ ಸಮಾರಂಭ. ಒಂದು ಯಾಮಿನಿ ಕಾದಂಬರಿ. ಮತ್ತೊಂದು ಕಥಾ ಸಂಕಲನ. ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅನಂತಮೂರ್ತಿ ಯವರು ಇತ್ತೀಚೆಗೆ ಬಿಡುಗಡೆಯಾದ ಕಪಿಲ್ ಸಿಬಲ್ ರವರ ಕವನ ಸಂಕಲನವನ್ನು ಯಾವುದೋ ಮಾತಿಗೆ ಉದಾಹರಿಸಿದರು. ಎಸ್ಎಮ್ಎಸ್ ನಲ್ಲಿ ಏನೋ ತೋಚಿದ್ದನ್ನ ಬರೆದು ಕವಿತೆ ಅಂತ ಪ್ರಿಂಟ್ ಮಾಡಿ ದೊಡ್ಡ ಹೊಟೇಲ್ ನಲ್ಲಿ ಬಿಡುಗಡೆ ಮಾಡಿದರು. ಆತ ಮಂತ್ರಿ ಎನ್ನೋ ಕಾರಣಕ್ಕೆ ಕೆಲ ಪತ್ರಿಕೆಗಳು ಮುಖಪುಟದಲ್ಲಿ ಪ್ರಕಟ ಮಾಡಿದವು ಎಂದು ಟೀಕಿಸಿದರು.

ಅವರ ಟೀಕೆಗೆ ಒಂದಿಷ್ಟು ಬೆಲೆ ಇದೆ. ಅದೇ ಕಾರ್ಯಕ್ರಮದ ಕೊನೆಯಲ್ಲಿ ಪತ್ರಕರ್ತ ರವಿ ಬೆಳಗೆರೆ ಮಾತಾಡ್ತಾ ಅನಂತಮೂರ್ತಿಯವರ ಅಭಿಪ್ರಾಯವನ್ನು ಒಪ್ಪುತ್ತಾ, ಮುಖಪುಟದಲ್ಲಿ ಸಿಬಲ್ ಕವನಸಂಕಲನದ ಬಗ್ಗೆ ಪ್ರಕಟಿಸಿದ ಪತ್ರಿಕೆಗಳ ಬಗ್ಗೆ ಕಿಡಿಕಾರುತ್ತಾ 'ಈ ಪತ್ರಕರ್ತರನ್ನೆಲ್ಲ ಮೆಟ್ಟಿನಾಗೆ ಹೊಡೀಬೇಕು' ಎಂದು ಫರ್ಮಾನು ಹೊರಡಿಸಿದರು!

ಮಾತು ಮುಂದುವರಿಸಿ ಬಬ್ಲೂ ಶ್ರೀವಾಸ್ತವ ಎಂಬ ರೌಡಿ ಕಂ ರಾಜಕಾರಣಿಯ ಬರಹಗಳನ್ನು ಉದಾಹರಿಸಿದರು. ಅದೇನೋ ಮಹಾಕೃತಿ ಎಂಬಂತೆ ಮತ್ತೊಬ್ಬರು ಇಂಗ್ಲಿಷ್ ಗೆ ಅನುವಾದಿಸಿದ್ದಾರೆ. ನಾನು ತರಿಸಿ ಓದಿದೆ. ಅದರಲ್ಲಿ ಏನೂ ಇಲ್ಲ. ಆ ಮನುಷ್ಯ ಭೂತಗ ಜಗತ್ತಿನೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾಗ ಇತರರೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆಗಳ ಸಂಗ್ರಹ ರೂಪ. ಅದೂ ಒಂದು ಕೃತಿಯೆ ಎಂದು ರವಿ ಮೂದಲಿಸಿದರು. ಇದಪ್ಪಾ ವರಸೆ ಅಂದರೆ. ಕಪಿಲ್ ಸಿಬಲ್ ಕವನ ಸಂಕಲನ ಸುದ್ದಿ ಮುಖಪುಟ್ಟಕೆ ಹಾಕ್ಕೊಂಡವರಿಗೆ ಮೆಟ್ಟಿನಾಗೆ ಹೊಡೆಯೋದೆ ಆದರೆ, ಪ್ರತಿ ವಾರ ಪತ್ರಿಕೆ ಮುಖಪುಟದಲ್ಲಿ ರೌಡಿಗಳನ್ನು, ಸರಣಿ ಹಂತಕರನ್ನ, ಪಾತಕಿ, ಪರಮ ಪಾಪಿಗಳನ್ನು ವಿಜೃಂಭಿಸೋರನ್ನ ಹೊಡೆಯೋಕೆ ಏನನಪ್ಪಾ ತರೋದು? ಪ್ರತಿರಾತ್ರಿ ಮಕ್ಕಳು ಚೆಂದಗೆ ಚಂದಮಾಮ ನೋಡ್ಕೋತಾ ನಿದ್ರಗೆ ಜಾರೋ ಹೊತ್ತಲ್ಲಿ ಅಸಡ್ಢಾಳ ದನಿಯೊಂದಿಗೆ ಇವತ್ತೊಂದು ಇಂಟರೆಸ್ಟಿಂಗ್ ಎಪಿಸೋಡ್ ತಂದಿದೀನಿ.. ಎನ್ನುತ್ತಾ ಪಾಪಿಗಳ ಲೋಕಕ್ಕೆ ಪ್ರೇಕ್ಷಕರನ್ನ ಕರೆದುಕೊಂಡು ಹೋಗುವವರನ್ನು ಹೊಡೆಯೋಕೆ ಏನನಪ್ಪಾ ತರೋದು? ಹೋಗಲಿ, ಕಪಿಲ್ ಸಿಬಲ್ ಕವನಗಳು, ಅವು ಜಾಳು ಜಾಳು ಎಸ್ಎಮ್ಎಸ್ ಗಳೇ ಇರಬಹುದು, ಪತ್ರಿಕೆ ಮುಖಪುಟದಲ್ಲಿ ಕಾಣಿಸಿಕೊಂಡರೆ ಯಾರ ಮನಸಿನಲ್ಲೂ ಕ್ರೌರ್ಯ ಹುಟ್ಟಲ್ಲ ಅನ್ನೋದಂತೂ ಸತ್ಯ. ಅಬ್ಬಬ್ಬಾ ಅಂದ್ರೆ, ಇವಯ್ಯಂಗೆ ಇಷ್ಟೊಂದು ಪ್ರಚಾರ ಅಗತ್ಯ ಇರಲಿಲ್ಲ ಅಂದ್ಕೋಬೋದು ಓದುಗ ದೊರೆ ಅಷ್ಟೆ.

ಅನಂತಮೂರ್ತಿಯವರು ಮಾತನಾಡಿದ್ದಕ್ಕೆ, ಅವರ ಅಭಿಪ್ರಾಯ ಮಂಡಿಸಿದ ರೀತಿಗೆ ಘನತೆ ಇದೆ. ಮುಖ್ಯವಾಗಿ ಅವರು ಬರಹಗಾರ. ಕಪಿಲ್ಸಿಬಲ್ ಪುಸ್ತಕಕ್ಕೆ ಸಿಕ್ಕಿರೋ ಪ್ರಚಾರದ ಬಗ್ಗೆ ಬೇಸರ ಇಟ್ಕೊಂಡು ಆ ಮಾತನಾಡಿದ್ದಾರೆ. ಅವರು ಅಭಿಪ್ರಾಯ ಮಂಡಿಸುವಾಗ ಎಲ್ಲಿಯೂ ಉದ್ವೇಗಕ್ಕೆ ಒಳಗಾಗಲಿಲ್ಲ. ಆದರೆ ರವಿ ಹಾಗಲ್ಲ. ಒಂದೇ ಮಾತಿಗೆ ಮೆಟ್ಟಿನಾಗೆ ಹೊಡೀಬೇಕು ಎನ್ನೋದಾದರೆ, ಆತನ ಮನಸ್ಥಿತಿ ಎಂಥದು? ತಾನು ಸದಾ ಬರೆಯುವ, ಸದಾ ಚಿಂತಿಸುವ ಹಾಗೂ ಆಗಾಗ ತೆರೆ ಮೇಲೆ ನಟಿಸುವ ಪಾತ್ರಗಳ ಪ್ರಭಾವ ಹೀಗೆ ಮಾತನಾಡಿಸಿತೆ? ರವಿಯ ಬರವಣಿಗೆ ಹಾಗೂ ಆತನ ಟಿವಿ ಕಾರ್ಯಕ್ರಮಗಳಿಗಾಗಿ ಯಾವುದರಿಂದಲೂ ಆತನನ್ನು ಹೊಡೆಯುವ ಮೂಲಕ ತಿರಸ್ಕಾರವನ್ನು ವ್ಯಕ್ತಪಡಿಸುವುದು ಹೇಗೆ ಸರಿ ಅಲ್ಲವೋ... ಹಾಗೆಯೇ ತನ್ನ ವೃತ್ತಿಬಾಂಧವರ ಬಗ್ಗೆ ತುಂಬಿದ ಸಭೆಯಲ್ಲಿ ಹೀಗೆ ಮಾತನಾಡುವುದೂ ತರವಲ್ಲ.

Monday, September 8, 2008

ಸಂಪೂರ್ಣ ಚಂದ್ರ ತೇಜಸ್ವಿ





'ಎದ್ದೇಳಿ ಎಚ್ಚರಗೊಳ್ಳಿ'
ಎಂದು ಸಂದಣಿಯಲ್ಲಿ ಅಬ್ಬರಿಸಿ ಕೂಗಿತೊಂದು ವಾಣಿ.

''ಬೆಚ್ಚಿ ಬೀಳುವಿರೇನು ಪೆಚ್ಚುಗಳಿರಾ!

ಹತ್ತಿಪ್ಪತ್ತು ವರುಷ ಸುಪ್ಪತ್ತಿಗೆಯ ಮೇಲೆ

ಸರಸ ಸಲ್ಲಾಪದಲಿ ಕಳೆದುದ್ದಾಯ್ತು ಕಾಲ.

ಕವಿವ ಕಾಳರಾತ್ರಿಯ ಕೋಳ

ಕಾಣದೇ ಮರುಳ"


"ಉತ್ತರದ ಗಡಿಯ ನೆತ್ತರಿನ ಹೊನಲ

ಬಿತ್ತರದ ರಣಕಹಳೆ ಹೊಯ್ಲುಗಳ

ಕಂಡು ಕೇಳದ ನೀವು; ಕೀಟಗಳಿರಾ

ಎದ್ದೇಳಿ ಎಚ್ಚರಗೊಳ್ಳಿ"


ಎಂದಂದು ಬಾನುಲಿಯಲ್ಲಿ ಗಟ್ಟಿ

ಚೆಕ್ಕಿಗೊಂದು ರುಜು ಹೆಟ್ಟಿ

ಮಲಗಿದನು ಕವಿಯು.

ಕಕ್ಕಾಬಿಕ್ಕಿಯಾಗಿ ರಾತ್ರಿಗೆ ಸರಿದಿತ್ತು ಬುವಿಯು.

-ಪೂಚಂತೇ




(ನಮ್ಮ ಕಾಲದ ಬಹುಮುಖ್ಯ ಬರಹಗಾರ ಪೂರ್ಣ ಚಂದ್ರ ತೇಜಸ್ವಿ. ಅವರು ಬರೆದ ಕಾದಂಬರಿ 'ಕರ್ವಾಲೋ'ಬಗ್ಗೆ ಮತ್ತೊಬ್ಬ ಬಹುಮುಖ್ಯ ಬರಹಗಾರ ಲಂಕೇಶ್ ಬರೆದ ವಿಮರ್ಶಾ ಪತ್ರ ಇಲ್ಲಿದೆ.)

ಪ್ರಿಯ ತೇಜಸ್ವಿ,

'ಕನ್ನಡದ ಉಟ್ಟು ಓರಾಟಗಾರ'ರ ಕೆಲಸದಿಂದಾಗಿ ನನ್ನ ಮೈಯಲ್ಲಿ ಸರಿಯಿಲ್ಲದೆ ನಿಮಗೆ ಈ ಕಾಗದ ಬರೆಯುವುದು ತಡವಾಯಿತು. (ಆಗತಾನೆ ವಾಟಾಳ್ ನಾಗರಾಜ್ ಕಡೆಯವರಿಂದ ಲಂಕೇಶ್ ಮೇಲೆ ಹಲ್ಲೆಯಾಗಿತ್ತು) ಹೊಡೆತದಿಂದಾಗಿ ಮೈಕೈ ನೋವಾಗಿ ಮಲಗಿದ್ದಾಗ ಕೂಡ ನನ್ನ ಕೋಣೆಯ ತುಂಬ ನಗೆ ಹಬ್ಬಿತ್ತು. ನನ್ನನ್ನು ನೋಡಿದವರು ಅಚ್ಚರಿ ಪಡುವ ರೀತಿಯಲ್ಲಿ ಗೆಲುವಾಗಿದ್ದೆ. ಇದಕ್ಕೆ ಕಾರಣ ನಿಮ್ಮ ಪುಸ್ತಕ 'ಕರ್ವಾಲೋ.'

ನಿಮ್ಮ ಈ 'ಕರ್ವಾಲೋ.' ಕಾದಂಬರಿಯ ಮೇಲೆ ಒಳ್ಳೆಯ ವಿಮರ್ಶಕರು ಒಳ್ಳೊಳ್ಳೆಯ ವಿಮರ್ಶೆ ಬರೆಯಲಿದ್ದಾರೆ ಎಂಬ ಬಗ್ಗೆ ಅನುಮಾನವಿಲ್ಲ. ನನಗೆ ಓದಿದೊಡನೆ ಅನ್ನಿಸಿದ್ದನ್ನು ಬರೆಯುತ್ತಿದ್ದೇನೆ. ನನ್ನ ಸಂತೋಷವನ್ನು ನಮ್ಮ ಓದುಗರೂ ಪಡೆಯಲೆಂಬ ಕಾರಣಕ್ಕೆ ಇದನ್ನು ಅಚ್ಚು ಮಾಡುತ್ತಿದ್ದೇನೆ.

ನಿಮ್ಮ ಕಾದಂಬರಿಯಲ್ಲಿ ತುಂಬ ಳ್ಳೆಯದೆಂದು ಹೊಳೆದದ್ದು ನಿಮ್ಮ ತಮಾಷೆ ಮತ್ತು ಈ ತಮಾಷೆಯ ಮೂಲಕವೇ ನೀವು ನಿಜವಾಗಿಸುವ ಮನುಷ್ಯರು.

ನಮ್ಮ ಈ ಕೊಳೆತು ಹೋಗಿರುವ ಸಮಾಜದಲ್ಲಿ ಎಲ್ಲೆಲ್ಲೋ ಇದ್ದು ತಮ್ಮ ಜೀವನ ಸಾಗಿಸುವ, ತಮ್ಮ ಕೈಲಾದ್ದು ಮಾಡುವ ಮಂದಣ್ಣ ಮತ್ತು ಕರ್ವಾಲೋಗಳು ನಿಮ್ಮ ತಮಾಷೆಯನ್ನು ತೂರಿ ನಮ್ಮ ಮನಸ್ಸು ಕಲಕುತ್ತಾರೆ.

ಒಂದು ಕಡೆ ಮಂದಣ್ಣನಿದ್ದಾನೆ. ಹುಳಹುಪ್ಪಟೆಗಳನ್ನು ಹುಡುಕುತ್ತ ಹಿಡಿಯುತ್ತ ಹೋಗುವ ಈತನ ಪ್ರಕಾರ ಈತನ ಜೀವನದ ಏಕ ಮಾತ್ರ ಗುರು 'ಮೇರೇಜ್' ಆಗುವುದು. ಎಲ್ಲೆರೆದುರು ಮದುವೆಯಾಗಿ ಫೋಟೋ ಹಿಡಿಸಿಕೊಂಡು ನಾಲ್ಕೈದು ಮಕ್ಕಳು ಮಾಡುವ ಸದುದ್ದೇಶ ಉಳ್ಳ ಈತ 'ಮೇರೇಜ್'ನಲ್ಲೇ ವಿಫಲ. ಹಳ್ಳಿಯ ಸಾಮಾನ್ಯ ಅಪಾಪೋಲಿಯಂತೆ ಕಾಣುವ ಈತನ ಸರಳ ಆಶೆಗಳು ಇವನ ಆಳದ ಮುಗ್ಧತೆಯನ್ನು ತೋರುತ್ತವೆ. ಈ ಮುಗ್ಧತೆಯೊಂದಿಗೇ ಈತನನ್ನು ಇವನಿಗೆ ಗೊತ್ತಿಲ್ಲದಂತೆಯೇ ಸೆಳೆಯುವ ಪ್ರಕೃತಿಯ ಬಗೆಗಿನ ಕುತೂಹಲ ಇದೆ. ಈ ಕುತೂಹಲದಿಂದಾಗಿ ಈತ ಅತ್ಯಂತ ಅಕಾಡೆಮಿಕ್ ಆಗಿ ಕಾಣುವ ಮಾನವತಾವಾದಿ ಕರ್ವಾಲೋ ಎಂಬ ಫ್ರೊಫೆಸರ್ ಗೆ ಗೆಳೆಯನಾಗಿದ್ದಾನೆ.

ಕರ್ವಾಲೋವನ್ನು ನೀವು ಚಿತ್ರಿಸಿರುವ ರೀತಿಯಲ್ಲಿ ನಿಮ್ಮ ಪ್ರತಿಭೆ ಚೆನ್ನಾಗಿ ಕಾಣುತ್ತದೆ. ಮಂಗಳೂರರು ಕಡೆಯ ಬಡ ಪಾದ್ರಿಯಂತಿರುವ ಈತ ನೀವು ಸಂಶಯದಿಂದ ನೋಡುವ ಮತ್ತು ನಿಮ್ಮ ಆಳದಲ್ಲಿರುವ ಸಂಶೋಧಕನಿಗೆ ಸಂಕೇತವಾಗಿದ್ದಾನೆ. ಈ ಕರ್ವಾಲೋ ಕೂಡ ಮಂದಣ್ಣನಂತೆ ಹುಳಹುಪ್ಪಟೆ ಪ್ರಾಣಿಗಳನ್ನು ಕಂಡು ಅಭ್ಯಾಸ ಮಾಡುವ ಮನುಷ್ಯ. ಈತನ ಶಿಸ್ತು ಜೀವನದ ಹುಚ್ಚು ಹೊಳೆಗೆ ಹಾಕಿದ ಅಣೆಕಟ್ಟಿನಂತಿದೆ. ಪ್ರಕೃತಿಯ ಲಕ್ಷೋಪಲಕ್ಷ ಜೀವಿಗಳ ಬಗ್ಗೆ ಕುತೂಹಲ ತೋರುತ್ತ ಮೇಲ್ನೋಟಕ್ಕೆ ಒಣಕಲು ಮನುಷ್ಯನಂತೆ ಕಾಣುವ ಈತನಲ್ಲಿ ಮಾನವೀಯತೆ ಇದೆ. ನಿಮ್ಮ ಮಂದಣ್ಣನ ಬಗೆಗಿನ ಹಾಸ್ಯದ ಹಿಂದೆ ಹರಿಯುವ ಪ್ರೀತಿಯಂತೆಯೇ ಈ ಕರ್ವಾಲೋನ ಶಿಸ್ತಿನ ಹಿಂದೆ ಹರಿಯುವ ಅದಮ್ಯ ಕುತೂಹಲ ನನ್ನನ್ನು ಹರ್ಷದಿಂದ ಅಲ್ಲಾಡಿಸಿದ ಅಂಶ.

ನನಗೆ ಈ ಕಾದಂಬರಿ ನಾಲ್ಕು ಮುಖ್ಯ ಕಾರಣಕ್ಕೆ ತುಂಬ ಚೆನ್ನಾಗಿದೆ. ಮೊದಲನೆಯದಾಗಿ ನೀವು ಬರೀ ಹಂಜಿಪುಟ್ಟಿ ಎಂಬಂಥ ಹಾಸ್ಯಶೈಲಿಯಲ್ಲಿ ಬರೆಯುತ್ತ, ರೇಗುತ್ತ, ತಡವರಿಸುತ್ತಾ ಮನುಷ್ಯರ ಜೀವನವನ್ನು ಚಿತ್ರಿಸುವ ಬಗೆ. ಲಕ್ಷ್ಮಣ, ಮಂದಣ್ಣ, ಕರಿಯಣ್ಣ, ಯಂಕ್ಟ ಮುಂತಾದವರು ನಿಮ್ಮ ಶೈಲಿಯ ಮೂಲಕ ಜೀವ ಪಡೆಯುತ್ತಾರೆ. ನಿಮ್ಮ ಭಾವನೆಯ ಏರಿಳಿತಗಳ ನಡುವೆ ಈ ಜನ ಎದ್ದು ಓಡಾಡತೊಡಗುತ್ತಾರೆ. ಕೋಟ್ಯಂತರ ವರ್ಷಗಳ ಹಿಂದಿನಿಂದ ಇರುವ ಪ್ರಾಣಿಗಳನ್ನು ಹುಡುಕುತ್ತ ನೀವು ನಿಮ್ಮ ಸುತ್ತಣ ವಿವಿಧ ಮಟ್ಟದ ಜನರ ಹಲಬಗೆಯ ವಿಕಾಸ ಅಥವಾ ವಿಕಾಸಗೊಳ್ಳದಿರುವಿಕೆಯನ್ನು ಚಿತ್ರಿಸುವುದು. ನೀವು ನೋಡುವ ವ್ಯಕ್ತಿಗಳ ರೂಪ ಈ ಕಾದಂಬರಿಯ ವರ್ಟಿಕಲ್ ಮತ್ತು ಹಾರಿಜಾಂಟಲ್ ಗುಣ ತೋರುತ್ತದೆ. ಇದು ಎರಡನೆಯ ಅಂಶ.

ಮೂರನೆಯದಾಗಿ ನೀವು ತೋರುವ ಪ್ರಜ್ಞೆಯ ವಿಸ್ತಾರ ಮತ್ತು ಸಂಶೋಧನೆಯ ಸಂಭ್ರಮ. ಹೊಟ್ಟೆಪಾಡಿಗೆ ಪ್ರಾಣಿಶಾಸ್ತ್ರ ಕಲಿತು 'ಸಂಶೋಧಿಸುವ' ಜನರು ಈ ನಿಮ್ಮ ಕಾದಂಬರಿಯ ಸಂದರ್ಭದಲ್ಲಿ ಹಾಸ್ಯಸ್ಪದ ಅನ್ನಿಸುತ್ತಾರೆ.

ಆಮೇಲೆ ನಮ್ಮಲ್ಲಿ ಕೇವಲ ಸೋಷಲಿಸ್ಟನೊಬ್ಬ ಮಾತ್ರ ವರ್ಣಿಸಬಲ್ಲಂಥ ಅನೇಕ ಜಾತಿ ಜನ, ವರ್ಗಗಳನ್ನು ತಿಳಿದುಕೊಂಡು ಚಿತ್ರಿಸುವ, ಅತ್ಯಂತ ತೀವ್ರ ಆಸಕ್ತಿ ಮತ್ತು ಪ್ರೇಮದಿಂದ ಮಾತ್ರ ಕೈಗೂಡುವ ಗ್ರಹಿಕೆ. ಈ ಜೇಬುಗಳ್ಳನೆನ್ನಿಸಿಕೊಂಡ ಸಾಬರ ಪ್ಯಾರ ಹೇಗೆ ನಿಮ್ಮ ಮಾನವೀಯತೆಯಲ್ಲಿ ಮಗುವಾಗಿ ಹೊಂದಿಹೋಗುತ್ತಾನೆ!

ಎಲ್ಲಕ್ಕಿಂತ ಮುಖ್ಯವಾಗಿ ಪ್ರಕೃತಿಯ ಬಗ್ಗೆ ನಿಮಗಿರುವ ನಿಲುವು. ಈ ಕಾದಂಬರಿಯ ನಾಯಕ ಕೆಲವೊಮ್ಮೆ ಬೇಸರಗೊಂಡು ತನ್ನ ತೋಟ ಮಾರಿ ಪೇಟೆ ಸೇರಲು ತೀರ್ಮಾನಿಸುತ್ತಾನೆ. ಆದರೆ ಈ ಪ್ರಕೃತಿ ಅವನನ್ನು ಬಿಡುವುದಿಲ್ಲ. ಮಂದಣ್ಣನೆಂಬ ಮನುಷ್ಯನ ಪ್ರಕೃತಿಯಿಂದ ಹಿಡಿದ ಹಾರುವ ಓತಿಕಾಟದ ಪ್ರಕೃತಿ ವಿಕಾಸದವರೆಗೆ ಈ ಅಪಾರ ಕುತೂಹಲ ಹಬ್ಬಿದೆ. ಕಾರಂತ, ಕುವೆಂಪು ತರುವಾಯ ಪ್ರಕೃತಿಯನ್ನು ಇಷ್ಟು ಆಳವಾಗಿ ಪ್ರೀತಿಸುವ ಮತ್ತು ಅದಕ್ಕೆ ತಕ್ಕ ಕಾರಣಗಳುಳ್ಳ ವ್ಯಕ್ತಿ ನೀವೇ ಎಂದು ಕಾಣುತ್ತದೆ. ಈ ಇಡೀ ಕಾದಂಬರಿ ಪ್ರಕೃತಿಯ ಅಗಾಧ ಕೌತುಕಕ್ಕೆ ಹಿಡಿದ ಕನ್ನಡಿಯಾಗಿದೆ.

ಮೇಲಿನ ಮಾತುಗಳನ್ನು ಕಷ್ಟಪಟ್ಟು ಬರೆಯುತ್ತಿದ್ದೇನೆ. ದಿನದಿನಕ್ಕೆ ನಮ್ಮ ಜನರ ಬದುಕು ಕ್ರೂರವೂ ಅರ್ಥಹೀನವೂ ಆಗುತ್ತಿದೆ. ನಮ್ಮ ಹಾಸ್ಯ, ಟೀಕೆಗಳನ್ನು ಮೀರಿದ ರಾಕ್ಷಸರ ಬೆಳವಣಿಗೆ ನಮ್ಮ ಎಲ್ಲ ಒಳ್ಳೆಯದಕ್ಕೆ ಸವಾಲಾಗುತ್ತಿದೆ. ನಮ್ಮ ಜನ ತಮ್ಮ ಹಳ್ಳಿ, ಪರಿಸರಕ್ಕೆ ಮೀರಿದ ದುಷ್ಟ ಶಕ್ತಿಗಳ ಗುಲಾಮರಾಗುತ್ತಿದ್ದಾರೆ. ಈ ಮಟ್ಟದಲ್ಲಿ ನೋಡಿದಾಗ ನಿಮ್ಮಂಥ ಬಹುಮುಖ್ಯ ಬರಹಗಾರರ ಲೇಖನಗಳು ಕೂಡ ಎಲ್ಲೋ ರೊಮ್ಯಾಂಟಿಕ್ ಅನ್ನಿಸುತ್ತಾ ಹೋತುತ್ತವೆ.

ಬೇಸರ ಪಡಬೇಡಿ. ಎಲ್ಲಾ ಸರಿಹೋದೀತು. ನಾನು ಕೂಡ ಕೆಲವೊಮ್ಮೆ ಈ ಮಂದಣ್ಣನಂತಿದ್ದರೆ ಎಷ್ಟು ಚೆನ್ನಾಗಿತ್ತು ಅಂದುಕೊಂಡಿದ್ದೇನೆ.

Friday, September 5, 2008

ಅಬಬ್ಬಾ! ಅಬ್ಬಿ...



ಅಬ್ಬಿ ಜಲಪಾತ
ಬೆಂಗಳೂರಿನಿಂದ ಮಡಿಕೇರಿ 260 ಕಿ.ಮೀ. ಮಡಿಕೇರಿಯಿಂದ ಅಬ್ಬಿ ಜಲಪಾತಕ್ಕೆ 7 ಕಿಲೋಮೀಟರ್.
ಚಿತ್ರದುರ್ಗದಿಂದಾದರೆ ಹೊಸದುರ್ಗ, ಅರಸೀಕೆರೆ, ಹಾಸನ, ಕುಶಾಲನಗರ ಮಾರ್ಗವಾಗಿ ಮಡಿಕೇರಿಗೆ 275 ಕಿ.ಮಿ.















ಹಾರಂಗಿ ಜಲಾಶಯ
ಕುಶಾಲನಗರದಿಂದ 9 ಕಿ.ಮೀ.
ಅಣೆಕಟ್ಟೆಯ ಕೆಲಸ ಪ್ರಾರಂಭದ ವರ್ಷ 1962, ಮುಗಿದ ವರ್ಷ 1982
ಅಣೆಕಟ್ಟೆಯ ಎತ್ತರ - 174 ಅಡಿ, ಉದ್ದ - 2775 ಅಡಿ.
ಜಲಾನಯನ ವಿಸ್ತೀರ್ಣ - 259 ಚದುರು ಕಿಲೋಮೀಟರ್. 1,60,000 ಎಕರೆಗಳಿಗೆ ನೀರುಣಿಸುತ್ತದೆ.
ಒಟ್ಟು ಮುಳುಗಡೆಯ ಪ್ರದೇಶ - 4717 ಎಕರೆ.





ಕಾವೇರಿ ನಿಸರ್ಗಧಾಮ
ಕುಶಾಲನಗರದಿಂದ 2 ಕಿ.ಮೀ.





ಬೈಲುಕುಪ್ಪೆ ಟಿಬೆಟ್ ನಿರಾಶ್ರಿತರ ತಾಣ
ಕುಶಾಲನಗರದಿಂದ 3 ಕಿ.ಮೀ.





Wednesday, August 27, 2008

ಚಿನ್ಮೂಲಾದ್ರಿ ಚಿತ್ರಗಳು

ಅತ್ತ ನೋಡೆ ಇತ್ತ ನೋಡೆ
ಚಿತ್ರಕಲ್ಲದುರ್ಗ ನೋಡೆ
ಹತ್ತಿ ನೋಡೆ ನಿಮ್ಮ ತವರೂರೋ
ಓ ನಿಲ್ಲಯ್ಯ ರಾಜ.


ಇದು ಗಾಳಿ ಗೋಪುರ


ಹಳೆಯ ಮುರುಘರಾಜೇಂದ್ರ ಮಠ


ಇದು ಕೋಟೆಯ ಮಧ್ಯ ಭಾಗ. ಎತ್ತರದ ದೀಪಸ್ತಂಭ ಮತ್ತು ಉಯ್ಯಾಲೆ
ಕಂಬವನ್ನೂ ಕಾಣಬಹುದು. ಬಲಭಾಗಕ್ಕೆ ಏಕನಾಥೇಶ್ವರಿ ದೇವಸ್ಥಾನವಿದೆ.


ಭದ್ರ ಕೊಟೆಯ ಒಂದು ಭಾಗ.


ಸಿದ್ಧಿವಿನಾಯಕ ದೇವಸ್ಥಾನ.


ಕೋಟೆಯ ಮೂರನೆ ಮುಖ್ಯದ್ವಾರ ಮುಂದೆ ಬಂದರೆ ಎದುರಾಗು ಮೆಟ್ಟಿಲುಗಳು


ಇದನ್ನು ಟೀಕಿನ ಬಾಗಿಲು ಎನ್ನುತ್ತಾರೆ. ಇರುವ ಏಳು
ಬಾಗಿಲುಗಳಲ್ಲಿ ಇದೇ ಸ್ವಲ್ಪ ಠಾಕುಟೀಕಾಗಿದೆ ಅನ್ನೋ ಕಾರಣಕ್ಕೆ.


ಇವೂ ಎರಡೂ ಗಾಳಿ ಗೋಪುರಗಳು..


ಮುರುಘಾಮಠದ ಮುಂದಿನ ಉಯ್ಯಾಲೆ ಕಂಬ


ಮುರುಘಾಮಠದ ಪಾರ್ಶ್ವ ನೋಟ.


ಟಂಕಸಾಲೆ.


ಎತ್ತರದ ನವಿಲು ಬಂದೆ ಮುಂದೆ ಕಾಣುವುದೇ ಗೋಪಾಲಸ್ವಾಮಿ ದೇವಸ್ಥಾನ.


ಇದು ಕೋಟೆ ಎತ್ತರದ ಸ್ಥಳಗಳಲ್ಲಿ ಒಂದು, ತುಪ್ಪದ ಕೊಳ.


ತುಪ್ಪದ ಕೊಳದ ಮೇಲಿರುವ ಮಂಟಪ.


ತುಪ್ಪದ ಕೊಳ ಮೇಲಿಂದ ಗೊಪಾಲಸ್ವಾಮಿ ದೇವಸ್ಥಾನದ ಒಂದು ನೋಟ.
Aperture : F/9, Speed : 1/125, Exposure mode : Manual


ಕೊಳದ ಮೇಲಿಂದ ಗಾಳಿ ಗೋಪುರ ಹಾಗೂ ಹಿಡಿಂಬೇಶ್ವರ ದೇವಸ್ಥಾನ..
Aperture : F/6.3, Speed : 1/50s, Exposure mode : Manual



ಮೇಲಿನ ಎಲ್ಲ ಫೋಟೋಗಳ Exposure value
Aperture : F/11
Shutter Speed : 1/400s
Exposure mode : Manual

(ಫೋಟೋ ಮೇಲೆ ಕ್ಲಿಕ್ಕಿಸಿ ದೊಡ್ಡ ಇಮೇಜ್ ನೋಡಬಹುದು)

Wednesday, August 20, 2008

ಫುಕುವೋಕಾ ಕೂಡ ಆಧುನಿಕ ಆಶ್ಚರ್ಯ ಮತ್ತು ನಿರ್ಲಕ್ಷ್ಯ



ನಿನ್ನೆ ರಾತ್ರಿ ಚಿತ್ರದುರ್ಗದ ಮಿತ್ರ ಮಂಜು ಯಳನಾಡು ಅವರಿಗೆ ಫೋನ್ ಮಾಡಿದಾಗ ತುಂಬಾ ಗರಮ್ ಆಗಿದ್ದರು. ಅವರಿಗೆ ಮಾಧ್ಯಮಗಳ ಬಗ್ಗೆ ರೇಜಿಗೆ ಬಂದಿತ್ತು. ಕಾರಣ ನಮ್ಮ ಕಾಲದ ಒಬ್ಬ ಮಹಾನ್ ಚೇತನ ಫುಕುವೋಕಾ ತೀರಿಕೊಂಡ ಸಮಾಚಾರವನ್ನು ನಾವು ತಿಳಿದುಕೊಳ್ಳಲು ನಾಲ್ಕು ದಿನಗಳೇ ಬೇಕಾಗಿದ್ದು. ಅವರನ್ನು ಸಮಾಧಾನ ಮಾಡಿ ಫುಕುವೋಕಾ ಬಗ್ಗೆ ನಮಗಿದ್ದ ಆಸಕ್ತಿ, ಅವರಿಂದ ಪ್ರೇರಿತರಾಗಿ ಮಾಡಿದ ಕೆಲಸಗಳ ಬಗ್ಗೆ ಮಾತನಾಡಿಕೊಂಡೆವು.

ಡಿಗ್ರಿ ಮೊದಲ ವರ್ಷದಲ್ಲಿರುವಾಗ ತೇಜಸ್ವಿಯವರ 'ಜುಗಾರಿ ಕ್ರಾಸ್' ಪಾತ್ರಗಳಾದ ಸುರೇಶ ಮತ್ತು ಗೌರಿಯರಂತೆ ನಾನೂ ಒಂದು ತೋಟ ಮಾಡಿ ಸ್ವಾವಲಂಬಿ ಕೃಷಿಕನಾಗಬೇಕೆಂದು ಕನಸು ಕಂಡಿದ್ದೆ. ಅದೇ ಸಮಯದಲ್ಲಿ ಫುಕುವೋಕಾರವರ 'ಒಂದು ಹುಲ್ಲಿನ ಕ್ರಾಂತಿ' ಓದುವ ಅವಕಾಶ ಸಿಕ್ಕಿತು. ಅವರ ಸಹಜ ಕೃಷಿಯಿಂದ ಎಷ್ಟು ಪ್ರಭಾವಿತನಾದೆನೆಂದರೆ ನಮ್ಮ ಜಮೀನಿನಲ್ಲೀಯೂ ಅದರ ಪ್ರಯೋಗ ಮಾಡಬೇಕೆಂದು ತೀರ್ಮಾನಿಸಿ ನನ್ನ ತಾತನವರಲ್ಲಿ ಆಸೆ ವ್ಯಕ್ತಪಡಿಸಿದೆ. ಅವರಾಗಲೇ ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿ, ಕೃಷಿಯಲ್ಲಿ ತೊಡಗಿಸಿಕೊಂಡು, ಸಾವಿರಾರು ರುಪಾಯಿಗಳ ಕಳೆದುಕೊಂಡು ಹತಾಶರಾಗಿದ್ದರು. ನನ್ನ ಆಸೆಯನ್ನು ಕೇಳಿ ಮತ್ತೂ ಕಂಗಾಲಾದರು. ಬೇಸಾಯದ ಕುರಿತು ಒಂದು ಗಾದೆ ಇದೆ 'ಬೇಸಾಯ ಅಂದ್ರೆ ನಾಸಾಯ, ನೀಸಾಯ, ಮನೆಮಂದಿಯೆಲ್ಲ ಸಾಯ' ಅಂತ. ನಿನ್ನ ಪ್ರಯೋಗ ಏನಿದ್ದರೂ ಓದಿನಲ್ಲಿ ಮಾಡು, ಇನ್ನೆಂದು ನೀನು ನಮ್ಮ ಹಳ್ಳಿಗೆ ಬರಬೇಡ ಎಂದು ನನ್ನನು ಗದರಿ ದುರ್ಗಕ್ಕೆ ಅಟ್ಟಿದ್ದರು. ಮೊಳಕೆಯಲ್ಲಿಯೇ ನನ್ನ ಸಹಜ ಕೃಷಿಯ ಭತ್ತ ಕಮರಿ ಹೋಯಿತು.

ಇವತ್ತು ವ್ಯವಸಾಯ ತುಂಬಾ ನಷ್ಟದ ವ್ಯವಹಾರ ಆಗಿದೆ. ನಾವು ರಾಸಾಯನಿಕ ಬಳಸಿ ಬಳಸಿ ಭೂಮಿ ಕಣ್ಣು ಮುಚ್ಚಿಕೊಂಡಿದೆ. ನಮ್ಮ ರೈತ ಕೂಡಾ ಕಣ್ಣು ಮುಚ್ಚಿಕೊಂಡಿದ್ದಾನೆ. ರಸಗೊಬ್ಬರ ಸಿಗುತ್ತಿಲ್ಲವೆಂದು ರೈತ ಬೀದಿಗಿಳಿದು ಗಲಾಟೆ ಮಾಡುತ್ತಿರುವ ಈ ಹೊತ್ತಿನಲ್ಲಿ ಫುಕುವೋಕಾ ತೀರಿಕೊಂಡಿದ್ದಾರೆ. ಫುಕುವೋಕಾ ಅವರ ನೈಸರ್ಗಿಕ ಕೃಷಿಯನ್ನು ಯಾವ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕೋ ತಿಳಿಯುತ್ತಿಲ್ಲ.

ಫೂಕುವೋಕಾ ಬಗ್ಗೆ ಲಂಕೇಶ್ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಪತ್ರಿಕೆಯಲ್ಲಿ ಬರೆದಿದ್ದರು. ಗಾಂಧಿ ತತ್ವ ಮತ್ತು ಫುಕುವೋಕಾರ ಜೀವನದ ಪ್ರಸ್ತುತತೆಯನ್ನು ವಿವರಿಸುವ ಆ ಲೇಖನದ ಒಂದಷ್ಟು ಭಾಗ ಇಲ್ಲಿದೆ.
ದೈತ್ಯ ನಾಗರಿಕತೆಯ ಎದುರು ನಿಂತು ಸರಳವಾಗಿ, ಸ್ಪಷ್ಟವಾಗಿ ಮಾತಾಡುವ ಫುಕುವೋಕಾನ ಎಲ್ಲ ಮಾತುಗಳಿಗೆ ಮಾತ್ರಿಕ ಶಕ್ತಿ ಬರುವುದು ಆತನ ಯಶಸ್ವಿಯಾದ ಕೃಷಿಕ ಕ್ರಿಯೆಯಿಂದ. ಆತ ಕೇವಲ ಹೇಳುವವನಲ್ಲ. ಮಾಡಿ ತೋರಿಸುವ ವ್ಯಕ್ತಿ. ಇಲ್ಲಿ ಒಂದು ಸೂಕ್ಷ್ಮವನ್ನು ಅರಿಯಬೇಕು. ಫುಕುವೋಕಾನ ಸೂಕ್ಷ್ಮಜ್ಞತೆ, ತಿಳಿವಳಿಕೆ, ತಾದತ್ಮ್ಯವಿಲ್ಲದೆ ಆತನ ಶೈಲಿಯ ಕೃಷಿಗಾಗಿ ಪ್ರಯತ್ನಿಸುವುದು ಕಷ್ಟ. ಹಕ್ಕಿ ತನ್ನ ವಂಶದ ಆರಂಭದ ದಿನಗಳಲ್ಲಿ ಸಾವಿರಾರು ವರ್ಷ ಪ್ರಯತ್ನಿಸಿ, ಸೋತು ಮತ್ತೆ ಮತ್ತೆ ಯತ್ನಿಸಿ ಗೂಡು ಕಟ್ಟುವ ಕಲೆಯನ್ನು ಕಲಿತಂತೆ ಫುಕುವೋಕಾ ಮೂವತ್ತು ವರ್ಷ ಮಣ್ಣಿನೊಂದಿಗೆ, ಸಸ್ಯದೊಂದಿಗೆ ಸಂಬಂಧ ಬೆಳೆಸಿ ತನ್ನ ಗದ್ದೆಯ, ತನ್ನ ವ್ಯಕ್ತಿತ್ವದ ಕೃಷಿ ಮಾಡಿಕೊಂಡ. ಹುಚ್ಚು ಆಧುನಿಕತೆಗೆ ಸವಾಲಾಗಬಲ್ಲ ನೈಸರ್ಗಿಕ ವಿಧಾನ ಕಂಡುಕೊಂಡ. ಫುಕುವೋಕಾನ ಸಾಧನೆಯ ಆಕರ್ಷಣೆ ಅದರ ಲಾಭಧಾಯಕ, ಆರೋಗ್ಯವಂತ ಗುಣದಲ್ಲಿದೆ. ಗಾಂಧೀಜಿ ಕನಸಿದ ಆರೋಗ್ಯವಂತ, ಸರಳ, ಕೃತ್ರಿಮವಿಲ್ಲದ ಪ್ರಜೆಯ ಋತುಮಾನಕ್ಕೆ ತಕ್ಕಂಥ ನಾಗರಿಕತೆಗಾಗಿ ಮನುಷ್ಯನ ಕ್ರಿಯೆಯ ಪುನರ್ರಚನೆಯನ್ನು ಬಯಸುತ್ತಾನೆ. ಗಾಂಧೀಜಿಯಂತೆಯೇ ಫುಕುವೋಕಾ ಕೂಡ ಆಧುನಿಕ ಆಶ್ಚರ್ಯ ಮತ್ತು ನಿರ್ಲಕ್ಷ್ಯಕ್ಕೆ ತುತ್ತಾಗುವ ಅಪಾಯವಿದೆ.

ಯಾಕೆಂದರೆ ಆಧುನಿಕ ಮನುಷ್ಯನ ವೈಜ್ಞಾನಿಕ ತಪ್ಪು ಹೆಜ್ಜೆ, ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಗೀಳು, ಕೃಷಿಯನ್ನು ಕೂಡ ಅಂತರಾಷ್ಟ್ರೀಯ ಶೋಷಣೆಯ ಭಾಗವಾಗಿಸಿರುವುದು ಎಲ್ಲರಿಗೆ ಸ್ಪಷ್ಟವಾಗಿ ಕಾಣುವುದು ಈ ಶತಮಾನದಲ್ಲಿ ಎಲ್ಲವೂ ವೇಗವಾಗಿ ದಾಳಿ ನಡೆಸಿದ್ದರಿಂದ. ಫುಕುವೋಕಾ, ಗಾಂಧೀಜಿಯ ಆದರ್ಶ ಮನುಷ್ಯನಂತೆ ಪ್ರಶಾಂತ, ಸರಳ, ನಿರಪೇಕ್ಷಿ ಮತ್ತು ಆರೋಗ್ಯವಂತ; ಆದರೆ ಸಾವಿರಾರು ವರ್ಷಗಳಿಂದ ಕೃಷಿ, ಪಾಕಶಾಸ್ತ್ರ, ವಸ್ತ್ರಾಲಂಕಾರದ ವೈವಿಧ್ಯಮಯ ವಾಂಛಲ್ಯಗಳಿಗೆ ಬಿದ್ದಿರುವಾತ ಮನುಷ್ಯ; ಪ್ರಕೃತಿಯನ್ನು ತನ್ನ ಮೂಗಿನ ನೇರಕ್ಕೆ ತಿದ್ದಲು ಯತ್ನಿಸಿದವನು ಈತ. ಅಷ್ಟೇ ಅಲ್ಲ, ಮಹಾಭಾರತದ ಧರ್ಮರಾಯ ಕೂಡ ಜೂಜಿನ ಮೋಜಿಗೆ ಶರಣಾಗಿ, ಕೃಷ್ಣ ರಾಜಕೀಯ ತಂತ್ರದ ನಿಷ್ಣಾತನಾಗಿ ನಾಗರಿಕತೆ ಪಡೆಯುವ ಚಿತ್ರವಿಚಿತ್ರ ಆಯಾಮಗಳನ್ನು ಪ್ರದರ್ಶಿಸಿ ಫುಕುವೋಕಾ, ಗಾಂಧೀಜಿಯ ತಣ್ಣನೆಯ ಮನುಷ್ಯನನ್ನು ಅಣಕಿಸುತ್ತಾರೆ. ವಿಕೃತಿ ಮನುಷ್ಯನ ಪ್ರಕೃತಿಯ ಅಂಗವಾಗಿಯೇ ಕೆಲಸ ಮಾಡುತ್ತ ಪೂರ್ಣವಾಗಿ ತೊಲಗಲು ನಿರಾಕರಿಸುತ್ತದೆ. ಸಿಟ್ಟು ನೈಸರ್ಗಿಕವೆನ್ನಿಸಿಕೊಂಡು ಕ್ರೌರ್ಯದೊಂದಿಗೆ ಮಿಲನಗೊಳ್ಳುವ ಅಪಾಯ ಸದಾ ಇರುತ್ತದೆ.

ಆದರೆ ಫುಕುವೋಕಾ ತನಗೆ ವೈಯಕ್ತಿಕವಾಗಿ ಅಗತ್ಯವೆಂದು ಆರಂಭಿಸಿದ ಅನ್ವೇಷಣೆ ನಾಗರಿಕತೆಯ ಅನಿವಾರ್ಯ ದ್ರವ್ಯವೆನಿಸುತ್ತದೆ. ಮನುಷ್ಯ ತನ್ನ ಐಲುಗಳ ನಡುವೆಯೂ ಕೈಚಾಚಿ ಪಡೆಯಬಲ್ಲ ನಿಧಿ ಫುಕುವೋಕಾನ ಕೃಷಿ ಮತ್ತು ತತ್ತ್ವದಲ್ಲಿದೆ.

Tuesday, August 19, 2008

ನಿಸರ್ಗ ಸಹಜ ಋಷಿ



"Natural farming is not just for growing crops,
it is for the cultivation and perfection of human beings"