Wednesday, December 17, 2008

ನಮ್ಮಜ್ಜಿ ಹೇಳಿದ ಕತೆಒಂದಾನೊಂದು ಕಾಲದಲ್ಲಿ, ಮೈಸೂರು ರಾಜ್ಯದ ಮುಸ್ಟೂರು ಎಂಬ ಹಳ್ಳಿಯಲ್ಲಿ ಇಬ್ಬರು ಅಣ್ಣ ತಂಮ್ಮಂದಿರಿದ್ದರು. ದೊಡ್ಡವನು ಸ್ವಾಮಿ ಸಣ್ಣವನು ಸುನಿ. ದೊಡ್ಡಣ್ಣ ಸ್ವಾಮಿ ಅವರ ತಾತನ ಹೊಲ ನೋಡಿಕೊಂಡು ಸುಖವಾಗಿದ್ದ. ತಮ್ಮ ದೊಡ್ಡವನಿಗಿಂತ ಜಾಣ ಪಟ್ಟಣ ದುರ್ಗದಲ್ಲಿ ಓದೋಕೋಗಿದ್ದ. ಅಣ್ಣ ಸ್ವಾಮಿ ಪ್ರತಿ ವರ್ಷದಂತೆ ಕಪ್ಲೆ ಗುಡಿಸಲು ಹೊಲ್ದಗೆ ಸೌತೆಕಾಯಿ ಹಾಕಿದ್ದ. ನೋಡ ನೋಡುತ್ತಾ ಬೀಜ ಗಿಡವಾಗಿ, ಗಿಡ ಬಳ್ಳಿಯಾಗಿ, ಬಳ್ಳಿ ಹೂಬಿಟ್ಟು, ಹೂ ಹೀಚಲೊಡದ್ವು. ದಿನವೆಲ್ಲ ಕಲ್ಲೊಲದಲ್ಲಿ ಸೇಂಗಾ ಕಳೆ ತೆಗೆದು, ಹೊತ್ತು ಮುಳುಗೋವತ್ತಿಗೆ ಸೌತೆ ಬಳ್ಳಿ ಕಾಯೋಕೆ ಅವರಜ್ಜಿ ಮಾಡಿಕೊಟ್ಟ ಜ್ವಾಳದ ಮುದ್ದೆ ಹುಣಸೆ ಚಿಗುರಿನ ಉದಕ ಬುತ್ತಿ ಕಟ್ಟಿಕೊಂಡು ಸ್ವಾಮಿ ದಿನಾಲು ಹೊಲ ಕಾಯೋಕೆ ಹೋಗ್ತಿದ್ದ.

ಒಂದಿನ ರಾತ್ರಿ ಮುದ್ದೆ ಉಂಡು ಕಂಬ್ಳಿ ಹೊದ್ಕೊಂಡು ಇನ್ನೇನು ಮಕ್ಕಬೇಕು ಅನ್ನೋ ಹೊತ್ಗೆ ಒಂದು ಬಲವಾದ ಕಪ್ಪಲಾಟ ಪಕ್ಕದ ಹುಣಿಸೇ ಮರದ್ ಕೆಳ್ಗೆ ಗುಟುರಾಕಿತು. ಸ್ವಾಮಿ ಗಡ ಗಡಾ ಅಂತ ನಡುಗೋಗಿಬಿಟ್ಟ. ಕಪ್ಪಲಾಟ ಘರ್ಜಿಸುತ್ತಾ ಕೇಳಿತು ಎಲ್ಲಿ ನಿಮ್ಮಜ್ಜ ಲಿಂಗಪ್ಪ ಎಲ್ಲಿ ನಿಮ್ಮಪ್ಪ ಮುಸ್ಟೂರ.. ನಾನು ದಿನಾಲು ಇದೇ ಹೊತ್ತಿಗೆ ಬರ್ತೀನಿ ನನ್ಗೆ ಕರಿಕಂಬ್ಳಿ ಗದ್ಗೆ ಹಾಸಿ, ನಾಲ್ಕು ಮೂಲಗೆ ನಾಲ್ಕು ಸೌತೆಕಾಯಿ ಇಡಬೇಕು ಅಂತ ಹೇಳಿತು. ಕಪ್ಪಲಾಟ ಸೌತೆಕಾಯಿನ ಕಟಕ್ಕನೆ ತಿಂದು ಪುಟುಕ್ಕನೆ ಸ್ವಾಮಿ ಬಾಯಲ್ಲಿ ಹೂಸು ಬಿಟ್ಟಿತು. ದಿನಾ ಕಪ್ಪಲಾಟ ಬರೋದು, ಸ್ವಾಮಿ ಕರಿಕಂಬ್ಳಿ ಗದ್ದುಗೆ ಹಾಸೋದು, ನಾಲ್ಕು ಮೂಲೆಗೆ ನಾಲ್ಕು ಸೌತೆಕಾಯಿ ಇಡೋದು ನಡೀತಾ ಇತ್ತು.

ಬರಬರುತ್ತ ಸ್ವಾಮಿ ಸಣ್ಣಗಾದ. ಮನೆಯಲ್ಲಿ ಅವರಜ್ಜಿ ಕೇಳಿದ್ರೆ ಏನೂ ಹೇಳ್ತಿರ್ಲಿಲ್ಲ. ಒಂದಿನ ಸುನಿ ದುರ್ಗದಿಂದ ಬ್ಯಾಸಿಗೆ ರಜಕ್ಕೆ ಊರಿಗೆ ಬಂದ. ಅಣ್ಣ ಸಣ್ಣಗಾಗಿದ್ದನ್ ನೋಡಿ ಗದರಿಸಿ ಕೇಳಿದ. ಆಗ ಸ್ವಾಮಿ ಬಾಯಿ ಬಿಟ್ಟ. ಸುನಿ, ಗುಡುಸ್ಲೊಲಕ್ಕೆ ಒಂದು ಕಪ್ಪಲಾಟ ಗಂಟು ಬಿದ್ದಿದೆ. ದಿನಾಲು ಸೌತೆಕಾಯಿ ತಿಂದು ನನ್ನ ಬಾಯಿಗೆ ಹೂಸು ಬಿಡುತ್ತೆ ಅಂತ ನಿಜ ಉಸುರಿದ. ತಮ್ಮಂಗೆ ಮೈಯಲ್ಲಾ ಉರ್ದೋಯ್ತು. ನಮ್ಮಣ್ಣನ ಕಾಡ್ತಿರೋ ಕಪ್ಪಲಾಟನ ಮಟ್ಟ ಹಾಕಬೇಕೂಂತ ತೀರ್ಮಾನ ಮಾಡ್ದ. ಅಣ್ಣ ನೀನು ಇವತ್ತು ಕಲ್ಲೊಲಕ್ಕೆ ಹೋಗು, ನಾನು ಸೌತೆಕಾಯಿ ಕಾಯೋಕೋಗ್ತಿನಿ ಅಂದ.

ಸಾಯಂಕಾಲ ಅವರಜ್ಜಿ ಕಟ್ಟಿಕೊಟ್ಟ ಬುತ್ತಿ ತಗೊಂಡು ಹೊಲಕ್ಕೆ ಹೋದ. ಜೊತೆಗೆ ಒಂದು ಚುಚ್ಗ ತಗಂಡು ಹೋದ. ಹೊತ್ತು ಮುಳುಗಿ ಕತ್ಲಾಗ್ತಾ ಬಂತು. ಚುಚ್ಗನ ಸರಿಯಾಗಿ ಬೆಂಕಿಯಲ್ಲಿ ಕೆಂಪಗೆ ಕಾಸಿಕೊಂಡ. ಹುಣಿಸೆ ಮರದ ಕೆಳಗೆ ಕಪ್ಪಲಾಟಕ್ಕಾಗಿ ಕಾದ್ಕೊಂಡು ಕುಂತ್ಗಂಡ. ಸರಿಯಾದ ಸಮಯಕ್ಕೆ ಕಪ್ಪಲಾಟ ಬಂತು. ಜೋರಾಗಿ ಘರ್ಜಿಸುತ್ತಾ 'ಸ್ವಾಮೀ.. ಕರಿಕಂಬ್ಳಿ ಗದ್ಗೆ ಹಾಸಿದಿಯೇನೋ?' 'ಹೂಂ ಸ್ವಾಮಿ...' 'ನಾಲ್ಕು ಮೂಲೆಗೆ ನಾಲ್ಕು ಸೌತೆಕಾಯಿ ಇಟ್ಟಿದಿಯೇನೋ...?' 'ಹೂಂ ಸ್ವಾಮಿ...' 'ಹಾ ಜಾಣ' ಅಂದು ಒಂದು ಸೌತೆ ಕಾಯಿ ತಿಂದು ಸುನಿ ಬಾಯಿಗೆ ಹೂಸು ಬಿಟ್ಟಿತು. ಕೆಟ್ಟು ವಾಸನೆ. ಸುನಿ ಸಹಿಸಿಕೊಂಡು ಇನ್ನೊಂದು ಸೌತೆಕಾಯಿತಿಂದು ಮತ್ತೆ ಹೂಸು ಬಿಡೋಕೆ ಬಂತು, ಸರಿಯಾಗಿ ಕಾಯಿಸಿದ ಚುಚ್ಗನ ಕಪ್ಪಲಾಟದ ಮುಕುಳಿಗೆ ಇಟ್ಟು ಬಿಟ್ಟ. ಕುಯ್ಯಯ್ಯೋ ಅಂತ ಕೂಗ್ತಾ ಗೂರ್ನಳ್ಳಿ ಗುಡಿಗೆ ಬಂತು. ಏನು ಮಾಡಿದರೂ ಚುಚ್ಗ ಉದುರುತ್ತಿಲ್ಲ. ಕಡೆಗೆ ಗೂರ್ನಳ್ಳಿ ಹನುಮಂತನಿಗೆ ಬೇಡ್ಕೊಂತು. 'ಸ್ವಾಮಿ ಹನುಂತರಾಯ.. ಈ ಕಾದಿರೋ ಚುಚ್ಗ ಉದುರಿದರೆ ಬರೋ ವಾರ ನಿನಗೆ ಪರ್ವ್ ಮಾಡ್ತಿನಿ ಅಂತ ಕೈ ಮುಕ್ಕೊಂತು. ಬರ್ನೆ ಚುಚ್ಗ ಕೆಳಗೆ ಬಿತ್ತು. ದೇವರೆ ಹಮನುಂತ ನೀನು ದೊಡ್ಡೋನು ಅಂತ ಕೈ ಮುಗಿದು. ಗೋಕಟ್ಟೆ ಕಡೆಗೆ ಹೋಯ್ತು.

ಆಯ್ತವಾರ ಆಯ್ತು, ಬೆಸ್ತವಾರ ಆಯ್ತು, ಕಪ್ಪಲಾಟ ಪರ್ವಗೆ ಹೋಜು ಮಾಡಿಕೊಳ್ಳದೆ ಕಾಲ ಕಳಿತಿತ್ತು. ಶನಿವಾರ ಬಂದೇ ಬಿಡ್ತು ಏನು ಮಾಡೊದು ಅಂತ ಕಪ್ಪಲಾಟ ಕಂಗಾಲಾಗಿ ಕೂತಿದ್ದಾಗ ಒಂದು ಮೊಲ ಬಂತು. ಅದನ್ನು ಹಿಡ್ಕೊಂಡು ತಿನ್ನಬೇಕು ಅನ್ನೋದ್ರೊಳಗೆ ದೊಣ್ಣೇಹಳ್ಳಿ ಕಡೆಯಿಂದ ಒಂದು ಗಾಡಿ ಬರೋ ಸಪ್ಪಳ ಹಾಯಿತು. ಮೊಲನ ಹಿಡ್ಕೊಂಡು ಗುಡಿಯಿಂದಕ್ಕೆ ಹೋಯ್ತು. ಜಗಳೂರು ಸಾಬರು ನಾಯ್ಕನಟ್ಟಿ ಸಂತೆಗೆ ಉಪ್ಪು, ಮೆಣಸು, ಬೆಲ್ಲೆ, ಗೋದಿ ತುಂಬಿಕೊಂಡು ಹೋಗುತ್ತಿದ್ದರು. ದಾರಿ ಪಕ್ಕ ಗುಡಿ ಬಾವಿ ಅತ್ರ ನಿಲ್ಲಿಸಿ ನೀರು ಕುಡಿಯೋಕೆ ಹೋದ್ರು. ಇದೇ ಸಮಯ ಎಂದು ಕಪ್ಪಲಾಟ ಮೊಲಕ್ಕೆ ಹೇಳಿತು ' ನೀನು ನಂಗೆ ಸಾಯ ಮಾಡಿದರೆ ನಿನ್ನನ್ನು ಬಿಟ್ ಬಿಡ್ತೀನಿ ನಾವು ಇಬ್ರೂ ಸೇರಿ ಹನುಮಂತ್ರಾಯನ ಪರ್ವ ತೀರ್ಸೋಣ' ಅಂತ್ ಹೇಳಿ ಇಬ್ರೂ ಸೇರಿ ಸಾಬ್ರ ಗಾಡಿ ಹತ್ತಿ ಗೋದಿ, ಬೆಲ್ಲ ಕದ್ದು ಗುಡಿ ಹಿಂದೆ ತಂದು ಇಟ್ಟವು.

ಮುಸ್ಟೂರಿನ ಕುಂಬಾರು ಜಗಳೂರು ಸಂತೆಗೆ ಮಡಿಕೆ ಮಾರಲು ಹೊರಟಿದ್ರು. ಗುಡಿಬಳಿ ಬಂದಾಗ ಗಾಡಿ ನಿಲ್ಲಿಸಿ ಗಂಟೆ ಹೊಡೆದು ಕೈಮುಗಿಯೊದ್ರೊಳಗೆ ಕಪ್ಪಲಾಟ ಮತ್ತು ಮೊಲ ಮಡಿಕೆ ಹಾರಿಸಿಕೊಂಡು ಬಂದವು. ಎಲ್ಲ ಹೋಜು ಮಾಡಿಕೊಂಡು ಸಾಯಂಕಾಲ ಕಲ್ಲು ಹೂಡಿ ಬೆಂಕಿ ಇಟ್ಟು ಗೋದಿ ಹುಗ್ಗಿ ಮಾಡಿ ಹನುಮಂತರಾಯನಿಗೆ ಎಡೆ ಹಾಕಿದವು. ಮೊಲ ಕಪ್ಪಲಾಟಕ್ಕೆ ಬಾ ಮಾವ ಉಣ್ಣೋಣ ಅಂತು. ಕಪ್ಪಲಾಟ ನೀನು ಮೊದಲು ಉಣ್ಣು ಅಂತು. ಇಲ್ಲ ನೀನೇ ಮೊದಲು ಉಣ್ಣು ನಾನು ಬಡಿಸ್ತಿನಿ ಅಂತು ಮೊಲ. ರುಚಿಯಾದ ಗೋದಿ ಹುಗ್ಗಿನ ಚನ್ನಾಗಿ ಹೊಟ್ಟೆ ತುಂಬಾ ತಿಂದು ಬಿಡ್ತು ಕಪ್ಪಲಾಟ. ಮೊಲಕ್ಕೆ ಏನೂ ಉಳಿಯಲೇ ಇಲ್ಲ. ಆಗ ಕಪ್ಪಲಾಟ 'ಮೊಲರಾಯ ನೀನು ಮಡಿಕೆ ಹೊಳಗೆ ಇಳಿದು ತಳಕೆರೆದು ತಿನ್ನು ಅಂದಿತು. ಮೊಲ ಮಡಿಕೆಯೊಳಗೆ ಇಳಿತಿದ್ದಂಗೆ ಬಾಯಿ ಮುಚ್ಚಿ ಉರಿ ಇಟ್ಟಿತು. ಮೊಲ ತಗಿ ಮಾವ ಮೀಸೆ ಸುಡ್ತವೆ... ತಗಿ ಮಾವ ಬಾಲ ಸುಡ್ತತೆ ಅಂತ ಎಷ್ಟು ಕೂಗಿದ್ರೂ ಕಪ್ಪಲಾಟ ಮಡಿಕೆ ಬಾಯಿ ತಗಿಲಿಲ್ಲ. ಮೊಲ ಕಡೆಗೆ ಪ್ರಾಣ ಬಿಡ್ತು. ಇತ್ಲಾಗೆ ಊರಲ್ಲಿ ಅಣ್ಣತಮ್ಮ ಸುಖವಾಗಿದ್ರು.

Wednesday, November 19, 2008

ನಾನು ಕಂಡ ಬರ್ಕ್ ವೈಟ್ರಾಷ್ಟ್ರೀಯ ಪುಸ್ತಕ ಸಪ್ತಾಹದ ಅಂಗವಾಗಿ ಕಳೆದ ಶನಿವಾರ ಮೇ ಫ್ಲವರ್ ಮೀಡಿಯಾ ಹೌಸ್ ನಲ್ಲಿ ಹಮ್ಮಿಕೊಂಡಿದ್ದ 'ಈ ಪುಸ್ತಕ ನಂಗಿಷ್ಟ…' ಕಾರ್ಯಕ್ರಮದಲ್ಲಿ ನನಗಿಷ್ಟವಾದ ಪುಸ್ತಕ 'ಬರ್ಕ್ ವೈಟ್ ಕಂಡ ಭಾರತ'ದ ಬಗ್ಗೆ ಮಾತನಾಡಿದ ಒಟ್ಟು ಸಾರಾಂಶ...

ರ್ಕ್ ವೈಟ್ ಇಪ್ಪತ್ತನೇ ಶತಮಾನದ ಅಗ್ರಗಣ್ಯ ಫೋಟೋ ಜರ್ನಲಿಸ್ಟ್. ನ್ಯೂಯಾರ್ಕ್ ನಗರದಲ್ಲಿ 1904ರಲ್ಲಿ ಜನನ. ಸಾಮಾನ್ಯ ಅಮೇರಿಕನ್ ಮಕ್ಕಳಂತೆ ಪ್ಲೇನ್ ಫೀಲ್ಡ್ ಹೈಸ್ಕೂಲ್ ನಲ್ಲಿ ಓದು ಮುಂದೆ 1927ರಲ್ಲಿ ಕ್ಲಿವ್ ಲ್ಯಾಂಡ್ ಗೆ ಹೋಗಿ ವಾಸ್ತುಶಿಲ್ಪ ಹಾಗೂ ಕೈಗಾರಿಕಾ ವಿಷಯಗಳಲ್ಲಿ ವಿಶೇಷ ಪರಿಣಿತಿ ಪಡೆಯುತ್ತಾಳೆ. ಅವಳಿಗೆ ಯಂತ್ರಪ್ರಪಂಚ ಹಾಗೂ ತಂತ್ರಜ್ಞಾನದ ಜಗತ್ತುಗಳು ಮೆಚ್ಚುಗೆಯ ವಿಷಯವಾಗಿದ್ದವು. ಯಂತ್ರಗಳದು ಕೃತ್ರಿಮತೆಯಿಲ್ಲದ ನಿರಾಭರಣ ಸೌಂದರ್ಯ ಎಂದು ಬರ್ಕ್ ವೈಟ್ ಬಣ್ಣಿಸುತ್ತಾಳೆ.

ಟೈಮ್ ಮತ್ತು ಲೈಫ್ ಮ್ಯಾಗಜೈನ್ ಗಳನ್ನು ಒಳಗೊಂಡ ಫಾರ್ಚೂನ್ ಎಂಬ ಹೊಸ ಪತ್ರಿಕಾ ಬಳಗದಲ್ಲಿ ಕೆಲಸಕ್ಕೆ ಸೇರುತ್ತಾಳೆ. ಮಧ್ಯಪ್ರಾಚ್ಯದ ಕ್ಷಾಮ ಪೀಡಿತ ಜನಗಳ ಬವಣೆ ಕುರಿತಂತೆ ಫಾರ್ಚೂನ್ ಪತ್ರಿಕೆಗಾಗಿ 'ದಿ ಡ್ರಾಟ್ ' ಎಂಬ ಒಂದು ಸಾಮಾಜಿಕ ಸಾಕ್ಷ್ಯಚಿತ್ರ ತಯಾರಿಸುತ್ತಾಳೆ. ಇದರಿಂದ ಆಕೆಯ ವೃತ್ತಿಜೀವನದ ದಿಕ್ಕೇ ಬದಲಾಯಿತು. ಫೋಟೊ ಜರ್ನಲಿಸಂಗೆಂದೇ ಲೈಫ್ ಮ್ಯಾಗಜೀನ್ ಆರಂಭಿಸಿದ ವಿಶೇಷ ವಿಭಾಗಕ್ಕಾಗಿ ಮೊಂಟಾನ ಅಣೆಕಟ್ಟು ಪ್ರಾಜೆಕ್ಟಿನ ಚಿತ್ರಗಳನ್ನು ತೆಗೆಯಲು ಹೋಗಿದ್ದ ಬರ್ಕ್ ವೈಟ್ ತನ್ನ ಸ್ವಂತ ಆಸಕ್ತಿಯಿಂದ ತೆಗೆದ ಗಡಿನಾಡಿನ ಊರುಗಳ ಬದುಕಿನ ಚಿತ್ರಗಳಾದ 'ಯು ಹ್ಯಾವ್ ಸೀನ್ ದೇರ್ ಫೇಸ್' ಎಂಬ ಹೆಸರಿನ ಚಿತ್ರ ಸಾಕ್ಷ್ಯಚಿತ್ರಗಳ ಪರಂಪರೆಯಲ್ಲಿ ಮೈಲಿಗಲ್ಲು ಸ್ಥಾಪಿಸಿತು. ನಂತರ ತನ್ನ ವೃತ್ತಿ ಬದುಕಿನ ಸಂಗಾತಿ ಕಾಲ್ಡ್ ವೆಲ್ ನನ್ನೇ ಮದುವೆಯಾಗುತ್ತಾಳೆ. ಪತಿಯ ಜೊತೆ ಸೇರಿ ಯುದ್ಧಪೂರ್ವ ಜಕೋಸ್ಲಾವಕಿಯ ಬಗ್ಗೆ 'The North of Denube' ಎಂಬ ಕೃತಿಯನ್ನು ನಂತರ 'Say, is this USA' ಎಂಬ ಕೃತಿಯನ್ನು ರಚಿಸಿದಳು.

ದ್ವಿತೀಯ ಮಹಾಯುದ್ದದ ಸಂದರ್ಭದಲ್ಲಿ, ಸಂಯುಕ್ತ ಸಂಸ್ಥಾನದ ವಾಯುಸೇನಾಬಲದ ಸಮರ ಬಾತ್ಮೀದಾರಳಾಗಿ ಬರ್ಕ್ ವೈಟ್ ಕೆಲಸ ಮಾಡಿದಳು. ಎಷ್ಟೋ ವೇಳೆ ಸೇನೆಯ ಜೊತೆ ನಿಂತು ಜರ್ಮನಿಯ ಕೊನೆಯ ದಿನಗಳನ್ನು ಚಿತ್ರಿಸಿದಳು. ನಾಜೀ ಕ್ಯಾಂಪ್ ಒಳಹೊಕ್ಕು ' The Living Dead of Buchenwald' ಎಂಬ ಕೃತಿ ರಿಚಿಸಿದಳು. ಇದಂತೂ ಛಾಯಾಗ್ರಹಣದ ಇತಿಹಾಸದ ಅಮರ ಕೃತಿ ಎನಿಸಿದೆ.

ಈಕೆ ಭಾರತಕ್ಕೂ ಬಂದಿದ್ದಳು. ಭಾರತವನ್ನು ಕಂಡು ಬರೆದಳು. ಭಾರತದ ಇತಿಹಾಸವನ್ನು ಅರಿಯಲು ಹೊರಡುವವರಿಗೆ ಈಕೆ ನಮಗೆ ಮುಖ್ಯವಾಗುತ್ತಾಳೆ. ಜರ್ಮನಿಯ ಜನಾಂಗೀಯ ಹಿಂಸೆಗಳನ್ನು ಹತ್ತಿರದಿಂದ ಕಂಡಂತೆ ಭಾರತ ವಿಭಜನೆ ಸಂದರ್ಭದಲ್ಲಿ ನಡೆದ ಹಿಂಸೆಗಳಿಗೂ ಆಕೆ ಸಾಕ್ಷಿಯಾಗುತ್ತಾಳೆ ಎಂಬ ಕಾರಣದಿಂದ. ಈಕೆ 1946ರಲ್ಲಿ ಲೈಫ್ ಪತ್ರಿಕೆಗಾಗಿ ಕೆಲಸ ಮಾಡಲು ಭಾರತಕ್ಕೆ ಬಂದವಳು. ಬರ್ಕ್ ವೈಟ್ ಭಾರತಕ್ಕೆ ಬಂದ ಸಂದರ್ಭದಲ್ಲಿ ಭಾರತ ಸ್ವತಂತ್ರವಾಗುವ ದಿನಗಳು ಸಮೀಪಿಸುತ್ತಿದ್ದವು. ಆದರೆ ಅವಿಭಜಿತವಾಗಿಯೇ ಸ್ವಾತಂತ್ರ್ಯವನ್ನು ಪಡೆಯುವ ಭಾರತದ ಕನಸು ನುಚ್ಚುನೂರಾಗಿತ್ತು. ಜನಸಾಮಾನ್ಯರ ಬದುಕು ಕೋಮುದುಳ್ಳುರಿಯಲ್ಲಿ ಬೇಯುತ್ತಿತ್ತು. ಈ ಸಂದರ್ಭದ ಅನೇಕ ಸಂಗತಿಗಳನ್ನು ಹತ್ತಿರದಿಂದ ಕಂಡವಳು.
ಕೋಮುಗಲಭೆಗಳು, ಬರಗಾಲಕ್ಕೆ ತುತ್ತಾದ ಜನರ ಬವಣೆಗಳು, ಚರ್ಮ ಹದ ಮಾಡುವ ಕಾರ್ಖಾನೆಗಳಲ್ಲಿ ದುಡಿಯುವ ಬಾಲಕಾರ್ಮಿಕರು, ಲೇವಾದೇವಿಗಾರರು, ರಾಜಮಹಾರಾಜರು ಹಾಗೂ ಕೈಗಾರಿಕೋದ್ಯಮಿಗಳ ವ್ಯಕ್ತಿತ್ವ ಧೋರಣೆಗಳು, ಆರ್.ಎಸ್.ಎಸ್ ಚಟುವಟಿಕೆಗಳು, ಗಾಂಧೀಜಿ, ಭಾರತದ ಸಾಂಸ್ಕೃತಿಕ ಪದ್ಧತಿಗಳು ಮುಂತಾದ ಅನೇಕ ಸಂಗತಿಗಳನ್ನು ಈ ಪುಸ್ತಕದಲ್ಲಿ ಬರ್ಕ್ ವೈಟ್ ದಾಖಲಿಸಿದ್ದಾಳೆ.

ನನಗೆ ಬರ್ಕ್ ವೈಟ್ ಕಂಡ ಭಾರತದಲ್ಲಿ ಪ್ರಮುಖವಾಗಿ ಮೂರು ವ್ಯಕ್ತಿತ್ವಗಳ ಬಗ್ಗೆ ಹೇಳಬೇಕೆನ್ನಿಸುತ್ತಿದೆ. ಒಂದು ಮಹಾತ್ಮಗಾಂಧಿ ಎರಡು ನೆಹರು, ಮೂರನೆಯದು ವ್ಯಕ್ತಿಯಲ್ಲದಿದ್ದರು ಸಾಮಾನ್ಯ ಭಾರತೀಯನ ಮನಸ್ಸುಗಳಲ್ಲಿ ವಿಭಿನ್ನ ಸಂಚಲನೆ ಮೂಡಿದ ಆರ್.ಎಸ್.ಎಸ್. ಬಗ್ಗೆ.

ಗಾಂಧಿ:
ಲೈಫ್ ಪತ್ರಿಕೆಗಾಗಿ ಮಹಾತ್ಮ ಗಾಂಧಿಯವರ ಒಂದು ಫೋಟೊಗಾಗಿ ಬಂದ ಬರ್ಕ್ ವೈಟ್ ಸಂಪೂರ್ಣವಾಗಿ ಗಾಂಧಿಯವರ ವ್ಯಕ್ತಿತ್ವಕ್ಕೆ ಮಾರು ಹೋಗುತ್ತಾಳೆ. ಪ್ರಜಾಪ್ರಭುತ್ವದ ಸಂದರ್ಭದಲ್ಲಿ ಗಾಂಧಿ ನಮಗೆ ಯಾಕೆ ಮಹತ್ವವಾಗುತ್ತಾರೆ ಎಂಬುದನ್ನು ಸ್ಪಷ್ಟವಾಗಿ ನಿರೂಪಿಸುತ್ತಾಳೆ. ಯಂತ್ರಗಳ ಬಗ್ಗೆ ಗಾಂಧಿಯವರಿಗಿದ್ದ ಧೋರಣೆಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಚರಕ ಮನುಷ್ಯನ ವ್ಯಕ್ತಿತ್ವದ ಮೇಲೆ ಮಾಡುವ ಪರಿಣಾಮಗಳ ಬಗ್ಗೆ ಈಕೆಗೆ ಬಲು ಗೌರವ. ಧರ್ಮ ಸಹಿಷ್ಣುತೆಯ ಬಗ್ಗೆ ಇಡೀ ದೇಶದಲ್ಲಿ ಅತ್ಯಂತ ಶಕ್ತಿಯುತವೂ ಸ್ಪಷ್ಟವೂ ಆಗಿದ್ದ ಏಕೈಕ ದನಿಯಾಗಿದ್ದವರು ಗಾಂಧಿ.

ನಮಗೆಲ್ಲ ಗಾಂಧಿಯವರ ಬಗ್ಗೆ ಇದ್ದ ಅನುಮಾನ ಹರಿಜನ ಮತ್ತು ಇತರ ಕಾರ್ಮಿಕ ಜನರು ದರಿದ್ರಾವಸ್ಥೆಯಲ್ಲಿ ಜೀವಿಸುತ್ತಿದ್ದರೂ ಅವರ ಸ್ಥಿತಿಗಳಿಗಳನ್ನು ಸರಿಪಡಿಸುವ ಕ್ರಮ ಕೈಗೊಳ್ಳುವಂತೆ ಪ್ರಚೋದನೆಯಾಗಲಿಲ್ಲ ಎಂಬುದು. ಇವಕ್ಕೆಲ್ಲ ಈ ಪುಸ್ತಕದಲ್ಲಿ ಸ್ಪಷ್ಟ ಉತ್ತರಗಳು ನಮಗೆ ಸಿಗುತ್ತವೆ. ಗಾಂಧಿಯವರಿಗೆ ಹೀಗಾದುದಕ್ಕೆ ಅವರಲ್ಲಿ ಆಳವಾಗಿ ಬೇರೂರಿದ್ದ ಮತ್ತು ಸ್ವಭಾವತಃ ಅವರಲ್ಲಿ ರೂಪುಗೊಂಡಿದ್ದ ದೃಷ್ಟಿಕೋನವೇ ಕಾರಣ. ಗಾಂಧಿಯವರು ಕೇವಲ ಬಿರ್ಲಾ ಅಥವಾ ಬಿರ್ಲಾಗಳು, ದಾಲ್ಮಿಯಾಗಳು, ಮಹಾರಾಜರುಗಳನ್ನು ಹಾಗೂ ಸಂಪತ್ತಿನ ಮಾಲೀಕರನ್ನು ರಕ್ಷಿಸ ಹೊರಟಿರಲಿಲ್ಲ. ಹಳೆಯ ವ್ಯವಸ್ಥೆಯನ್ನು ಸರಳವಾದ ಯಂತ್ರಪೂರ್ವ ಯುಗವನ್ನು ಹಾಗೇ ಕಾಪಾಡಿಕೊಳ್ಳುವುದು ಅವರ ಗುರಿಯಾಗಿತ್ತು. ಇದು ಬದಲಾಗುವುದು ಅವರಿಗೆ ಬೇಕಿರಲಿಲ್ಲ.

ಈ ಸಮಾಜವನ್ನು ಪುನರ್ರಚಿಸುವುದು ಗಾಂಧಿಯವರ ಗುರಿಯಾಗಿರಲಿಲ್ಲ. ಪ್ರತಿಯೊಂದು ಮಾನವ ಹೃದಯವನ್ನೂ ಪರಿವರ್ತಿಸುವುದು ಅವರ ಗುರಿಯಾಗಿತ್ತು. ಪ್ರತಿಯೊಬ್ಬ ಮನುಷ್ಯನ ಅಂತರಂಗದಲ್ಲಿಯ ಒಳ್ಳೆಯತನ ಈಚೆ ಬರುವಂತೆ ಮಾಡಿ, ಈ ಮೂಲಕ ಅಸ್ಪೃಶ್ಯತೆಯಂತಹ ನೀಚ ಪದ್ದತಿಗಳನ್ನು ತೊಲಗಿಸುವುದು ಅವರ ಉದ್ದೇಶವಾಗಿತ್ತು.

ನೆಹರೂ:
ಈಗಂತೂ ಜನ ಸಾಮಾನ್ಯರಲ್ಲಿ ನೆಹರೂ ಅವರನ್ನು ಕೆಟ್ಟದಾಗಿ ಚಿತ್ರಿಸುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಸರದಾರ್ ಪಟೇಲ್ ಅವರನ್ನು ದೇಶದ ಪ್ರಧಾನಿ ಮಾಡಬೇಕಿತ್ತು ಎಂಬುದು ಅವರ ತರ್ಕ. ನೆಹರೂ ಅವರನ್ನು ಪ್ರಧಾನಿ ಮಾಡಿದ ಗಾಂಧಿಯವರ ನಿರ್ಧಾರ ಎಷ್ಟು ಸಮಂಜಸವಾಗಿತ್ತು ಎಂಬುದು ಬರ್ಕ್ ವೈಟ್ ಸ್ಪಷ್ಟವಾಗಿ ವಿವರಿಸುತ್ತಾಳೆ.

ಸಾಮಾನ್ಯ ಮನುಷ್ಯರ ದೃಷ್ಟಿಯಲ್ಲಿ ಬಿರ್ಲಾ ಎಂದರೆ ಭಾರೀ ಕೈಗಾರಿಕೋದ್ಯಮದ ಪ್ರತೀಕ ಮತ್ತು ಪಟೇಲರು ಇದಕ್ಕೆ ವಕ್ತಾರ. ಜನಸಾಮಾನ್ಯರು ಪಟೇಲರನ್ನು ಶ್ರೀಮಂತರೊಂದಿಗೆ, ನೆಹರೂ ಅವರನ್ನು ಎಡಪಂಥೀಯ ಮನೋಭಾವದೊಂದಿಗೆ ಸಮೀಕರಿಸುತ್ತಿದ್ದರು. ಪಟೇಲರು ಕೈಗಾರಿಕೋದ್ಯಮಿಗಳ ಹಾಗೂ ಮಹಾರಾಜರುಗಳ ಪರವಾಗಿ ಮಾತನಾಡಿದರೆ ನೆಹರೂ ಸಾಮಾನ್ಯ ಮನುಷ್ಯನ ಹಕ್ಕುಗಳ ಬಗ್ಗೆ ಕಾಳಜಿ ವಹಿಸುತ್ತಿದ್ದರು. ಪಟೇಲ್ ಮತ್ತು ನೆಹರೂ ಅವರ ಧೋರಣೆಗಳಲ್ಲಿನ ಈ ಘರ್ಷಣೆ ಯಾವಾಗಲೂ ಕುದಿಯುತ್ತ ಸ್ಫೋಟಕ ಸ್ಥಿತಿಯಲ್ಲಿ ಇರುತ್ತಿತ್ತು. ಆದರೂ ಅದು ಎಂದೂ ಸ್ಫೋಟಗೊಳ್ಳಲಿಲ್ಲ.

ಗಾಂಧೀಜಿಯವರು ಕೋಮುಗಲಭೆಗಳಿಂದ ರೋಸಿ ಉಪವಾಸವೊಂದೇ ದಾರಿ ಎಂದು ತೀರ್ಮಾನಿಸಿದ ಸುದ್ದಿಯನ್ನು ಬರ್ಕ್ ವೈಟ್ ಅಮೇರಿಕಾಗೆ ಪ್ರಸಾರ ಮಾಡಬೇಕಿತ್ತು. ಗಾಂಧಿಯವರ ಉಪವಾಸದ ಮಹತ್ವವನ್ನು ಅಮೇರಿಕನ್ನರಿಗೆ ತಿಳಿಸಿ ಕೊಡುವುದು ಸುಲಭ ಸಾಧ್ಯವಾಗಿರಲಿಲ್ಲ. ಏಕೆಂದರೆ ಅಮೇರಿಕದಲ್ಲಿ ಈ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಬೇಕಾದ ಸಂವಾದಿ ಸನ್ನಿವೇಶವಿಲ್ಲ. ಭಾರತದಲ್ಲಿ ಜನರು ಬೇರೆ ಬೇರೆ ಕಾರಣಗಳಿಗಾಗಿ ಉಪವಾಸ ಮಾಡುತ್ತಾರೆ. ಸಾಲ ಕೊಟ್ಟವನು ಸಾಲಗಾರನಾಗಿರುವವನ ಮನೆಯ ಮುಂದೆ ಉಪವಾಸ ಮಾಡುತ್ತಾರೆ. ಮನಕರಗಿ ಸಾಲ ಹಿಂದಿರುಗಿಸುವ ಹಾಗೆ ಮಾಡುತ್ತಾರೆ. ಈ ಬಗ್ಗೆ ನೆಹರೂ ಅವರೊಂದಿಗೆ ಮಾತನಾಡಿದರೆ ಕೆಲಸ ಸುಲಭವಾಗಬಹುದು ಎಂದು ಬರ್ಕ್ ವೈಟ್ ಅನ್ನಿಸಿತು. ನೆಹರೂ ಆಲೋಚನಯ ರೀತಿ ಪಾಶ್ಚಾತ್ಯರು ಪೌರ್ವತ್ಯರನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗುವಂತಹ ಒಂದು ಸೇತುವೆಯನ್ನು ಕಲ್ಪಿಸಬಲ್ಲದು.

ಗಾಂಧಿಯವರ ಉಪವಾಸದ ಪರಿಣಾಮ ಯಾವ ರೀತಿಯದು ಎಂಬುದನ್ನು ವ್ಯಕ್ತಪಡಿಸುವುದಕ್ಕೆ ಅಗತ್ಯವಾದಷ್ಟು ಮಾಹಿತಿ ನೆಹರು ನೀಡುತ್ತಾರೆ. 'ತಮ್ಮನ್ನು ತಾವೇ ದಂಡಿಸಿಕೊಳ್ಳುವ ಕ್ರಿಯೆ ಭಾರತೀಯ ಮನಸ್ಸುಗಳ ಮೇಲೆ ಬಹಳ ಪ್ರಭಾವ ಬೀರುತ್ತದೆ. 'ತಮ್ಮನ್ನು ತಾವೇ' ಎಂಬ ಮಾತನ್ನು ನೆಹರೂ ವಿಶೇಷವಾಗಿ ಒತ್ತಿ ಹೇಳಿದರು. ಗಾಂಧಿ ಇತರ ಎಲ್ಲರಿಗಿಂತ ಭಿನ್ನವಾದ ಜನಸೇವಕ. ಭಾರತದಲ್ಲಿ ಜನರ ನಡುವೆ ಏಳುತ್ತಿರುವ ಅಡ್ಡಗೋಡೆಗಳು ಗಾಂಧಿಯವರಿಗೆ ಬಹಳ ದುಃಖ ಉಂಟು ಮಾಡಿವೆ. ಜನರ ಮನಸ್ಸನ್ನು ಪರಿವರ್ತಿಸಲು ಗಾಂಧಿ ಈ ಅಂತಿಮ ಕ್ರಮ ಕೈಗೊಂಡಿದ್ದಾರೆ. ಉಪವಾಸದಿಂದ ಎರಡು ರೀತಿಯ ಕೆಲಸಗಳಾಗುತ್ತವೆ. ಸಮಸ್ಯೆಯನ್ನು ಬೇಗ ಪರಿಹರಿಸಬೇಕು ಎಂದು ಒಂದು ತುರ್ತನ್ನು ಅದು ಉಂಟುಮಾಡುತ್ತದೆ. ಮತ್ತು ಜನರು ಹಳೆಯ ರೀತಿಯ ಆಲೋಚನೆಗಳನ್ನು ಬಿಟ್ಟು ಹೊಸ ರೀತಿ ಆಲೋಚಿಸುವಂತೆ ಮಾಡುತ್ತದೆ. ಅದು ಒಂದು ಅನೂಕೂಲಕರವಾದ ಮಾನಸಿಕ ಬದಲಾವಣೆಯನ್ನು ತರುತ್ತದೆ. ಈ ಬದಲಾವಣೆಯ ಪ್ರಯೋಜನವನ್ನು ಪಡೆದುಕೊಳ್ಳುವುದು ಇತರರಿಗೆ ಸೇರಿದ್ದು.

ಇದರಿಂದ ರಕ್ತಪಾತ ನಿಲ್ಲುವುದೇ? ಇಷ್ಟೆಲ್ಲ ದ್ವೇಷ ತಾಂಡವವಾಡುತ್ತಿರುವಾಗ ಎಂದು ಅನುಮಾನ ವ್ಯಕ್ತಪಡಿಸಿದಾಗ ನೆಹರೂ ಹೇಳುತ್ತಾರೆ 'ನಿಜಕ್ಕೂ ಈ ದ್ವೇಷದಲ್ಲಿ ಮುಳುಗಿ ಹೋಗಿರುವವರ ಮೇಲೆ ಇದು ಪರಿಣಾಮ ಬೀರುವುದಿಲ್ಲ. ಆದರೆ ಮಧ್ಯಮ ವರ್ಗದ ಮೇಲೆ ಇದು ಬಹಳ ಪ್ರಭಾವ ಬೀರುತ್ತದೆ.

ಆರ್.ಎಸ್.ಎಸ್.:
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಬರ್ಕ ವೈಟ್ ಹೀಗೆ ಹೇಳುತ್ತಾಳೆ, ಈ ಸಂಘಟನೆಯಲ್ಲಿ ಹೊಸದಾಗಿ ಸೇರಿಕೊಂಡಿದ್ದವರೆಲ್ಲ ಮುಖ್ಯವಾಗಿ ಆಫೀಸುಗಳ ಗುಮಾಸ್ತರು ಅಥವಾ ವ್ಯಾಪಾರಿ ಕುಟುಂಬಗಳಿಂದ ಬಂದ ಹುಡುಗರು. ದೈಹಿಕ ಬಲ, ಶಿಸ್ತನ್ನು ಬೆಳೆಸುವುದು ಈ ಸಂಘಟನೆಯ ಉದ್ದೇಶ ಎಂದು ಅವರು ಮೇಲೆ ಹೇಳಿಕೊಳ್ಳುತ್ತಿದ್ದರು. ಯಾವುದೇ ಖಾಲಿ ಜಾಗವಿರಲಿ ಅಲ್ಲಿ ಬೆಳಗಿನ ಹೊತ್ತು ಈ ಯುವಕರು ಗುಂಪು ಸೇರುತ್ತಿದ್ದರು. ಕವಾಯತು ಮಾಡುತ್ತಿದ್ದರು. ಭಾಗವಹಿಸಿದ ಪ್ರತಿಯೊಬ್ಬರಿಗೂ ಒಂದು ಲೋಟ ಹಾಲು ಸಿಗುತ್ತಿತ್ತು. ಇದು ಕಡಿಮೆ ಆದಾಯದ ಗುಂಪುಗಳಿಗೆ ಬಲವಾದ ಆಕರ್ಷಣೆಯಾಗಿತ್ತು. ಈ ಹಾಲಿನ ಖರ್ಚನ್ನು ಯಾರು ವಹಿಸಿಕೊಳ್ಳುತ್ತಾರೆ ಎಂಬುದು ಎಂದಿಗೂ ಬಹಿರಂಗವಾಗುತ್ತಿರಲಿಲ್ಲ. ಇದನ್ನು ಕೆಲವು ದೊಡ್ಡದೊಡ್ಡ ಕೈಗಾರಿಕೋದ್ಯಮಿಗಳು ಹಾಗೂ ಕೆಲವು ಮಹಾರಾಜರುಗಳು ಇದಕ್ಕೆ ಅನುಕೂಲ ಒದಗಿಸುತ್ತಿದ್ದಾರೆ ಎಂಬ ಸುದ್ದಿ ಇತ್ತು. ತಮ್ಮದು ರಾಜಕೀಯ ಸಂಘಟನೆಯಲ್ಲ ಎಂದು ಆರ್.ಎಸ್.ಎಸ್. ಹೇಳುತ್ತಿತ್ತು. ಆದರೂ ಈ ತರುಣರು ಕುಡಿಯುತ್ತಿದ್ದ ಹಾಲಿನೊಂದಿಗೆ ಜನಾಂಗೀಯ ಪ್ರಜ್ಞೆಯನ್ನು ಜಾಗೃತಗೊಳಿಸುವ ತಿಳುವಳಿಕೆಯೂ ಸಾಕಷ್ಟು ಒಳಸೇರುತ್ತಿತ್ತು. ಅವರ ರಹಸ್ಯ ಸಾಹಿತ್ಯದ ಕೆಲವು ಭಾಗಗಳನ್ನು ಓದುವ ಅವಕಾಶ ನನಗೆ ಸಿಕ್ಕಿತ್ತು. ಹಿಂದೂ ಪಾರಮ್ಯದ ಬಗ್ಗೆ ಅದರಲ್ಲಿದ್ದ ಪ್ರತಿಯೊಂದು ಸಾಲೂ ಸಹ, ಜರ್ಮನಿಯಲ್ಲಿ 30ರ ದಶಕದಲ್ಲಿ ತಲೆ ಎತ್ತಿದ ಜನಾಂಗೀಯವಾದವು, ತಮ್ಮದೇ ಶ್ರೇಷ್ಠ ಜನಾಂಗ, ಎಂದು ಹೇಗೆ ಅಲ್ಲಿನ ಜನರಿಗೆ ಬೋಧಿಸುತ್ತಿತ್ತೋ ಅದನ್ನೇ ನೆನಪಿಸುವಂತಿತ್ತು.

ಪ್ರಜಾಪ್ರಭುತ್ವದ ಧೋರಣೆಗಳು ಸರಿಯಾಗಿಲ್ಲ. ಮುಸ್ಲಿಮರನ್ನು ಹಿಂದೂ ರಾಷ್ಟ್ರದ ಸಂಪೂರ್ಣ ಅಧೀನದಲ್ಲಿರುವ ವಿದೇಶಿಯರು ಎಂದು ಪರಿಗಣಿಸಬೇಕು ಎಂಬ ಆರ್.ಎಸ್.ಎಸ್. ನಿಲುವು ನಂಬಿಕೆಗಳನ್ನು ನೋಡಿದಾಗ ಈ ಯುವ ಚಳುವಳಿಯು ಪಶ್ಚಿಮದ ಫ್ಯಾಸಿಸ್ಟ್ ಹಾಗೂ ಸರ್ವಾಧಿಕಾರಿ ಧೋರಣೆಯಂತೆಯೇ ಬೆಳೆಯುವ ಹಾಗೂ ಜ್ಯೂಗಳ ವಿರುದ್ಧ ನಾಜಿಗಳು ವರ್ತಿಸಿದಂತೆ ಇವರೂ ಕೂಡ ಅಲ್ಪಸಂಖ್ಯಾತರ ವಿರುದ್ಧ ವರ್ತಿಸುವ ಅಪಾಯ ಎದ್ದು ಕಾಣುತ್ತಿತ್ತು.

Thursday, November 6, 2008

ಮಡಿ ಬಟ್ಟೆ ಕವಿತೆಉಸ್ಸ್... ಉಸ್ಸ್...
ಲಯಬದ್ದ ಉಸಿರಾಟಕ್ಕೆ
ಎದೆಯ ಸೆರಗು ಇಷ್ಟಿಷ್ಟೇ-
ಅಷ್ಟೂ ಜಾರಿದೆ
ದಾರಿಹೋಕರ ಕಣ್ಣು ರುಚಿಗೆ
ಎದೆಯ ಸೀಳು ಸಿಕ್ಕಿದೆ!

ಉಪ್ಪ್... ಉಪ್ಪ್...
ಲಯಬದ್ದ ಹೊಗೆತಕ್ಕೆ
ಮರ್ಯಾದೆಯ ಒಳಲಂಗ
ಮೊಣಕಾಲ ದಾಟಿದೆ
ಕೈ ತುಂಬಾ ನಡೆದಿದೆ
ನೀರಿನ ಚೆಲ್ಲಾಟ !
ಬುಸ್ಬುಸ್ ನೊರೆಯೊಂದಿಗೆ
ಆಡಿದ ಸೋಪು
ಜಾರಿದೆ
ಅಂತೂ ಇಂತೂ
ಕೊಳೆಯೂ ಮಾಯವಾಗಿದೆ...!

ಬಿಗಿದು ಕಟ್ಟಿದ ತಂತಿ ಮೇಲೆ
ತೊಳೆದ ಬಟ್ಟೆಗಳು ಹಾರಾಡುತ್ತಿವೆ
ಅವುಗಳಿಗೆ
ಎಷ್ಟೊಂದು ಬಣ್ಣ, ಎಷ್ಟೊಂದು "ಮಡಿ"ಕೆ!

-ಪಿ. ಮಂಜುನಾಥ

Wednesday, November 5, 2008

ಆ ಜನತೆಗೆ ಸಾಷ್ಟಾಂಗ ನಮಸ್ಕಾರ


ಬಾರಕ್ ಹುಸೇನ್ ಒಬಾಮಾನನ್ನು ಗೆಲ್ಲಿಸಿ ಪ್ರಜಾಪ್ರಭುತ್ವದ ಬಲುದೊಡ್ಡ ವಿಜಯಕ್ಕೆ ಕಾರಣರಾದ ಅಮೇರಿಕದ ಜನತೆಗೆ ನಿಸಾರ್ ಬರೆದ ಅಮೇರಿಕ, ಅಮೇರಿಕ ಪದ್ಯ ಸಾಲುಗಳಿಂದ ನಮಿಸುತ್ತೇನೆ.
ನಿನ್ನ ಸಂಸ್ಕೃತಿಯನಾಗಸಕ್ಕೆತ್ತಿದಾಗೆಲ್ಲ
ನಿನ್ನವರ ಟೈ ಸೂಟು ಸ್ಕರ್ಟುಗಳನೊಂದೊಂದೆ ಕಳಚಿ, ನೆತ್ತರಿನಿಂದ
ಸ್ಪ್ಯಾನಿಶರ ಜರ್ಮನರ ಫೋರ್ಚುಗೀಸಾಂಗ್ಲ ನೀಗ್ರೋಗಳ
ಕಡಲ್ಗಳ್ಳ ಹಂತಕ ಹಾದರಗಿತ್ತಿಯರನೆತ್ತೆತ್ತಿ
ನಿನ್ನೆದುರು ನೂಕಿ ಪಕಪಕನೆ ನಗಬೇಕೆಂದಾಗ-
ಲಿಂಕನ್ ಕೆನಡಿ ಕಿಂಗರ ಚಹರೆಗಳ ಕಂಡು
ನುಡಿ ಎಡವಿ ಕೈಮುಗಿದು ಬೆಪ್ಪಗಾಗುತ್ತೇನೆ..

Sunday, November 2, 2008

ವಿಶ್ವಪ್ರಸಿದ್ಧ ಹಂಪಿ ಕಲ್ಲಿನ ರಥಕ್ಕೆ ಗೋಪುರವಿತ್ತು!

ಹೌದು ಇದು ಆಶ್ಚರ್ಯವೆನಿಸಿದರೂ ನಿಜ. ವಿಜಯನಗರ ಸಾಮ್ರಾಜ್ಯದಲ್ಲಿನ ಪ್ರಸಿದ್ಧ ದೊರೆ ಶ್ರೀಕೃಷ್ಣ ದೇವರಾಯನ ಆಳ್ವಿಕೆಯ ಕಾಲ ಸುಮಾರು 1520. ಇವನ ಆಳ್ವಿಕೆಯಲ್ಲಿಯೇ ವಿಜಯನಗರ ಉತ್ತುಂಗ ಸ್ಥಿತಿ ತಲುಪಿ, ಸುಂದರವಾದ ವಾಸ್ತು-ಶಿಲ್ಪಗಳು, ದೇಗುಲಗಳ ಕೆತ್ತನೆ ನಡೆದದ್ದು. ಆ ಸಂದರ್ಭದಲ್ಲೇ ಬೆಣಚುಕಲ್ಲಿನಿಂದ ನಿರ್ಮಾಣವಾದ ಈ ರಥಕ್ಕೆ ಚೆಂದಾದ ಗೋಪುರವೊಂದಿತ್ತು. ವಿಜಯನಗರ ಸಾಮ್ರಾಜ್ಯದ ವೈಭವೋಪೇತ ಜನಜೀವನದ ಬಗ್ಗೆ ಇತಿಹಾಸ ಸಂಶೋಧಕ ರಾಬರ್ಟ್ ಸೆವೆಲ್ ಬರೆದ 'ಎ ಫರ್ ಗಾಟನ್ ಎಂಪೈರ್' ಪುಸ್ತಕದಲ್ಲಿ ಹಂಪಿ ಕಲ್ಲಿನ ರಥದ ಬಗ್ಗೆ ವಿಸ್ತಾರವಾಗಿ ಬರೆದಿದ್ದು ಅದರ ಮೂಲಚಿತ್ರವನ್ನು ಕಣ್ಣೆದುರಿಗೆ ತೆರೆದಿಟ್ಟಿದ್ದಾರೆ.

ಈ ಚಿತ್ರವನ್ನು ನೋಡಿದರೆ ಇತಿಹಾಸದ ಗ್ರಹಿಕೆ ಮತ್ತು ನಮಗಿರುವ ಜ್ಞಾನದ ಬಗ್ಗೆ ಯೋಚನೆಗೆ ಅಚ್ಚುತ್ತದೆ. ರಾಬರ್ಟ್ ಸೆವೆಲ್ ಪುಸ್ತಕ ಪ್ರಕಟವಾದದ್ದು 1900ರಲ್ಲಿ. ಈ ಚಿತ್ರವನ್ನು ಸುಮಾರು ಒಂದು ಶತಮಾನದ ಹಿಂದೆ ತೆಗೆದದ್ದು. ಈ ನಡುವೆ 1986ರವರೆಗೆ ಅಂದರೆ ಯುನೆಸ್ಕೋ ವರ್ಲ್ಡ್ ಹೆರಿಟೆಜ್ ಸೈಟ್ ಎಂದು ಘೋಷಿಸುವವರೆಗೂ ಈ ಹಂಪಿಯಗತಿ ಹೇಗಿತ್ತು ಎಂಬುದನ್ನು ಊಹಿಸಬಹುದು. ಗೋಪುರವಿಲ್ಲದ ರಥದಂತೆ ಕಳೆದ ಐದುನೂರು ವರ್ಷಗಳಲ್ಲಿ ಅಲ್ಲಿ ಏನೇನಾಯಿತು ಎಂಬುದು ಅವರವರ ಊಹೆಗೆ ಬಿಟ್ಟದ್ದು. ಅಂದಹಾಗೆ ನವೆಂಬರ್ 3ರಿಂದ 5ರವರೆಗೆ 'ಹಂಪಿ ಉತ್ಸವ' ನಡೆಯುತ್ತಿದ್ದೆ ಅಲ್ಲಲ್ಲ 'ಗಣಿ ಉತ್ಸವ' ನಡೆಯುತ್ತಿದೆ.