Wednesday, November 19, 2008

ನಾನು ಕಂಡ ಬರ್ಕ್ ವೈಟ್



ರಾಷ್ಟ್ರೀಯ ಪುಸ್ತಕ ಸಪ್ತಾಹದ ಅಂಗವಾಗಿ ಕಳೆದ ಶನಿವಾರ ಮೇ ಫ್ಲವರ್ ಮೀಡಿಯಾ ಹೌಸ್ ನಲ್ಲಿ ಹಮ್ಮಿಕೊಂಡಿದ್ದ 'ಈ ಪುಸ್ತಕ ನಂಗಿಷ್ಟ…' ಕಾರ್ಯಕ್ರಮದಲ್ಲಿ ನನಗಿಷ್ಟವಾದ ಪುಸ್ತಕ 'ಬರ್ಕ್ ವೈಟ್ ಕಂಡ ಭಾರತ'ದ ಬಗ್ಗೆ ಮಾತನಾಡಿದ ಒಟ್ಟು ಸಾರಾಂಶ...

ರ್ಕ್ ವೈಟ್ ಇಪ್ಪತ್ತನೇ ಶತಮಾನದ ಅಗ್ರಗಣ್ಯ ಫೋಟೋ ಜರ್ನಲಿಸ್ಟ್. ನ್ಯೂಯಾರ್ಕ್ ನಗರದಲ್ಲಿ 1904ರಲ್ಲಿ ಜನನ. ಸಾಮಾನ್ಯ ಅಮೇರಿಕನ್ ಮಕ್ಕಳಂತೆ ಪ್ಲೇನ್ ಫೀಲ್ಡ್ ಹೈಸ್ಕೂಲ್ ನಲ್ಲಿ ಓದು ಮುಂದೆ 1927ರಲ್ಲಿ ಕ್ಲಿವ್ ಲ್ಯಾಂಡ್ ಗೆ ಹೋಗಿ ವಾಸ್ತುಶಿಲ್ಪ ಹಾಗೂ ಕೈಗಾರಿಕಾ ವಿಷಯಗಳಲ್ಲಿ ವಿಶೇಷ ಪರಿಣಿತಿ ಪಡೆಯುತ್ತಾಳೆ. ಅವಳಿಗೆ ಯಂತ್ರಪ್ರಪಂಚ ಹಾಗೂ ತಂತ್ರಜ್ಞಾನದ ಜಗತ್ತುಗಳು ಮೆಚ್ಚುಗೆಯ ವಿಷಯವಾಗಿದ್ದವು. ಯಂತ್ರಗಳದು ಕೃತ್ರಿಮತೆಯಿಲ್ಲದ ನಿರಾಭರಣ ಸೌಂದರ್ಯ ಎಂದು ಬರ್ಕ್ ವೈಟ್ ಬಣ್ಣಿಸುತ್ತಾಳೆ.

ಟೈಮ್ ಮತ್ತು ಲೈಫ್ ಮ್ಯಾಗಜೈನ್ ಗಳನ್ನು ಒಳಗೊಂಡ ಫಾರ್ಚೂನ್ ಎಂಬ ಹೊಸ ಪತ್ರಿಕಾ ಬಳಗದಲ್ಲಿ ಕೆಲಸಕ್ಕೆ ಸೇರುತ್ತಾಳೆ. ಮಧ್ಯಪ್ರಾಚ್ಯದ ಕ್ಷಾಮ ಪೀಡಿತ ಜನಗಳ ಬವಣೆ ಕುರಿತಂತೆ ಫಾರ್ಚೂನ್ ಪತ್ರಿಕೆಗಾಗಿ 'ದಿ ಡ್ರಾಟ್ ' ಎಂಬ ಒಂದು ಸಾಮಾಜಿಕ ಸಾಕ್ಷ್ಯಚಿತ್ರ ತಯಾರಿಸುತ್ತಾಳೆ. ಇದರಿಂದ ಆಕೆಯ ವೃತ್ತಿಜೀವನದ ದಿಕ್ಕೇ ಬದಲಾಯಿತು. ಫೋಟೊ ಜರ್ನಲಿಸಂಗೆಂದೇ ಲೈಫ್ ಮ್ಯಾಗಜೀನ್ ಆರಂಭಿಸಿದ ವಿಶೇಷ ವಿಭಾಗಕ್ಕಾಗಿ ಮೊಂಟಾನ ಅಣೆಕಟ್ಟು ಪ್ರಾಜೆಕ್ಟಿನ ಚಿತ್ರಗಳನ್ನು ತೆಗೆಯಲು ಹೋಗಿದ್ದ ಬರ್ಕ್ ವೈಟ್ ತನ್ನ ಸ್ವಂತ ಆಸಕ್ತಿಯಿಂದ ತೆಗೆದ ಗಡಿನಾಡಿನ ಊರುಗಳ ಬದುಕಿನ ಚಿತ್ರಗಳಾದ 'ಯು ಹ್ಯಾವ್ ಸೀನ್ ದೇರ್ ಫೇಸ್' ಎಂಬ ಹೆಸರಿನ ಚಿತ್ರ ಸಾಕ್ಷ್ಯಚಿತ್ರಗಳ ಪರಂಪರೆಯಲ್ಲಿ ಮೈಲಿಗಲ್ಲು ಸ್ಥಾಪಿಸಿತು. ನಂತರ ತನ್ನ ವೃತ್ತಿ ಬದುಕಿನ ಸಂಗಾತಿ ಕಾಲ್ಡ್ ವೆಲ್ ನನ್ನೇ ಮದುವೆಯಾಗುತ್ತಾಳೆ. ಪತಿಯ ಜೊತೆ ಸೇರಿ ಯುದ್ಧಪೂರ್ವ ಜಕೋಸ್ಲಾವಕಿಯ ಬಗ್ಗೆ 'The North of Denube' ಎಂಬ ಕೃತಿಯನ್ನು ನಂತರ 'Say, is this USA' ಎಂಬ ಕೃತಿಯನ್ನು ರಚಿಸಿದಳು.

ದ್ವಿತೀಯ ಮಹಾಯುದ್ದದ ಸಂದರ್ಭದಲ್ಲಿ, ಸಂಯುಕ್ತ ಸಂಸ್ಥಾನದ ವಾಯುಸೇನಾಬಲದ ಸಮರ ಬಾತ್ಮೀದಾರಳಾಗಿ ಬರ್ಕ್ ವೈಟ್ ಕೆಲಸ ಮಾಡಿದಳು. ಎಷ್ಟೋ ವೇಳೆ ಸೇನೆಯ ಜೊತೆ ನಿಂತು ಜರ್ಮನಿಯ ಕೊನೆಯ ದಿನಗಳನ್ನು ಚಿತ್ರಿಸಿದಳು. ನಾಜೀ ಕ್ಯಾಂಪ್ ಒಳಹೊಕ್ಕು ' The Living Dead of Buchenwald' ಎಂಬ ಕೃತಿ ರಿಚಿಸಿದಳು. ಇದಂತೂ ಛಾಯಾಗ್ರಹಣದ ಇತಿಹಾಸದ ಅಮರ ಕೃತಿ ಎನಿಸಿದೆ.

ಈಕೆ ಭಾರತಕ್ಕೂ ಬಂದಿದ್ದಳು. ಭಾರತವನ್ನು ಕಂಡು ಬರೆದಳು. ಭಾರತದ ಇತಿಹಾಸವನ್ನು ಅರಿಯಲು ಹೊರಡುವವರಿಗೆ ಈಕೆ ನಮಗೆ ಮುಖ್ಯವಾಗುತ್ತಾಳೆ. ಜರ್ಮನಿಯ ಜನಾಂಗೀಯ ಹಿಂಸೆಗಳನ್ನು ಹತ್ತಿರದಿಂದ ಕಂಡಂತೆ ಭಾರತ ವಿಭಜನೆ ಸಂದರ್ಭದಲ್ಲಿ ನಡೆದ ಹಿಂಸೆಗಳಿಗೂ ಆಕೆ ಸಾಕ್ಷಿಯಾಗುತ್ತಾಳೆ ಎಂಬ ಕಾರಣದಿಂದ. ಈಕೆ 1946ರಲ್ಲಿ ಲೈಫ್ ಪತ್ರಿಕೆಗಾಗಿ ಕೆಲಸ ಮಾಡಲು ಭಾರತಕ್ಕೆ ಬಂದವಳು. ಬರ್ಕ್ ವೈಟ್ ಭಾರತಕ್ಕೆ ಬಂದ ಸಂದರ್ಭದಲ್ಲಿ ಭಾರತ ಸ್ವತಂತ್ರವಾಗುವ ದಿನಗಳು ಸಮೀಪಿಸುತ್ತಿದ್ದವು. ಆದರೆ ಅವಿಭಜಿತವಾಗಿಯೇ ಸ್ವಾತಂತ್ರ್ಯವನ್ನು ಪಡೆಯುವ ಭಾರತದ ಕನಸು ನುಚ್ಚುನೂರಾಗಿತ್ತು. ಜನಸಾಮಾನ್ಯರ ಬದುಕು ಕೋಮುದುಳ್ಳುರಿಯಲ್ಲಿ ಬೇಯುತ್ತಿತ್ತು. ಈ ಸಂದರ್ಭದ ಅನೇಕ ಸಂಗತಿಗಳನ್ನು ಹತ್ತಿರದಿಂದ ಕಂಡವಳು.
ಕೋಮುಗಲಭೆಗಳು, ಬರಗಾಲಕ್ಕೆ ತುತ್ತಾದ ಜನರ ಬವಣೆಗಳು, ಚರ್ಮ ಹದ ಮಾಡುವ ಕಾರ್ಖಾನೆಗಳಲ್ಲಿ ದುಡಿಯುವ ಬಾಲಕಾರ್ಮಿಕರು, ಲೇವಾದೇವಿಗಾರರು, ರಾಜಮಹಾರಾಜರು ಹಾಗೂ ಕೈಗಾರಿಕೋದ್ಯಮಿಗಳ ವ್ಯಕ್ತಿತ್ವ ಧೋರಣೆಗಳು, ಆರ್.ಎಸ್.ಎಸ್ ಚಟುವಟಿಕೆಗಳು, ಗಾಂಧೀಜಿ, ಭಾರತದ ಸಾಂಸ್ಕೃತಿಕ ಪದ್ಧತಿಗಳು ಮುಂತಾದ ಅನೇಕ ಸಂಗತಿಗಳನ್ನು ಈ ಪುಸ್ತಕದಲ್ಲಿ ಬರ್ಕ್ ವೈಟ್ ದಾಖಲಿಸಿದ್ದಾಳೆ.

ನನಗೆ ಬರ್ಕ್ ವೈಟ್ ಕಂಡ ಭಾರತದಲ್ಲಿ ಪ್ರಮುಖವಾಗಿ ಮೂರು ವ್ಯಕ್ತಿತ್ವಗಳ ಬಗ್ಗೆ ಹೇಳಬೇಕೆನ್ನಿಸುತ್ತಿದೆ. ಒಂದು ಮಹಾತ್ಮಗಾಂಧಿ ಎರಡು ನೆಹರು, ಮೂರನೆಯದು ವ್ಯಕ್ತಿಯಲ್ಲದಿದ್ದರು ಸಾಮಾನ್ಯ ಭಾರತೀಯನ ಮನಸ್ಸುಗಳಲ್ಲಿ ವಿಭಿನ್ನ ಸಂಚಲನೆ ಮೂಡಿದ ಆರ್.ಎಸ್.ಎಸ್. ಬಗ್ಗೆ.

ಗಾಂಧಿ:
ಲೈಫ್ ಪತ್ರಿಕೆಗಾಗಿ ಮಹಾತ್ಮ ಗಾಂಧಿಯವರ ಒಂದು ಫೋಟೊಗಾಗಿ ಬಂದ ಬರ್ಕ್ ವೈಟ್ ಸಂಪೂರ್ಣವಾಗಿ ಗಾಂಧಿಯವರ ವ್ಯಕ್ತಿತ್ವಕ್ಕೆ ಮಾರು ಹೋಗುತ್ತಾಳೆ. ಪ್ರಜಾಪ್ರಭುತ್ವದ ಸಂದರ್ಭದಲ್ಲಿ ಗಾಂಧಿ ನಮಗೆ ಯಾಕೆ ಮಹತ್ವವಾಗುತ್ತಾರೆ ಎಂಬುದನ್ನು ಸ್ಪಷ್ಟವಾಗಿ ನಿರೂಪಿಸುತ್ತಾಳೆ. ಯಂತ್ರಗಳ ಬಗ್ಗೆ ಗಾಂಧಿಯವರಿಗಿದ್ದ ಧೋರಣೆಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಚರಕ ಮನುಷ್ಯನ ವ್ಯಕ್ತಿತ್ವದ ಮೇಲೆ ಮಾಡುವ ಪರಿಣಾಮಗಳ ಬಗ್ಗೆ ಈಕೆಗೆ ಬಲು ಗೌರವ. ಧರ್ಮ ಸಹಿಷ್ಣುತೆಯ ಬಗ್ಗೆ ಇಡೀ ದೇಶದಲ್ಲಿ ಅತ್ಯಂತ ಶಕ್ತಿಯುತವೂ ಸ್ಪಷ್ಟವೂ ಆಗಿದ್ದ ಏಕೈಕ ದನಿಯಾಗಿದ್ದವರು ಗಾಂಧಿ.

ನಮಗೆಲ್ಲ ಗಾಂಧಿಯವರ ಬಗ್ಗೆ ಇದ್ದ ಅನುಮಾನ ಹರಿಜನ ಮತ್ತು ಇತರ ಕಾರ್ಮಿಕ ಜನರು ದರಿದ್ರಾವಸ್ಥೆಯಲ್ಲಿ ಜೀವಿಸುತ್ತಿದ್ದರೂ ಅವರ ಸ್ಥಿತಿಗಳಿಗಳನ್ನು ಸರಿಪಡಿಸುವ ಕ್ರಮ ಕೈಗೊಳ್ಳುವಂತೆ ಪ್ರಚೋದನೆಯಾಗಲಿಲ್ಲ ಎಂಬುದು. ಇವಕ್ಕೆಲ್ಲ ಈ ಪುಸ್ತಕದಲ್ಲಿ ಸ್ಪಷ್ಟ ಉತ್ತರಗಳು ನಮಗೆ ಸಿಗುತ್ತವೆ. ಗಾಂಧಿಯವರಿಗೆ ಹೀಗಾದುದಕ್ಕೆ ಅವರಲ್ಲಿ ಆಳವಾಗಿ ಬೇರೂರಿದ್ದ ಮತ್ತು ಸ್ವಭಾವತಃ ಅವರಲ್ಲಿ ರೂಪುಗೊಂಡಿದ್ದ ದೃಷ್ಟಿಕೋನವೇ ಕಾರಣ. ಗಾಂಧಿಯವರು ಕೇವಲ ಬಿರ್ಲಾ ಅಥವಾ ಬಿರ್ಲಾಗಳು, ದಾಲ್ಮಿಯಾಗಳು, ಮಹಾರಾಜರುಗಳನ್ನು ಹಾಗೂ ಸಂಪತ್ತಿನ ಮಾಲೀಕರನ್ನು ರಕ್ಷಿಸ ಹೊರಟಿರಲಿಲ್ಲ. ಹಳೆಯ ವ್ಯವಸ್ಥೆಯನ್ನು ಸರಳವಾದ ಯಂತ್ರಪೂರ್ವ ಯುಗವನ್ನು ಹಾಗೇ ಕಾಪಾಡಿಕೊಳ್ಳುವುದು ಅವರ ಗುರಿಯಾಗಿತ್ತು. ಇದು ಬದಲಾಗುವುದು ಅವರಿಗೆ ಬೇಕಿರಲಿಲ್ಲ.

ಈ ಸಮಾಜವನ್ನು ಪುನರ್ರಚಿಸುವುದು ಗಾಂಧಿಯವರ ಗುರಿಯಾಗಿರಲಿಲ್ಲ. ಪ್ರತಿಯೊಂದು ಮಾನವ ಹೃದಯವನ್ನೂ ಪರಿವರ್ತಿಸುವುದು ಅವರ ಗುರಿಯಾಗಿತ್ತು. ಪ್ರತಿಯೊಬ್ಬ ಮನುಷ್ಯನ ಅಂತರಂಗದಲ್ಲಿಯ ಒಳ್ಳೆಯತನ ಈಚೆ ಬರುವಂತೆ ಮಾಡಿ, ಈ ಮೂಲಕ ಅಸ್ಪೃಶ್ಯತೆಯಂತಹ ನೀಚ ಪದ್ದತಿಗಳನ್ನು ತೊಲಗಿಸುವುದು ಅವರ ಉದ್ದೇಶವಾಗಿತ್ತು.

ನೆಹರೂ:
ಈಗಂತೂ ಜನ ಸಾಮಾನ್ಯರಲ್ಲಿ ನೆಹರೂ ಅವರನ್ನು ಕೆಟ್ಟದಾಗಿ ಚಿತ್ರಿಸುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಸರದಾರ್ ಪಟೇಲ್ ಅವರನ್ನು ದೇಶದ ಪ್ರಧಾನಿ ಮಾಡಬೇಕಿತ್ತು ಎಂಬುದು ಅವರ ತರ್ಕ. ನೆಹರೂ ಅವರನ್ನು ಪ್ರಧಾನಿ ಮಾಡಿದ ಗಾಂಧಿಯವರ ನಿರ್ಧಾರ ಎಷ್ಟು ಸಮಂಜಸವಾಗಿತ್ತು ಎಂಬುದು ಬರ್ಕ್ ವೈಟ್ ಸ್ಪಷ್ಟವಾಗಿ ವಿವರಿಸುತ್ತಾಳೆ.

ಸಾಮಾನ್ಯ ಮನುಷ್ಯರ ದೃಷ್ಟಿಯಲ್ಲಿ ಬಿರ್ಲಾ ಎಂದರೆ ಭಾರೀ ಕೈಗಾರಿಕೋದ್ಯಮದ ಪ್ರತೀಕ ಮತ್ತು ಪಟೇಲರು ಇದಕ್ಕೆ ವಕ್ತಾರ. ಜನಸಾಮಾನ್ಯರು ಪಟೇಲರನ್ನು ಶ್ರೀಮಂತರೊಂದಿಗೆ, ನೆಹರೂ ಅವರನ್ನು ಎಡಪಂಥೀಯ ಮನೋಭಾವದೊಂದಿಗೆ ಸಮೀಕರಿಸುತ್ತಿದ್ದರು. ಪಟೇಲರು ಕೈಗಾರಿಕೋದ್ಯಮಿಗಳ ಹಾಗೂ ಮಹಾರಾಜರುಗಳ ಪರವಾಗಿ ಮಾತನಾಡಿದರೆ ನೆಹರೂ ಸಾಮಾನ್ಯ ಮನುಷ್ಯನ ಹಕ್ಕುಗಳ ಬಗ್ಗೆ ಕಾಳಜಿ ವಹಿಸುತ್ತಿದ್ದರು. ಪಟೇಲ್ ಮತ್ತು ನೆಹರೂ ಅವರ ಧೋರಣೆಗಳಲ್ಲಿನ ಈ ಘರ್ಷಣೆ ಯಾವಾಗಲೂ ಕುದಿಯುತ್ತ ಸ್ಫೋಟಕ ಸ್ಥಿತಿಯಲ್ಲಿ ಇರುತ್ತಿತ್ತು. ಆದರೂ ಅದು ಎಂದೂ ಸ್ಫೋಟಗೊಳ್ಳಲಿಲ್ಲ.

ಗಾಂಧೀಜಿಯವರು ಕೋಮುಗಲಭೆಗಳಿಂದ ರೋಸಿ ಉಪವಾಸವೊಂದೇ ದಾರಿ ಎಂದು ತೀರ್ಮಾನಿಸಿದ ಸುದ್ದಿಯನ್ನು ಬರ್ಕ್ ವೈಟ್ ಅಮೇರಿಕಾಗೆ ಪ್ರಸಾರ ಮಾಡಬೇಕಿತ್ತು. ಗಾಂಧಿಯವರ ಉಪವಾಸದ ಮಹತ್ವವನ್ನು ಅಮೇರಿಕನ್ನರಿಗೆ ತಿಳಿಸಿ ಕೊಡುವುದು ಸುಲಭ ಸಾಧ್ಯವಾಗಿರಲಿಲ್ಲ. ಏಕೆಂದರೆ ಅಮೇರಿಕದಲ್ಲಿ ಈ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಬೇಕಾದ ಸಂವಾದಿ ಸನ್ನಿವೇಶವಿಲ್ಲ. ಭಾರತದಲ್ಲಿ ಜನರು ಬೇರೆ ಬೇರೆ ಕಾರಣಗಳಿಗಾಗಿ ಉಪವಾಸ ಮಾಡುತ್ತಾರೆ. ಸಾಲ ಕೊಟ್ಟವನು ಸಾಲಗಾರನಾಗಿರುವವನ ಮನೆಯ ಮುಂದೆ ಉಪವಾಸ ಮಾಡುತ್ತಾರೆ. ಮನಕರಗಿ ಸಾಲ ಹಿಂದಿರುಗಿಸುವ ಹಾಗೆ ಮಾಡುತ್ತಾರೆ. ಈ ಬಗ್ಗೆ ನೆಹರೂ ಅವರೊಂದಿಗೆ ಮಾತನಾಡಿದರೆ ಕೆಲಸ ಸುಲಭವಾಗಬಹುದು ಎಂದು ಬರ್ಕ್ ವೈಟ್ ಅನ್ನಿಸಿತು. ನೆಹರೂ ಆಲೋಚನಯ ರೀತಿ ಪಾಶ್ಚಾತ್ಯರು ಪೌರ್ವತ್ಯರನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗುವಂತಹ ಒಂದು ಸೇತುವೆಯನ್ನು ಕಲ್ಪಿಸಬಲ್ಲದು.

ಗಾಂಧಿಯವರ ಉಪವಾಸದ ಪರಿಣಾಮ ಯಾವ ರೀತಿಯದು ಎಂಬುದನ್ನು ವ್ಯಕ್ತಪಡಿಸುವುದಕ್ಕೆ ಅಗತ್ಯವಾದಷ್ಟು ಮಾಹಿತಿ ನೆಹರು ನೀಡುತ್ತಾರೆ. 'ತಮ್ಮನ್ನು ತಾವೇ ದಂಡಿಸಿಕೊಳ್ಳುವ ಕ್ರಿಯೆ ಭಾರತೀಯ ಮನಸ್ಸುಗಳ ಮೇಲೆ ಬಹಳ ಪ್ರಭಾವ ಬೀರುತ್ತದೆ. 'ತಮ್ಮನ್ನು ತಾವೇ' ಎಂಬ ಮಾತನ್ನು ನೆಹರೂ ವಿಶೇಷವಾಗಿ ಒತ್ತಿ ಹೇಳಿದರು. ಗಾಂಧಿ ಇತರ ಎಲ್ಲರಿಗಿಂತ ಭಿನ್ನವಾದ ಜನಸೇವಕ. ಭಾರತದಲ್ಲಿ ಜನರ ನಡುವೆ ಏಳುತ್ತಿರುವ ಅಡ್ಡಗೋಡೆಗಳು ಗಾಂಧಿಯವರಿಗೆ ಬಹಳ ದುಃಖ ಉಂಟು ಮಾಡಿವೆ. ಜನರ ಮನಸ್ಸನ್ನು ಪರಿವರ್ತಿಸಲು ಗಾಂಧಿ ಈ ಅಂತಿಮ ಕ್ರಮ ಕೈಗೊಂಡಿದ್ದಾರೆ. ಉಪವಾಸದಿಂದ ಎರಡು ರೀತಿಯ ಕೆಲಸಗಳಾಗುತ್ತವೆ. ಸಮಸ್ಯೆಯನ್ನು ಬೇಗ ಪರಿಹರಿಸಬೇಕು ಎಂದು ಒಂದು ತುರ್ತನ್ನು ಅದು ಉಂಟುಮಾಡುತ್ತದೆ. ಮತ್ತು ಜನರು ಹಳೆಯ ರೀತಿಯ ಆಲೋಚನೆಗಳನ್ನು ಬಿಟ್ಟು ಹೊಸ ರೀತಿ ಆಲೋಚಿಸುವಂತೆ ಮಾಡುತ್ತದೆ. ಅದು ಒಂದು ಅನೂಕೂಲಕರವಾದ ಮಾನಸಿಕ ಬದಲಾವಣೆಯನ್ನು ತರುತ್ತದೆ. ಈ ಬದಲಾವಣೆಯ ಪ್ರಯೋಜನವನ್ನು ಪಡೆದುಕೊಳ್ಳುವುದು ಇತರರಿಗೆ ಸೇರಿದ್ದು.

ಇದರಿಂದ ರಕ್ತಪಾತ ನಿಲ್ಲುವುದೇ? ಇಷ್ಟೆಲ್ಲ ದ್ವೇಷ ತಾಂಡವವಾಡುತ್ತಿರುವಾಗ ಎಂದು ಅನುಮಾನ ವ್ಯಕ್ತಪಡಿಸಿದಾಗ ನೆಹರೂ ಹೇಳುತ್ತಾರೆ 'ನಿಜಕ್ಕೂ ಈ ದ್ವೇಷದಲ್ಲಿ ಮುಳುಗಿ ಹೋಗಿರುವವರ ಮೇಲೆ ಇದು ಪರಿಣಾಮ ಬೀರುವುದಿಲ್ಲ. ಆದರೆ ಮಧ್ಯಮ ವರ್ಗದ ಮೇಲೆ ಇದು ಬಹಳ ಪ್ರಭಾವ ಬೀರುತ್ತದೆ.

ಆರ್.ಎಸ್.ಎಸ್.:
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಬರ್ಕ ವೈಟ್ ಹೀಗೆ ಹೇಳುತ್ತಾಳೆ, ಈ ಸಂಘಟನೆಯಲ್ಲಿ ಹೊಸದಾಗಿ ಸೇರಿಕೊಂಡಿದ್ದವರೆಲ್ಲ ಮುಖ್ಯವಾಗಿ ಆಫೀಸುಗಳ ಗುಮಾಸ್ತರು ಅಥವಾ ವ್ಯಾಪಾರಿ ಕುಟುಂಬಗಳಿಂದ ಬಂದ ಹುಡುಗರು. ದೈಹಿಕ ಬಲ, ಶಿಸ್ತನ್ನು ಬೆಳೆಸುವುದು ಈ ಸಂಘಟನೆಯ ಉದ್ದೇಶ ಎಂದು ಅವರು ಮೇಲೆ ಹೇಳಿಕೊಳ್ಳುತ್ತಿದ್ದರು. ಯಾವುದೇ ಖಾಲಿ ಜಾಗವಿರಲಿ ಅಲ್ಲಿ ಬೆಳಗಿನ ಹೊತ್ತು ಈ ಯುವಕರು ಗುಂಪು ಸೇರುತ್ತಿದ್ದರು. ಕವಾಯತು ಮಾಡುತ್ತಿದ್ದರು. ಭಾಗವಹಿಸಿದ ಪ್ರತಿಯೊಬ್ಬರಿಗೂ ಒಂದು ಲೋಟ ಹಾಲು ಸಿಗುತ್ತಿತ್ತು. ಇದು ಕಡಿಮೆ ಆದಾಯದ ಗುಂಪುಗಳಿಗೆ ಬಲವಾದ ಆಕರ್ಷಣೆಯಾಗಿತ್ತು. ಈ ಹಾಲಿನ ಖರ್ಚನ್ನು ಯಾರು ವಹಿಸಿಕೊಳ್ಳುತ್ತಾರೆ ಎಂಬುದು ಎಂದಿಗೂ ಬಹಿರಂಗವಾಗುತ್ತಿರಲಿಲ್ಲ. ಇದನ್ನು ಕೆಲವು ದೊಡ್ಡದೊಡ್ಡ ಕೈಗಾರಿಕೋದ್ಯಮಿಗಳು ಹಾಗೂ ಕೆಲವು ಮಹಾರಾಜರುಗಳು ಇದಕ್ಕೆ ಅನುಕೂಲ ಒದಗಿಸುತ್ತಿದ್ದಾರೆ ಎಂಬ ಸುದ್ದಿ ಇತ್ತು. ತಮ್ಮದು ರಾಜಕೀಯ ಸಂಘಟನೆಯಲ್ಲ ಎಂದು ಆರ್.ಎಸ್.ಎಸ್. ಹೇಳುತ್ತಿತ್ತು. ಆದರೂ ಈ ತರುಣರು ಕುಡಿಯುತ್ತಿದ್ದ ಹಾಲಿನೊಂದಿಗೆ ಜನಾಂಗೀಯ ಪ್ರಜ್ಞೆಯನ್ನು ಜಾಗೃತಗೊಳಿಸುವ ತಿಳುವಳಿಕೆಯೂ ಸಾಕಷ್ಟು ಒಳಸೇರುತ್ತಿತ್ತು. ಅವರ ರಹಸ್ಯ ಸಾಹಿತ್ಯದ ಕೆಲವು ಭಾಗಗಳನ್ನು ಓದುವ ಅವಕಾಶ ನನಗೆ ಸಿಕ್ಕಿತ್ತು. ಹಿಂದೂ ಪಾರಮ್ಯದ ಬಗ್ಗೆ ಅದರಲ್ಲಿದ್ದ ಪ್ರತಿಯೊಂದು ಸಾಲೂ ಸಹ, ಜರ್ಮನಿಯಲ್ಲಿ 30ರ ದಶಕದಲ್ಲಿ ತಲೆ ಎತ್ತಿದ ಜನಾಂಗೀಯವಾದವು, ತಮ್ಮದೇ ಶ್ರೇಷ್ಠ ಜನಾಂಗ, ಎಂದು ಹೇಗೆ ಅಲ್ಲಿನ ಜನರಿಗೆ ಬೋಧಿಸುತ್ತಿತ್ತೋ ಅದನ್ನೇ ನೆನಪಿಸುವಂತಿತ್ತು.

ಪ್ರಜಾಪ್ರಭುತ್ವದ ಧೋರಣೆಗಳು ಸರಿಯಾಗಿಲ್ಲ. ಮುಸ್ಲಿಮರನ್ನು ಹಿಂದೂ ರಾಷ್ಟ್ರದ ಸಂಪೂರ್ಣ ಅಧೀನದಲ್ಲಿರುವ ವಿದೇಶಿಯರು ಎಂದು ಪರಿಗಣಿಸಬೇಕು ಎಂಬ ಆರ್.ಎಸ್.ಎಸ್. ನಿಲುವು ನಂಬಿಕೆಗಳನ್ನು ನೋಡಿದಾಗ ಈ ಯುವ ಚಳುವಳಿಯು ಪಶ್ಚಿಮದ ಫ್ಯಾಸಿಸ್ಟ್ ಹಾಗೂ ಸರ್ವಾಧಿಕಾರಿ ಧೋರಣೆಯಂತೆಯೇ ಬೆಳೆಯುವ ಹಾಗೂ ಜ್ಯೂಗಳ ವಿರುದ್ಧ ನಾಜಿಗಳು ವರ್ತಿಸಿದಂತೆ ಇವರೂ ಕೂಡ ಅಲ್ಪಸಂಖ್ಯಾತರ ವಿರುದ್ಧ ವರ್ತಿಸುವ ಅಪಾಯ ಎದ್ದು ಕಾಣುತ್ತಿತ್ತು.

2 comments:

Anonymous said...

ನಿಮ್ಮನ್ನು ಓದುತ್ತಿದ್ದೇನೆ. ಇಷ್ಟವಾಗುತ್ತಿದ್ದೀರಿ.
ನನ್ನ ಬ್ಲಾಗ್ ನಿನ್ನೆ ಶುರುಮಾಡಿದೆ.
ದಯವಿಟ್ಟು ಓದಿ
rishyshringa.blogspot.com

Anonymous said...

En swamy... Neevu saha buddi jeevi reeti pose kodoke suru madiddiri... bari RSS tegali bareyode nimmage ruchi annistide. RSS illadiddare neevella ivattu munji madiskondo athava henagalihe hodeso reetiya bili batte hoddu paddrino athava shilube silukisikonda christian reeti badukabekittu. nimmaa barahadalli ondu salanu muslim samajada bagge bareda haagill. hosa talia buddijeevigalu srusti yaguttiruvududakke neeve saakshi.