ಕೋಟ್ಯಂತರ ಜನಕ್ಕೆ ಹಣ ನೆಲ
ಹೊನ್ನು ಬೇಕು.
ಕೆಲವರಿಗೆ ಪ್ರೀತಿ
ಎಲ್ಲೋ ಕಾಣದ ಕೆಲವರಿಗೆ ಕುಗ್ರಾಮದ
ಹಿತ್ತಿಲೊಂದರ ಹೂವು
ಬಡಜೋಗಿಯ ಹಾಡು.
ಯಾವುದು ಮತಾಂತರ,
ಯಾರು ಮತಾಂತರಿ?
ತಮ್ಮ ಮುಖವನ್ನು ಕನ್ನಡಿಯಲ್ಲಿ
ನೋಡುವುದನ್ನು
ಮುಖ್ಯಮಂತ್ರಿ ಯಡಿಯೂರಪ್ಪ
ಬಿಟ್ಟಿರುವಂತೆ ಕಾಣುತ್ತದೆ.
12ನೆಯ ಶತಮಾನದಲ್ಲಿ
ಆದದ್ದು ಏನು ಎಂಬುದನ್ನು
ಯಡಿಯೂರಪ್ಪ ತಿಳಿದಿಲ್ಲವೆಂದು
ನಂಬುವುದು ಕಷ್ಟ.
ತಮ್ಮ ಜನ್ಮದ ಬೇರು
ಎಲ್ಲಿದೆ ಎನ್ನುವುದನ್ನು
ಅವರು ಮರೆಯಬಾರದಲ್ಲವೇ?
ವಿದ್ವಾಂಸ ಡಾ.ಎಂ. ಚಿದಾನಂದ ಮೂರ್ತಿಯವರನ್ನಾದರೂ
ಕೇಳಿ ತಿಳಿದುಕೊಳ್ಳಬಹುದು.
ಮೂರ್ತಿಯವರೂ ಒಮ್ಮೆ ತಮ್ಮ ಬೆನ್ನನ್ನು ನೋಡಿ ನಂತರ
ವಾಸ್ತವಾಂಶ ತಿಳಸಬಹದು!
- ಕೆ.ಎನ್. ರಾಮಮೂರ್ತಿ
(ಕೃಪೆ: ವಾಚಕರವಾಣಿ)
''ಬೆಚ್ಚಿ ಬೀಳುವಿರೇನು ಪೆಚ್ಚುಗಳಿರಾ!
ಹತ್ತಿಪ್ಪತ್ತು ವರುಷ ಸುಪ್ಪತ್ತಿಗೆಯ ಮೇಲೆ
ಸರಸ ಸಲ್ಲಾಪದಲಿ ಕಳೆದುದ್ದಾಯ್ತು ಕಾಲ.
ಕವಿವ ಕಾಳರಾತ್ರಿಯ ಕೋಳ
ಕಾಣದೇ ಮರುಳ"
"ಉತ್ತರದ ಗಡಿಯ ನೆತ್ತರಿನ ಹೊನಲ
ಬಿತ್ತರದ ರಣಕಹಳೆ ಹೊಯ್ಲುಗಳ
ಕಂಡು ಕೇಳದ ನೀವು; ಕೀಟಗಳಿರಾ
ಎದ್ದೇಳಿ ಎಚ್ಚರಗೊಳ್ಳಿ"
ಎಂದಂದು ಬಾನುಲಿಯಲ್ಲಿ ಗಟ್ಟಿ
ಚೆಕ್ಕಿಗೊಂದು ರುಜು ಹೆಟ್ಟಿ
ಮಲಗಿದನು ಕವಿಯು.
ಕಕ್ಕಾಬಿಕ್ಕಿಯಾಗಿ ರಾತ್ರಿಗೆ ಸರಿದಿತ್ತು ಬುವಿಯು.
-ಪೂಚಂತೇ
(ನಮ್ಮ ಕಾಲದ ಬಹುಮುಖ್ಯ ಬರಹಗಾರ ಪೂರ್ಣ ಚಂದ್ರ ತೇಜಸ್ವಿ. ಅವರು ಬರೆದ ಕಾದಂಬರಿ 'ಕರ್ವಾಲೋ'ಬಗ್ಗೆ ಮತ್ತೊಬ್ಬ ಬಹುಮುಖ್ಯ ಬರಹಗಾರ ಲಂಕೇಶ್ ಬರೆದ ವಿಮರ್ಶಾ ಪತ್ರ ಇಲ್ಲಿದೆ.)
ಪ್ರಿಯ ತೇಜಸ್ವಿ,
'ಕನ್ನಡದ ಉಟ್ಟು ಓರಾಟಗಾರ'ರ ಕೆಲಸದಿಂದಾಗಿ ನನ್ನ ಮೈಯಲ್ಲಿ ಸರಿಯಿಲ್ಲದೆ ನಿಮಗೆ ಈ ಕಾಗದ ಬರೆಯುವುದು ತಡವಾಯಿತು. (ಆಗತಾನೆ ವಾಟಾಳ್ ನಾಗರಾಜ್ ಕಡೆಯವರಿಂದ ಲಂಕೇಶ್ ಮೇಲೆ ಹಲ್ಲೆಯಾಗಿತ್ತು) ಹೊಡೆತದಿಂದಾಗಿ ಮೈಕೈ ನೋವಾಗಿ ಮಲಗಿದ್ದಾಗ ಕೂಡ ನನ್ನ ಕೋಣೆಯ ತುಂಬ ನಗೆ ಹಬ್ಬಿತ್ತು. ನನ್ನನ್ನು ನೋಡಿದವರು ಅಚ್ಚರಿ ಪಡುವ ರೀತಿಯಲ್ಲಿ ಗೆಲುವಾಗಿದ್ದೆ. ಇದಕ್ಕೆ ಕಾರಣ ನಿಮ್ಮ ಪುಸ್ತಕ 'ಕರ್ವಾಲೋ.'
ನಿಮ್ಮ ಈ 'ಕರ್ವಾಲೋ.' ಕಾದಂಬರಿಯ ಮೇಲೆ ಒಳ್ಳೆಯ ವಿಮರ್ಶಕರು ಒಳ್ಳೊಳ್ಳೆಯ ವಿಮರ್ಶೆ ಬರೆಯಲಿದ್ದಾರೆ ಎಂಬ ಬಗ್ಗೆ ಅನುಮಾನವಿಲ್ಲ. ನನಗೆ ಓದಿದೊಡನೆ ಅನ್ನಿಸಿದ್ದನ್ನು ಬರೆಯುತ್ತಿದ್ದೇನೆ. ನನ್ನ ಸಂತೋಷವನ್ನು ನಮ್ಮ ಓದುಗರೂ ಪಡೆಯಲೆಂಬ ಕಾರಣಕ್ಕೆ ಇದನ್ನು ಅಚ್ಚು ಮಾಡುತ್ತಿದ್ದೇನೆ.
ನಿಮ್ಮ ಕಾದಂಬರಿಯಲ್ಲಿ ತುಂಬ ಳ್ಳೆಯದೆಂದು ಹೊಳೆದದ್ದು ನಿಮ್ಮ ತಮಾಷೆ ಮತ್ತು ಈ ತಮಾಷೆಯ ಮೂಲಕವೇ ನೀವು ನಿಜವಾಗಿಸುವ ಮನುಷ್ಯರು.
ನಮ್ಮ ಈ ಕೊಳೆತು ಹೋಗಿರುವ ಸಮಾಜದಲ್ಲಿ ಎಲ್ಲೆಲ್ಲೋ ಇದ್ದು ತಮ್ಮ ಜೀವನ ಸಾಗಿಸುವ, ತಮ್ಮ ಕೈಲಾದ್ದು ಮಾಡುವ ಮಂದಣ್ಣ ಮತ್ತು ಕರ್ವಾಲೋಗಳು ನಿಮ್ಮ ತಮಾಷೆಯನ್ನು ತೂರಿ ನಮ್ಮ ಮನಸ್ಸು ಕಲಕುತ್ತಾರೆ.
ಒಂದು ಕಡೆ ಮಂದಣ್ಣನಿದ್ದಾನೆ. ಹುಳಹುಪ್ಪಟೆಗಳನ್ನು ಹುಡುಕುತ್ತ ಹಿಡಿಯುತ್ತ ಹೋಗುವ ಈತನ ಪ್ರಕಾರ ಈತನ ಜೀವನದ ಏಕ ಮಾತ್ರ ಗುರು 'ಮೇರೇಜ್' ಆಗುವುದು. ಎಲ್ಲೆರೆದುರು ಮದುವೆಯಾಗಿ ಫೋಟೋ ಹಿಡಿಸಿಕೊಂಡು ನಾಲ್ಕೈದು ಮಕ್ಕಳು ಮಾಡುವ ಸದುದ್ದೇಶ ಉಳ್ಳ ಈತ 'ಮೇರೇಜ್'ನಲ್ಲೇ ವಿಫಲ. ಹಳ್ಳಿಯ ಸಾಮಾನ್ಯ ಅಪಾಪೋಲಿಯಂತೆ ಕಾಣುವ ಈತನ ಸರಳ ಆಶೆಗಳು ಇವನ ಆಳದ ಮುಗ್ಧತೆಯನ್ನು ತೋರುತ್ತವೆ. ಈ ಮುಗ್ಧತೆಯೊಂದಿಗೇ ಈತನನ್ನು ಇವನಿಗೆ ಗೊತ್ತಿಲ್ಲದಂತೆಯೇ ಸೆಳೆಯುವ ಪ್ರಕೃತಿಯ ಬಗೆಗಿನ ಕುತೂಹಲ ಇದೆ. ಈ ಕುತೂಹಲದಿಂದಾಗಿ ಈತ ಅತ್ಯಂತ ಅಕಾಡೆಮಿಕ್ ಆಗಿ ಕಾಣುವ ಮಾನವತಾವಾದಿ ಕರ್ವಾಲೋ ಎಂಬ ಫ್ರೊಫೆಸರ್ ಗೆ ಗೆಳೆಯನಾಗಿದ್ದಾನೆ.
ಕರ್ವಾಲೋವನ್ನು ನೀವು ಚಿತ್ರಿಸಿರುವ ರೀತಿಯಲ್ಲಿ ನಿಮ್ಮ ಪ್ರತಿಭೆ ಚೆನ್ನಾಗಿ ಕಾಣುತ್ತದೆ. ಮಂಗಳೂರರು ಕಡೆಯ ಬಡ ಪಾದ್ರಿಯಂತಿರುವ ಈತ ನೀವು ಸಂಶಯದಿಂದ ನೋಡುವ ಮತ್ತು ನಿಮ್ಮ ಆಳದಲ್ಲಿರುವ ಸಂಶೋಧಕನಿಗೆ ಸಂಕೇತವಾಗಿದ್ದಾನೆ. ಈ ಕರ್ವಾಲೋ ಕೂಡ ಮಂದಣ್ಣನಂತೆ ಹುಳಹುಪ್ಪಟೆ ಪ್ರಾಣಿಗಳನ್ನು ಕಂಡು ಅಭ್ಯಾಸ ಮಾಡುವ ಮನುಷ್ಯ. ಈತನ ಶಿಸ್ತು ಜೀವನದ ಹುಚ್ಚು ಹೊಳೆಗೆ ಹಾಕಿದ ಅಣೆಕಟ್ಟಿನಂತಿದೆ. ಪ್ರಕೃತಿಯ ಲಕ್ಷೋಪಲಕ್ಷ ಜೀವಿಗಳ ಬಗ್ಗೆ ಕುತೂಹಲ ತೋರುತ್ತ ಮೇಲ್ನೋಟಕ್ಕೆ ಒಣಕಲು ಮನುಷ್ಯನಂತೆ ಕಾಣುವ ಈತನಲ್ಲಿ ಮಾನವೀಯತೆ ಇದೆ. ನಿಮ್ಮ ಮಂದಣ್ಣನ ಬಗೆಗಿನ ಹಾಸ್ಯದ ಹಿಂದೆ ಹರಿಯುವ ಪ್ರೀತಿಯಂತೆಯೇ ಈ ಕರ್ವಾಲೋನ ಶಿಸ್ತಿನ ಹಿಂದೆ ಹರಿಯುವ ಅದಮ್ಯ ಕುತೂಹಲ ನನ್ನನ್ನು ಹರ್ಷದಿಂದ ಅಲ್ಲಾಡಿಸಿದ ಅಂಶ.
ನನಗೆ ಈ ಕಾದಂಬರಿ ನಾಲ್ಕು ಮುಖ್ಯ ಕಾರಣಕ್ಕೆ ತುಂಬ ಚೆನ್ನಾಗಿದೆ. ಮೊದಲನೆಯದಾಗಿ ನೀವು ಬರೀ ಹಂಜಿಪುಟ್ಟಿ ಎಂಬಂಥ ಹಾಸ್ಯಶೈಲಿಯಲ್ಲಿ ಬರೆಯುತ್ತ, ರೇಗುತ್ತ, ತಡವರಿಸುತ್ತಾ ಮನುಷ್ಯರ ಜೀವನವನ್ನು ಚಿತ್ರಿಸುವ ಬಗೆ. ಲಕ್ಷ್ಮಣ, ಮಂದಣ್ಣ, ಕರಿಯಣ್ಣ, ಯಂಕ್ಟ ಮುಂತಾದವರು ನಿಮ್ಮ ಶೈಲಿಯ ಮೂಲಕ ಜೀವ ಪಡೆಯುತ್ತಾರೆ. ನಿಮ್ಮ ಭಾವನೆಯ ಏರಿಳಿತಗಳ ನಡುವೆ ಈ ಜನ ಎದ್ದು ಓಡಾಡತೊಡಗುತ್ತಾರೆ. ಕೋಟ್ಯಂತರ ವರ್ಷಗಳ ಹಿಂದಿನಿಂದ ಇರುವ ಪ್ರಾಣಿಗಳನ್ನು ಹುಡುಕುತ್ತ ನೀವು ನಿಮ್ಮ ಸುತ್ತಣ ವಿವಿಧ ಮಟ್ಟದ ಜನರ ಹಲಬಗೆಯ ವಿಕಾಸ ಅಥವಾ ವಿಕಾಸಗೊಳ್ಳದಿರುವಿಕೆಯನ್ನು ಚಿತ್ರಿಸುವುದು. ನೀವು ನೋಡುವ ವ್ಯಕ್ತಿಗಳ ರೂಪ ಈ ಕಾದಂಬರಿಯ ವರ್ಟಿಕಲ್ ಮತ್ತು ಹಾರಿಜಾಂಟಲ್ ಗುಣ ತೋರುತ್ತದೆ. ಇದು ಎರಡನೆಯ ಅಂಶ.
ಮೂರನೆಯದಾಗಿ ನೀವು ತೋರುವ ಪ್ರಜ್ಞೆಯ ವಿಸ್ತಾರ ಮತ್ತು ಸಂಶೋಧನೆಯ ಸಂಭ್ರಮ. ಹೊಟ್ಟೆಪಾಡಿಗೆ ಪ್ರಾಣಿಶಾಸ್ತ್ರ ಕಲಿತು 'ಸಂಶೋಧಿಸುವ' ಜನರು ಈ ನಿಮ್ಮ ಕಾದಂಬರಿಯ ಸಂದರ್ಭದಲ್ಲಿ ಹಾಸ್ಯಸ್ಪದ ಅನ್ನಿಸುತ್ತಾರೆ.
ಆಮೇಲೆ ನಮ್ಮಲ್ಲಿ ಕೇವಲ ಸೋಷಲಿಸ್ಟನೊಬ್ಬ ಮಾತ್ರ ವರ್ಣಿಸಬಲ್ಲಂಥ ಅನೇಕ ಜಾತಿ ಜನ, ವರ್ಗಗಳನ್ನು ತಿಳಿದುಕೊಂಡು ಚಿತ್ರಿಸುವ, ಅತ್ಯಂತ ತೀವ್ರ ಆಸಕ್ತಿ ಮತ್ತು ಪ್ರೇಮದಿಂದ ಮಾತ್ರ ಕೈಗೂಡುವ ಗ್ರಹಿಕೆ. ಈ ಜೇಬುಗಳ್ಳನೆನ್ನಿಸಿಕೊಂಡ ಸಾಬರ ಪ್ಯಾರ ಹೇಗೆ ನಿಮ್ಮ ಮಾನವೀಯತೆಯಲ್ಲಿ ಮಗುವಾಗಿ ಹೊಂದಿಹೋಗುತ್ತಾನೆ!
ಎಲ್ಲಕ್ಕಿಂತ ಮುಖ್ಯವಾಗಿ ಪ್ರಕೃತಿಯ ಬಗ್ಗೆ ನಿಮಗಿರುವ ನಿಲುವು. ಈ ಕಾದಂಬರಿಯ ನಾಯಕ ಕೆಲವೊಮ್ಮೆ ಬೇಸರಗೊಂಡು ತನ್ನ ತೋಟ ಮಾರಿ ಪೇಟೆ ಸೇರಲು ತೀರ್ಮಾನಿಸುತ್ತಾನೆ. ಆದರೆ ಈ ಪ್ರಕೃತಿ ಅವನನ್ನು ಬಿಡುವುದಿಲ್ಲ. ಮಂದಣ್ಣನೆಂಬ ಮನುಷ್ಯನ ಪ್ರಕೃತಿಯಿಂದ ಹಿಡಿದ ಹಾರುವ ಓತಿಕಾಟದ ಪ್ರಕೃತಿ ವಿಕಾಸದವರೆಗೆ ಈ ಅಪಾರ ಕುತೂಹಲ ಹಬ್ಬಿದೆ. ಕಾರಂತ, ಕುವೆಂಪು ತರುವಾಯ ಪ್ರಕೃತಿಯನ್ನು ಇಷ್ಟು ಆಳವಾಗಿ ಪ್ರೀತಿಸುವ ಮತ್ತು ಅದಕ್ಕೆ ತಕ್ಕ ಕಾರಣಗಳುಳ್ಳ ವ್ಯಕ್ತಿ ನೀವೇ ಎಂದು ಕಾಣುತ್ತದೆ. ಈ ಇಡೀ ಕಾದಂಬರಿ ಪ್ರಕೃತಿಯ ಅಗಾಧ ಕೌತುಕಕ್ಕೆ ಹಿಡಿದ ಕನ್ನಡಿಯಾಗಿದೆ.
ಮೇಲಿನ ಮಾತುಗಳನ್ನು ಕಷ್ಟಪಟ್ಟು ಬರೆಯುತ್ತಿದ್ದೇನೆ. ದಿನದಿನಕ್ಕೆ ನಮ್ಮ ಜನರ ಬದುಕು ಕ್ರೂರವೂ ಅರ್ಥಹೀನವೂ ಆಗುತ್ತಿದೆ. ನಮ್ಮ ಹಾಸ್ಯ, ಟೀಕೆಗಳನ್ನು ಮೀರಿದ ರಾಕ್ಷಸರ ಬೆಳವಣಿಗೆ ನಮ್ಮ ಎಲ್ಲ ಒಳ್ಳೆಯದಕ್ಕೆ ಸವಾಲಾಗುತ್ತಿದೆ. ನಮ್ಮ ಜನ ತಮ್ಮ ಹಳ್ಳಿ, ಪರಿಸರಕ್ಕೆ ಮೀರಿದ ದುಷ್ಟ ಶಕ್ತಿಗಳ ಗುಲಾಮರಾಗುತ್ತಿದ್ದಾರೆ. ಈ ಮಟ್ಟದಲ್ಲಿ ನೋಡಿದಾಗ ನಿಮ್ಮಂಥ ಬಹುಮುಖ್ಯ ಬರಹಗಾರರ ಲೇಖನಗಳು ಕೂಡ ಎಲ್ಲೋ ರೊಮ್ಯಾಂಟಿಕ್ ಅನ್ನಿಸುತ್ತಾ ಹೋತುತ್ತವೆ.
ಬೇಸರ ಪಡಬೇಡಿ. ಎಲ್ಲಾ ಸರಿಹೋದೀತು. ನಾನು ಕೂಡ ಕೆಲವೊಮ್ಮೆ ಈ ಮಂದಣ್ಣನಂತಿದ್ದರೆ ಎಷ್ಟು ಚೆನ್ನಾಗಿತ್ತು ಅಂದುಕೊಂಡಿದ್ದೇನೆ.