ಮಿತ್ರ ಪಿ. ಮಂಜುನಾಥ್ ಮೂಲತಃ ಶಿರಾ ತಾಲೂಕು ಗೋಮಾರದಹಳ್ಳಿಯವರು. ಕಲಾವಿದ, ಕವಿ, ಕಥೆಗಾರ, ಪ್ರಗತಿಪರ ಚಿಂತಕ . ನಾಸಂನಲ್ಲಿ ತರಬೇತಿ ಪಡೆದಿದ್ದಾರೆ. ತಿಪಟೂರಿನ ರಂಗ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದ ವ್ಯಕ್ತಿ. ಇವರು ಅಭಿನಯಿಸಿದ ತಿರುಗಾಟದ ಯಶಸ್ವಿ ನಾಟಕ 'ಚಿರೆಬಂದಿವಾಡಿ'ಯ 'ಭಾಸ್ಕರ ದೇಶಪಾಂಡೆ' ಪಾತ್ರಕ್ಕೆ ಬಹು ಪ್ರಶಂಸೆ ವ್ಯಕ್ತವಾಗಿತ್ತು. ಈಗ ಸದ್ಯಕ್ಕೆ ಕಸ್ತೂರಿ ವಾಹಿನಿಯ ತುಮಕೂರು ವರದಿಗಾರ. ಇವರ ಇತ್ತೀಚಿನ ಕಥೆ 'ಅಮೇರಿಕಾ ಅಕ್ಕ' ಇಲ್ಲಿ ನಿಮಗಾಗಿ.
ಕಥೆ ಮೇಲ್ನೋಟಕ್ಕೆ ಮೈಮನಗಳ ಸುಳಿ ಅನ್ನಿಸಿದರೂ, ಮೂಲದಲ್ಲಿ ಮನುಷ್ಯ ಸಂಬಂಧಗಳ ಮುಕ್ತತೆ ಮತ್ತು ಮುಚ್ಚಿಕೊಳ್ಳುವಿಕೆಗಳ ತಾಕಲಾಟಗಳನ್ನು ಧ್ವನಿಸುತ್ತದೆ.
ನಾನು ಬೇಕೆಂದೇ ಸೂರಿಗೆ 'ಒಂದು ವಾಕ್ಯ ಬರೆದು ಕೊನೆಗೆ ಚುಕ್ಕೆ ಇಟ್ಟರೆ ಅದನ್ನು ವ್ಯಾಕರಣದಲ್ಲಿ ಕಾಮ ಎನ್ನುತ್ತಾರೆ' ಎಂದೆ. ಸೂರಿ ಗೊಳ್ಳೆಂದು ನಕ್ಕ!
ಹಾಗೆ ಹೇಳುವವರಿಗೆ ಕಾಮದ ವ್ಯಾಕರಣವೇ ಗೊತ್ತಿಲ್ಲವೆಂದು ಗೇಲಿ ಮಾಡಿದ! ಇಷ್ಟಾಗಿದ್ದೇ ಸಾಕು, ಸೂರಿ ಬಾಯಲ್ಲಿ ಹಸಿಹಸಿ ಕಾಮದ ಕತೆಗಳೇ ಹೊರಬೀಳಲಿದ್ದವು. ಅವನದೂ ಸೇರಿದಂತೆ ಊರ ಹೆಂಗಸರ, ಗಂಡಸರ ಅನೈತಿಕ ಕಾಮ ಪ್ರಸಂಗ, ಪ್ರಹಸನ ಕೇಳಲು ನನ್ನ ಕಿವಿ ತನ್ನಿಂದ ತಾನೇ ಹಣಿಯಾಗಿದ್ದವು.
ಆರು ಜನ ಅಕ್ಕಂದಿರಿಗೆ ಸೂರಿ ಒಬ್ಬನೇ ತಮ್ಮ. ನಮ್ಮ ಹಳ್ಳಿಕಡೆ ಒಂದು ಮಾತಿದೆ- ಏಳು ಮಕ್ಕಳಾಗಬಾರದು. ಅವರ ಬಾಳು ಏಳುಬೀಳು ಎಂದು. ಈ ಮಾತಿಗೆ ಪುಷ್ಟಿನೀಡುವಂತೆ ಸೂರಿ ಕುಟುಂಬ ಇದೆ. ಸೂರಿ ಹಿರಿ ಅಕ್ಕ ರತ್ನ ಡಾಕ್ಟರ್ ಮದುವೆಯಾಗಿ ಅಮೇರಿಕಾದಲ್ಲಿದ್ದಾಳೆ. ಕಿರಿ ಅಕ್ಕ ಚಂದ್ರಿ ಗಂಡನ ಕೊಲೆ ಮಾಡಿದ ಆರೋಪ ಹೊತ್ತು ಮಗಳ ಜೊತೆ ಜೈಲಿನಲ್ಲಿದ್ದಾಳೆ. ಸೂರಿಯ ಎಸ್ಸೆಸ್ಸೆಲ್ಸಿ ಫಲಿತಾಂಸ ಬರುವ ಮೂರು ದಿನಕ್ಕೆ ಮುಂಚೆ ಅವನಪ್ಪ ರಂಗಣ್ಣ ಸ್ಮಶಾನ ಸೇರಿದರು. ಸೂರಿ ಅವ್ವ ರಾಮಕ್ಕ ಬಲು ಬಜಾರಿ ಎಂದೇ ನಮ್ಮೂರಿನಲ್ಲಿ ಖ್ಯಾತಿ.
ಮತ್ತೊಬ್ಬಳು ಅಕ್ಕನ ಗಂಡ ಆತ್ಮಹತ್ಯೆ ಮಾಡಿಕೊಂಡ. ಗಂಡ ಸತ್ತ ಮೇಲೆ ದೈವದ ಹುಚ್ಚು ಹತ್ತಿದ ಶಿವಮ್ಮ ಹಳ್ಳದ ದಂಡೆಯೊಂದರಲ್ಲಿ ಆಶ್ರಮ ಮಾಡಿಕೊಂಡಿದೆ. ಉಳಿದ ನಾಗಮ್ಮ, ಸುನಂದ, ಲಲಿತ ಎಂಬ ಅಕ್ಕಂದಿರ ಕುಟುಂಬಗಳು ಅತ್ತ ಆರಕ್ಕೇರದೆ ಇತ್ತ ಮೂರಕ್ಕಿಳಿಯದೆ ಸಾಗುತ್ತಿವೆ. ಆದರೂ ಸೂರಿ ಎಂದರೆ ಅವನ ಅಕ್ಕಂದಿರಿಗೆಲ್ಲ ಬಲು ಪ್ರೀತಿ. ಅಮೇರಿಕಾ ಅಕ್ಕ ಡಾಲರ್ ದುಡ್ಡು ಕಳುಹಿಸಿ ಪ್ರೀತಿ ತೋರಿದರೆ, ಜೈಲಿನ ಅಕ್ಕ ಅದ್ಯಾವ ಮಾಯದಲ್ಲೋ ರಾತ್ರೋರಾತ್ರಿ ಜೈಲಿನಿಂದ ಇವನ ಮನೆಗೆ ಬಂದು, ನಾಲ್ಕು ಮಾತನಾಡಿಸಿ ಬೆಳಕು ಹರಿಯುವ ಮುಂಚೆ ಜೈಲು ಸೇರುತ್ತಾಳೆ!
ಆಶ್ರಮವಾಸಿ ಅಕ್ಕನ ಪ್ರಾರ್ಥನೆಗಳೆಲ್ಲವೂ ಸೂರಿಗೆ ಶ್ರೇಯಸ್ ಬಯಸಿಯೇ ಇರುತ್ತವೆ. ಉಳಿದ ಅಕ್ಕಂದಿರು ತಮ್ಮ ಶಕ್ತಾನುಸಾರ ಪ್ರೀತಿ ತೋರುತ್ತಾರೆ. ಅಷ್ಟಕ್ಕೂ ಪ್ರೀತಿಗೆ ಅಳತೆಗೋಲು ಎಲ್ಲಿದೆ ಹೇಳಿ?
ಅಕ್ಕಂದಿರ ಪ್ರೀತಿಯಲ್ಲಿ ಅದ್ದಿ ತೆಗೆದಂತಿರುವ ಸೂರಿಯದು ಮಹಾ ಜೀವನಪ್ರೀತಿ. ಅವನು ಗಂಟೆಗಟ್ಟಲೇ ಊಟ ಮಾಡುವುದು ಅವನ ಜೀವನ ಪ್ರೀತಿಗೊಂದು ಉದಾಹರಣೆಯಷ್ಟೆ. ಆತ ಊಟ ಮಾಡಿ ಮುಗಿಸಲು ಬರೋಬರಿ ಒಂದೂವರೇ ತಾಸು ಬೇಕು. ಆ ಪರಿ ಊಟದ ರುಚಿ ಎಂಜಾಯ್ ಮಾಡುತ್ತಾನೆ. ಅವನಮ್ಮ ರಾಮಕ್ಕನ ಜೊತೆ ವಾಸವಾಗಿರುವ ಸೂರಿಗೆ ಮದುವೆ ವಯಸ್ಸು ಮೀರುತ್ತಿದೆ. ಅಂದರೆ ನಮ್ಮಕಡೆ ಒಬ್ಬನೇ ಮಗನಿದ್ದರೆ ಹದಿನೆಂಟು-ಇಪ್ಪತ್ತು ವರ್ಷಕ್ಕೆಲ್ಲಾ ಮದುವೆ ಡೋಲು ಬಾರಿಸಿಬಿಡುತ್ತಾರೆ. ಆದರೆ ಸೂರಿಗೀಗ ಹತ್ತಿರತ್ತಿರ ಮೂವತ್ತು ವರ್ಷ. ಮದುವೆ ಬಗ್ಗೆ ಊಟದಷ್ಟು ಆಸಕ್ತಿ ತೋರುತ್ತಿಲ್ಲ. ಜೀವನಕ್ಕೆ ಜಮೀನಿದೆ. ಮಳೆ-ಬೆಳೆ ಕೈಕೊಟ್ಟರೆ ಅಕ್ಕ ಕಳುಹಿಸುವ ಡಾಲರ್ ದುಡ್ಡು ಇದೆ. ಅವನ ಬಗ್ಗೆ ನಮ್ಮೂರ ಪುಟಗೋಸಿ ಜನ ಹೇಳುವಂತೆ ಕುಡಿದ ನೀರು ಅಲುಗದಂತೆ ಇದ್ದಾನೆ. ಹೀಗಾಗಿ ಅವನಕ್ಕ ಗಂಡನ ಕೊಲೆ ಮಾಡಿದ ಕಳಂಕ ಹೊತ್ತು ಜೈಲು ಸೇರಿದ್ದರೂ ಅದನ್ನು ಲೆಕ್ಕಕಿಡದ ಅನೇಕರು ಸೂರಿಗೆ ಹೆಣ್ಣು ಕೊಟ್ಟು ಮದುವೆ ಮಾಡಲು ರೆಡಿಯಿದ್ದಾರೆ. ಜೊತೆಗೆ ಜೈಲಿನ ಅಕ್ಕನ ಮಗಳು ಸೇರಿ ಮೂವರು ಅಕ್ಕಂದಿರ ಹೆಣ್ಣು ಮಕ್ಕಳಿದ್ದಾರೆ-ಇವನನ್ನು ಮಾವ ಎಂದು ಕರೆಯಲು. ಅವರಲ್ಲೇ ಒಬ್ಬರನ್ನು ವರಿಸಿದರಾಯಿತು. ಆದರೇಕೋ ಭೂಪನೋ, ಊಪನೋ ಒಂದೂ ಅರ್ಥವಾಗದ ಸೂರಿ ಮದುವೆಗೆ ಮನಸ್ಸು ಕೊಟ್ಟಿಲ್ಲ. ಅಷ್ಟಕ್ಕೂ ಮದುವೆ ಬಗ್ಗೆ ಅವನ ಕೆಮಿಸ್ಟ್ರಿ ಏನಿದೆಯೋ ಗೊತ್ತಿಲ್ಲ.
***
"ನೀನು ಜೀವನದಲ್ಲಿ ಮೊದಲ ವಾಕ್ಯ ಬರೆದು ಕಾಮದ ಚುಕ್ಕಿ ಇಟ್ಟಿದ್ದು ಯಾವಾಗ?' ಎಂದ ಸೂರಿ. ನನಗೆ ಅವನ ಮಾತಿನ ಒಳತೋಟಿ ಅರ್ಥವಾದರೂ ಗೊತ್ತಿಲ್ಲದವನಂತೆ, ನೆನಪು ಮಾಡಿಕೊಳ್ಳಲು ತುಂಬಾ ಪ್ರಯತ್ನಿಸುವಂತೆ ನಟಿಸಿದೆ. ಎರಡನೇ ಕ್ಲಾಸ್ನಲ್ಲಿ ರವಿಯು ಅಜ್ಜನ ಮನೆಗೆ ಹೋದ ಎಂದು ಬರೆದು ಮರೆಯದೇ ಚುಕ್ಕಿ ಇಟ್ಟಿದ್ದನ್ನು ನಗುತ್ತಲೇ ಹೇಳಿದೆ. ಸೂರಿ ಮೈ ಸಡಿಲ ಬಿಟ್ಟು ಕುಲುಕುಲು ನಕ್ಕ. ಅವನ ಬಾಯಲ್ಲಿ ಹಸಿ ಕಾಮದ ಕತೆ ಕೇಳಲು ಕಾತರಿಸುವ ನನ್ನ ಬಗ್ಗೆ ಅರಿವಿದ್ದ ಸೂರಿ, ತನ್ನ ವೈಯಕ್ತಿಕ ಕತೆಗಳನ್ನು ಬಿಚ್ಚಿ ಹೇಳುತ್ತಲೇ ನನ್ನ ಒಳಕೋಶಗಳನ್ನೆಲ್ಲಾ ಶೋಧಿಸುವಷ್ಟು ಚಾಲೂ ಇದ್ದ. "ಮರಿ, ನೀನು ಆರ್ಟ್ ಫಿಲಂ ಡೈರೆಕ್ಟರ್ ಕೈ ಕೆಳಗೆ ಕೆಲಸ ಮಾಡೋನು. ನೀನೂ ಮುಂದೊಂದು ದಿನ ಕತ್ತಲೇ ಕಿಕ್ಕಿರಿದ ಸಿನಿಮಾ ತೆಗೆದು, ಅದನ್ನು ಯಾವೂದಾದರೂ ಇಂಟರ್ನ್ಯಾಸಿನಲ್ ಪೆಸ್ಟಿವಲ್ನಲ್ಲಿ ಪ್ರದರ್ಶಿಸಿ ಪ್ರಖ್ಯಾತಿ ಪಡೆಯುವ ಆಸೆ ಕೂಡ ಇಟ್ಕೊಂಡಿದ್ದೀಯ. ಅದಕ್ಕೆ ಹೇಳುತ್ತೇನೆ, ನಿನ್ನ ಭಾವಕೋಶದಲ್ಲಿ ಸ್ಟೋರ್ ಮಾಡ್ಕೋ. ಯಾರ್ಯಾರ ಜೀವನದಲ್ಲಿ ಮೊಟ್ಟ ಮೊದಲಿಗೆ ಕಾಮದ ಮುಳ್ಳು ಚಿಟಿಕೆ ಆಡಿಸಿದಂತೆ ಆಗಿರುತ್ತದೆಂದು ಗೊತ್ತಿರುವುದಿಲ್ಲ. ನನ್ನದೇ ಹೇಳುವುದಾದರೆ...."ಎಂದ. ಆಗ ನಾನು ಸೂರಿ ಮುಂದೆ ಶ್ರೀಕೃಷ್ಣ ಭಗವದ್ಗೀತೆ ಹೇಳುವಾಗ ಅರ್ಜುನ ಇದ್ದಂತೆ ಇರಲು ಪ್ರಯತ್ನಿಸಿದೆ.
ಹೊಲೇರ ಪುಟ್ಟಿ, ಅಮೇರಿಕಾ ನನ್ನ ಅಕ್ಕ ರತ್ನಿ ಗೆಳತಿಯರು. ಆಗ ನನ್ನಕ್ಕ ಹೈಸ್ಕೂಲಿಗೆ ಹೋಗುತ್ತಿದ್ದಳೆಂದು ಕಾಣುತ್ತದೆ. ನಾನಿನ್ನು ಒಂದನೇ ತರಗತಿಗೆ ಸೇರಿದ್ದನೋ ಇಲ್ಲವೋ ನೆನಪು ಮಸುಕು ಮಸುಕು. ಬಾಲ್ಯದ ನೆನಪಿನ ಹಿಂದೆ ಓಡಿದಷ್ಟು ಕತ್ತಲು. ಅವತ್ತು ಭಾನುವಾರವೇ ಇದ್ದಿರಬೇಕು. ಅಕ್ಕ ಮಧ್ಯಾಹ್ನದ ಹೊತ್ತು ಮಲಗಿದ್ದಳು. ಏಕೋ ಪುಟ್ಟಿ ಅಕ್ಕನ ಹುಡುಕಿಕೊಂಡು ಮನೆಗೆ ಬಂದಳು. "ರತ್ನಿ, ಬಾರೇ ಬಾರೇ...'ಎಂದು ಬಾಗಿಲಲ್ಲಿ ನಿಂತು ಕೂಗುತ್ತಿದ್ದಳು. ಮನೆಯಲ್ಲಿ ಯಾರೂ ಇರಲಿಲ್ಲ. ನಾನು ಅಕ್ಕ ಇದ್ದೆವು. ಅವಳ ಪಕ್ಕದಲ್ಲಿ ಮಲಗಿದ್ದ ನಾನು ಅವಳ ಎದೆ ಏರಿ ಕುಳಿತು ಚೇಷ್ಟೆ ಮಾಡುತ್ತಿದ್ದೆ. ಪುಟ್ಟಿ ಹೊರಗಿನಿಂದ "ಬಾರೇ ಬಾರೇ...' ಎಂದು ಕೂಗತ್ತಲೇ ಇದ್ದಳು. ಅಕ್ಕ "ಇರೇ, ಇವನು ಬಿಡುತ್ತಿಲ್ಲ. ಕಚಗುಳಿ ಇಡುತ್ತಿದ್ದಾನೆ' ಎಂದು ಕಿಲಕಿಲ ನಗುತ್ತಿದ್ದಳು. ಈ ಮಾತು ಏಕೋ ನನ್ನ ಕಿವಿಯಲ್ಲಿ ರೆಕಾರ್ಡ್ ಆಗಿದೆ. ಈ ಮಾತಿನ ಲಹರಿ ನನ್ನ ಎದೆಯೊಳಗೆ ಬಿಚ್ಚಿಕೊಂಡಾಗಲೆಲ್ಲಾ ನನ್ನ ಆಗಿನ ಪುಟಾಣಿ ಬೆರಳುಗಳಲ್ಲಿ ಅಕ್ಕನ ಕಂಕುಳ ಅಡಿಯ ಎಳೆಗೂದಲು ಕೈಗೆ ಅಂಟಿಕೊಂಡಂತೆ ನೆನಪು ಮಿಸುಕಾಡುತ್ತದೆ. ನಾನು ಬಾಲ್ಯ ಕಾಲಕ್ಕೆ ಓಡಿದಾಗಲೆಲ್ಲಾ ಈ ಕಚಗಳಿ ನೆನಪಾಗುತ್ತದೆ. ಬಹುಶಃ ನನಗೆ ಆಗಲೇ ಇದ್ದಿರಬೇಕು- ಕಾಮದ ಮುಳ್ಳು ಚಿಟಿಕೆ ಆಡಿದಂತೆ ಆಗಿದ್ದು ಅನ್ನಿಸುತ್ತದೆ ಎಂದ.
ಸೂರಿಯ ಇಂಥ ಮುಕ್ತ ಮಾತುಗಳು ನನ್ನೊಳಗೆ ಮುಜುಗರ ಉಂಟು ಮಾಡುತ್ತಿದ್ದು ನಿಜ. ಯಾಕೆಂದರೆ ಅವನ ಮಾತಿನ ವಾಸನೆ ಹಿಡಿದ ನನ್ನ ಮನಸ್ಸು ಹಿಂದಕ್ಕೆ ಓಡಿದರೆ ನನ್ನೊಳಗೆ ಅದಿನ್ನೆಂಥ ನೆನಪು ಬಿಚ್ಚಿಕೊಂಡಿತೋ ಎಂಬ ಭಯವೂ ಆಗುತ್ತಿತ್ತು. ಕಾರಣ ನಾನು ಸೂರಿಯಂತೆ ಮುಕ್ತನಾಗುವುದರಲ್ಲಿ ಇಚ್ಚೆ ಇಲ್ಲದವನು. ಮುಚ್ಚಿಕೊಳ್ಳುವುದರಲ್ಲೇ ಈವರೆಗೂ ಸುಖ ಕಂಡವನು. ಮನುಷ್ಯ ಮೂಲತಃ ಸ್ವಾರ್ಥಿ. ಇದಕ್ಕೆ ನಾನು, ಸೂರಿ ಹೊರತಲ್ಲ. ಸೂರಿಗೆ ತನ್ನೊಳಗಿನ ಕತೆ ಬಿಚ್ಚಿಕೊಳ್ಳುವುದರಲ್ಲೇ ಸುಖ ಪಡೆಯುವ ಸ್ವಾರ್ಥವಿದ್ದರೆ, ನನ್ನದು ಬಾಲ್ಯದ ನೆನಪೇ ಕಾಡದಂತೆ ಮುಚ್ಚಿಕೊಳ್ಳುವ ಸ್ವಾರ್ಥ. ಅದಕ್ಕಾಗಿ ನನ್ನ ಬಾಲ್ಯದ ಎಂಥದ್ದಾದರೂ ಅಘಾತ ಹುಟ್ಟಿಸುವ ನೆನಪು ಬಿಚ್ಚಿಕೊಂಡು ಕಾಡುವ ಮುಂಚೆ ಈ ಸೂರಿಯ ಅಮೇರಿಕಾ ಅಕ್ಕನ ಕತೆ ಹೇಳುವ ಯತ್ನ ಮಾಡುತ್ತೇನೆ.
***
ಸೂರಿ ಕುಟುಂದಲ್ಲಿ ಅವನ ಹಿರಿ ಅಕ್ಕ ರತ್ನಿ ಮಾತ್ರವೆ ಹೆಚ್ಚು, ಅಂದರೆ ನರ್ಸಿಂಗ್ ಓದಿದ್ದಾಳೆ. ಅದೂ ಆ ಹೈಸ್ಕೂಲ್ ಮೇಸ್ಟ್ರು ನಾರಾಯಣಪ್ಪ ಅಂಥದ್ದೊಂದು ಹಲ್ಕ ಕೆಲಸ ಮಾಡದಿದ್ದರೆ ಆಕೆ ಓದು ಕೂಡ ಆವರೆಗೂ ಸಾಗುತ್ತಿರಲಿಲ್ಲ. ಇದರಿಂದ ಆಕೆ ಅಮೇರಿಕಾ ಸೇರಿ ಇಡೀ ಕುಟುಂಬವನ್ನು ಆತುಕೊಳ್ಳುತ್ತಿರಲಿಲ್ಲ. ಬಿಡಿ, ಅಷ್ಟಕ್ಕೂ ಈಗ ಗುಟ್ಟಾಗಿರುವಂತೆ ಕಾಣುವ ಸೂರಿ ಹಿರಿ ಅಕ್ಕನ ಕತೆಯನ್ನು ನಾನೊಬ್ಬನೇ ಮೊದಲ ಬಾರಿಗೆ ಹೀಗೆ ಬಹಿರಂಗ ಪಡಿಸುತ್ತಿಲ್ಲ. ಇದು ನಮ್ಮೂರಿಗೆ ಏಕೆ, ಸುತ್ತಲಿನ ಹದಿನಾರು ಹಳ್ಳಿಗೆ ಗೊತ್ತಿರುವ ಕತೆ. ಆದರೆ ಸಾರ್ವಜನಿಕರ ಸ್ಮೃತಿ ಅಲ್ಪ ಎಂಬ ತತ್ವಜ್ಞಾನಿಗಳ ಮಾತಿನಂತೆ ಈಗ ಅದು ಮರೆತು ಹೋದ ಕತೆ. ಅಲ್ಲದೆ ಸಮಾಜದಲ್ಲಿ ಯಾವುದೇ ವ್ಯಕ್ತಿ, ಕುಟುಂಬ ಆರ್ಥಿಕವಾಗಿ ಏಳಿಗೆ ಸಾಧಿಸಿದಂತೆ ಅವರನ್ನು ಗ್ರಹಿಸುವ ಸಮಾಜದ ಕ್ರಮವೇ ಬದಲಾಗಿಬಿಡುತ್ತದೆ. ಸೂರಿ ಅಕ್ಕ ರತ್ನಿ ಆ ಕಾಲಕ್ಕೆ ನಮ್ಮೂರ ಸುಂದರಿ. ಪಾಠದಲ್ಲಿ ಸರಸ್ವತಿ. ಓಟದಲ್ಲಿ ಜಿಂಕೆ. ಹಾಡುವುದರಲ್ಲೂ ಕೋಗಿಲೆ. ಆಗ ನಮ್ಮೂರಿನಲ್ಲಿ ಹೈಸ್ಕೂಲ್ ಇರಲಿಲ್ಲ. ಅಷ್ಟೇಕೆ ಆಗ ನಮ್ಮೂರಿನಲ್ಲಿ ತಗಡಿನ ಮೇಲೆ ಬರೆಸಿದ ಬೋರ್ಡ್ ಒಂದೇ ಇದ್ದದ್ದು- ಹಿರಿಯ ಪ್ರಾಥಮಿಕ ಶಾಲೆ, ಗಿಡುಗನಹಳ್ಳಿ ಎಂದು. ಆ ಬೋರ್ಡನ್ನು ಎಲ್ಲ ವಿದ್ಯಾರ್ಥಿಗಳಿಂದಲೂ 50ಪೈಸೆಯಂತೆ ಕಲೆಕ್ಟ್ ಮಾಡಿ ಹೆಡ್ಮಾಸ್ಟರ್ ಬರೆಸಿದ್ದರು.
ಆಗ ರತ್ನ ಪಬ್ಲಿಕ್ ಪರೀಕ್ಷೆಯಲ್ಲಿ ಏಳನೇ ತರಗತಿ ಪಾಸ್ ಮಾಡಿದ್ದಳು. ಶಾಲೆ ಮೇಸ್ಟ್ರು ಸಲಹೆ ಮೇರೆಗೆ ಅವರಪ್ಪ ರಂಗಣ್ಣ ರಂಗನಹಳ್ಳಿ ಹೈಸ್ಕೂಲ್ಗೆ ಸೇರಿಸಿದ್ದರು. ನಮ್ಮೂರಿಗೆ ರಂಗನಹಳ್ಳಿ ಐದು ಮೈಲಿ. ಓದುವ ಇಚ್ಚೆ ಇದ್ದವರು ಅಲ್ಲಿಗೆ ನಡೆದು ಹೋಗುವುದು ಅನಿವಾರ್ಯ. ಕೆಲಸವಿದ್ದರೆ ಮಾತ್ರ ಆ ಊರಿಗೂ-ನಮ್ಮೂರಿಗೂ ಎತ್ತಿನ ಗಾಡಿ ಓಡಾಡುತ್ತಿದ್ದವು. ಬಸ್ ಇರಲಿಲ್ಲ. ಊರಿನ ಇನ್ನಿಬ್ಬರು ಹುಡುಗರು ಹಾಗೂ ರತ್ನ ನಡೆದುಕೊಂಡೇ ಹೈಸ್ಕೂಲಿಗೆ ಹೋಗಿ ಬರುತ್ತಿದ್ದರು. ಇದನ್ನು ಒಂದೋ ಅಥವಾ ಎರಡನೇ ತರಗತಿಯಲ್ಲೋ ಓದುತ್ತಿದ್ದ ನಾವು ಬೆಕ್ಕಸಬೆರಗಾಗಿ ನೋಡುತ್ತಿದ್ದೆವು. ನಾವು ಅವರ ಹಾಗೆ ಹೈಸ್ಕೂಲಿಗೆ ಹೋಗುವ ಕನಸು ಕಾಣುತ್ತಿದ್ದೆವು.
ರತ್ನ ಬರೀ ಸುಂದರಿ ಎಂದರೆ ಸಾಲದು. ಯಾಕೆಂದರೆ ಎಂಥ ಅರಸಿಕರು ವರ್ಣಿಸುವಷ್ಟು ಸೌಂದರ್ಯ ಅವಳ ದೇಹದಿಂದ ಚಿಮ್ಮುತ್ತಿತ್ತು. ಆಕೆ ರಂಗನಹಳ್ಳಿ ಶಾಲೆಗೆ ಹೋಗಿ ಬರುತ್ತಿದ್ದ ದಾರಿಯಲ್ಲೇ ಅರವತ್ತು ದಾಟಿದ ತಿಮ್ಮಜ್ಜನ ಮನೆ ಇತ್ತು. "ರತ್ನೂ, ಬಾರೇ ಮೊಮ್ಮಗಳೇ... ಒಂದು ಲೋಟ ನೀರು ಕೊಡು...'ಎಂದು ಮನೆಯಿಂದ ಹೊರಗಡೆ ಕುಳಿತಿದ್ದ ತಿಮ್ಮಜ್ಜ ರತ್ನಿಯನ್ನು ಕರೆಯುತ್ತಿದ್ದ. ಆಕೆ ಕೈಯಿಂದ ನೀರು ತರಿಸಿಕೊಂಡು ಕುಡಿದು "ನಿನ್ನ ಅಮ್ಮ ನನಗೆ ತಂಗಿ ಆಗಬೇಕು. ಎಷ್ಟು ಚಂದ ಇದ್ದಿಯೇ ನನ್ನ ಸೊಸೆ....' ಎಂದು ಮುದ್ದಿಸುತ್ತಲೇ ಕೆನ್ನೆ, ಎದೆ ಸವರುತ್ತಿದ್ದ ತಿಮ್ಮಜ್ಜ! ಇದನ್ನು ನೋಡಿದ ನಮಗಿಂಥ ದೊಡ್ಡ ಹುಡುಗರು ಪುಳಕಿತರಾಗುವ ಜೊತೆಗೆ ತಿಮ್ಮಜ್ಜನ ಬಗ್ಗೆ ಅಸೂಯೆ ಪಡುತ್ತಿದ್ದರು.
ಈಗಲೂ ಅಪರೂಪಕ್ಕೆ ರತ್ನ ಪಾರಿನ್ನಿಂದ ಊರಿಗೆ ಬರುತ್ತಾಳೆ. ಈಗ ಅವಳನ್ನು ನೋಡಿದರೂ ಪ್ರಾಯದಲ್ಲಿ ಅವಳ ಸೌಂದರ್ಯ ಅದೆಷ್ಟು ಇತ್ತು ಎಂಬುದು ಗಣನೆಗೆ ಸಿಗುತ್ತದೆ. ಈಗಲೂ ಅವಳನ್ನು ದೃಷ್ಠಿಯಿಟ್ಟು ನೋಡಿದರೆ ಅವಳ ಕಣ್ಣುಗಳಲ್ಲಿ ಭಾವನೆಗಳ ಕಾಡನ್ನೇ ಕಂಡಂತೆ ಆಗುತ್ತದೆ.ದಿನಾಲೂ ಹೈಸ್ಕೂಲಿಗೆ ಐದು ಮೈಲಿ ದಾರಿ ಸವೆಸುವುದು ನಡೆದಂತೆ ಅವಳ ದೇಹವು ಆಕಾರ ಪಡೆಯುತ್ತ ಹೋಯಿತು. ಆಗ ಸಲುಗೆಯಿಂದ ರತ್ನಿ ಎನ್ನುತ್ತಿದ್ದ ಹುಡುಗರು ಕೂಡ ಮರ್ಯಾದೆಗೋ, ಅವಳ ಸೌಂದರ್ಯದ ಮೇಲಿನ ಗೌರವಕ್ಕೋ ರತ್ನ ಎಂದು ಕರೆಯತೊಡಗಿದರು. ಕಿರಿಯರಾದ ನಾವಂತೂ ರತ್ನಕ್ಕ ಎಂದು ಕರೆದು ಆಕೆಯಿಂದ ಅಆಇಈ... ಹೇಳಿಸಿಕೊಳ್ಳಲು ಮೇಲಾಟ ನಡೆಸುತ್ತಿದ್ದೆವು. ಸೂರಿ ಈಗಿನಂತೆ ನನಗೆ ಆಗಲೂ ಸ್ನೇಹಿತ. ರತ್ನಕ್ಕ ಹೆಚ್ಚು ಓದುತ್ತಿದ್ದಾಳೆ ಎಂಬ ಕಾರಣದಿಂದ "ಅವಳಿಂದ ಪಾಠ ಹೇಳಿಸ್ಕೋ ಹೋಗು...' ಎಂದು ನನ್ನ ಅಪ್ಪ-ಅಮ್ಮ ಸಂಜೆ ವೇಳೆ ಅವರ ಮನೆಗೆ ಕಳುಹಿಸುತ್ತಿದ್ದರು. ಎಂಟು, ಒಂಬತ್ತನೇ ತರಗತಿ ಪಾಸು ಮಾಡಿದ ರತ್ನ, ಎಸ್ಸೆಸ್ಸೆಲ್ಸಿಗೆ ಬರುವ ಹೊತ್ತಿಗೆ ಅದೊಂದು ಸಖೇದಾಶ್ಚರ್ಯ ವಿಷಯವಾಗಿಯೇ ನಮ್ಮೂರಿನಲ್ಲಿ ಹೊರಹೊಮ್ಮಿತು. ರಂಗಣ್ಣನ ಮಗಳು ಎಸೆಲ್ಸಿಯಂತೆ ಎಂದು ಹಿರಿತಲೆಗಳು ಮಾತಾಡಿಕೊಂಡಿದ್ದು ನಮ್ಮ ಕಿವಿಗೂ ಬಿದ್ದು, ಓದಿದರೆ ರತ್ನಕ್ಕನಂತೆ ಓದಬೇಕೆಂದು ಆ ಕ್ಷಣಕ್ಕೆ ತೀರ್ಮಾನಿಸುತ್ತಿದ್ದೆವು. ಜನರ ಅಂಥ ಕುತೂಹಲದ ಮಾತಿಗೂ ಕಾರಣವಿತ್ತು. ರತ್ನ ಹತ್ತನೇ ತರಗತಿಗೆ ಬರುವ ಹೊತ್ತಿಗೆ ನಮ್ಮೂರಿನಲ್ಲಿ ಅದನ್ನು ದಾಟಿದವರು ಒಬ್ಬರೋ ಇಬ್ಬರೋ ಮಾತ್ರ ಇದ್ದರು. ಅವರು ಕೂಡ ನಮ್ಮ ಊರಿನಲ್ಲಿ ಇರದೆ ಅವರವರ ನೆಂಟರ ಊರಿನಲ್ಲಿ ಓದುತ್ತಿದ್ದಾರೆ ಎಂಬ ಸುದ್ದಿ ಇದ್ದವು.
***
ಹೀಗಿರುವಾಗ ಒಂದು ದಿನ ಇದ್ದಕ್ಕಿದ್ದಂತೆ ಇನ್ನು ಮುಂದೆ ಸಂಜೆ ಹೊತ್ತು ರತ್ನಕ್ಕ ನಮಗೆ ಪಾಠ ಹೇಳಿಕೊಡುವುದಿಲ್ಲ ಎಂದು ನಮಗೆ ಗೊತ್ತಾಗಿಹೋಯಿತು. ಆಗಿದ್ದೇನೆಂದರೆ ಎಸಲ್ಸಿ ಪಾಸ್ ಮಾಡುವುದೆಂದರೆ ಅದೊಂದು ರೀತಿ ಶಿಕ್ಷಣ ಕ್ಷೇತ್ರದಲ್ಲಿ ಗಂಡಾಂತರ ಗೆದ್ದಂತೆ ಎಂಬ ವಾತಾವರಣ ನಮ್ಮಲ್ಲಿತ್ತು. ನಮ್ಮ ಸುತ್ತಿನಲ್ಲಿ ಆ ಕಾಲಕ್ಕೆ ಎಸಲ್ಸಿ ಪಾಸು ಮಾಡಿದವನು ಯುದ್ದ ಗೆದ್ದ ಯೋಧನಂತೆ ಬೀಗುತ್ತಾ ಓಡಾಡುತ್ತಿದ್ದರು. ಆ ಸುದ್ದಿ ಪತ್ರಿಕೆ, ಟಿವಿ ಇರದಿದ್ದ ಆ ಕಾಲದಲ್ಲಿ ಅದ್ಹೇಗೋ ಸುತ್ತಲಿನ ಹತ್ತಾರು ಹಳ್ಳಿಗಳಿಗೆ ತಲುಪಿಬಿಟ್ಟಿರುತ್ತಿತ್ತು. ಈ ಬಾರಿ ರತ್ನಕ್ಕನೂ ಎಸಲ್ಸಿ ಪರೀಕ್ಷೆ ಬರೆಯಬೇಕಿದ್ದರಿಂದ ಆಕೆಯ ಮೇಸ್ಟ್ರು "ದಿನ ಐದು ಮೈಲಿ ನಡೆದು ಓದಿದರೆ ಅದು ಪಾಸಾಗುವುದಿಲ್ಲ. ಪರೀಕ್ಷೆ ಹತ್ತಿರಾಗುವ ಮೂರು ತಿಂಗಳು ರಂಗನಹಳ್ಳಿಯಲ್ಲೇ ರೂಮು ಮಾಡಿಕೊಂಡು ಓದಬೇಕು' ಎಂದು ಸೂಚಿಸಿದ್ದರು. ಇದಕ್ಕೆ ರತ್ನಕ್ಕನ ಅಮ್ಮ ರಾಮಕ್ಕ, ಅಪ್ಪ ರಂಗಣ್ಣ ಮೊದಲಿಗೆ ಒಪ್ಪಿರಲಿಲ್ಲ. ಆಗ ಹುಡುಗಿ ಸೀದಾ ಹೋಗಿ "ನಮ್ಮ ಮನೆಯಲ್ಲಿ ರೂಮು ಮಾಡಿಕೊಟ್ಟು ಓದಿಸಲು ಒಪ್ಪುವುದಿಲ್ಲ. ಊರಿನಿಂದ ಓಡಾಡಿಕೊಂಡೇ ಓದುತ್ತೇನೆ' ಎಂದು ತಿಳಿಸಿದ್ದಳು. ಆದರೆ ಈ ಬಾರಿ ಇರುವ ಹತ್ತನೇ ತರಗತಿ ಹುಡುಗ-ಹುಡುಗಿಯರಲ್ಲಿ ಸ್ವಲ್ಪ ಚೆನ್ನಾಗಿ ಓದುವ ವಿದ್ಯಾರ್ಥಿಯೆಂದರೆ ರತ್ನ ಮಾತ್ರ. ಕೊನೆಯ ಮೂರು ತಿಂಗಳ ಸ್ಪೆಷಲ್ ಕ್ಲಾಸ್ ಅವಳಿಗೂ ಸಿಕ್ಕರೆ ಪಸ್ಟ್ಕ್ಲಾಸ್ ಬರಬಹುದು ಎಂಬ ನಂಬಿಕೆ ಮೇಸ್ಟ್ರುಗಳಿಗೆ ಇತ್ತು. ಆ ಹೈಸ್ಕೂಲ್ ಪ್ರಾರಂಭವಾಗಿ ಎಂಟು ವರ್ಷ ಕಳೆದಿದ್ದರೂ ಅಲ್ಲಿ ಒಮ್ಮೆಯೂ ಪಸ್ಟ್ ಕ್ಲಾಸ್ ಬಂದಿರಲಿಲ್ಲ. ರತ್ನಳಿಂದ ಅಂಥದ್ದೊಂದು ದಾಖಲೆ ಆಗುವುದಾದರೆ ಆಗಿಯೇ ಬಿಡಲಿ ಎಂಬ ಉಮೇದು ಮೇಸ್ಟ್ರುಗಳಿಗೆ ಇತ್ತು.
"ನಮ್ಮ ಮನೆಯಲ್ಲಿ ರೂಮು ಮಾಡಿಕೊಟ್ಟು ಓದಿಸುವುದಿಲ್ಲ' ಎಂಬ ರತ್ನಳ ಮಾತಿನಿಂದ ಹೆಡ್ಮಾಸ್ಟರ್ ಹೊನ್ನೇಗೌಡರು ನಿರಾಶರಾಗಲಿಲ್ಲ. ದೈಹಿಕ ಶಿಕ್ಷಕ ನಾರಾಯಣಪ್ಪನನ್ನು ಕರೆದರು. ಇಂದೇ ರತ್ನಳ ಜೊತೆ ಅವರ ಮನೆಗೆ ಹೋಗಿ, ಹೆಣ್ಣು ಮಕ್ಕಳಿಗೆ ವಿದ್ಯೆ ಎಷ್ಟು ಮುಖ್ಯ ಎಂಬುದನ್ನು ಮನದಟ್ಟುಮಾಡಿಕೊಡಿ. ಹೇಗಾದರೂ ಅವರ ತಂದೆ-ತಾಯಿಗೆ ಒಪ್ಪಿಸಿ ಕೊನೆಯ ಮೂರು ತಿಂಗಳ ಸ್ಪೆಷಲ್ ಕ್ಲಾಸ್ಗೆ ಕರೆದುಕೊಂಡು ಬನ್ನಿ ಎಂದಪ್ಪಣೆ ಮಾಡಿದರು.
ನಾರಾಯಣಪ್ಪ ಹೈಸ್ಕೂಲ್ ಇರುವ ರಂಗನಹಳ್ಳಿಯವನು. ರತ್ನಳ ಜಾತಿಗೆ ಸೇರಿದವನು. ಸುತ್ತಮುತ್ತಲಿನ ಅನೇಕರು ನಾರಾಯಣಪ್ಪನನ್ನು ನೋಡಿ ಪರಿಚಯ ಇದ್ದವರೇ ಆಗಿದ್ದರು. ಗುಬ್ಬಿಯ ವಿದ್ಯಾಸಂಸ್ಥೆಯೊಂದು ರಂಗನಹಳ್ಳಿಯಲ್ಲಿ ಹೈಸ್ಕೂಲ್ ತೆರೆಯುವಾಗ ಸ್ಥಳೀಯರೊಬ್ಬರು ಇರಲಿ ಎಂಬ ಕಾರಣಕ್ಕೆ ನಾರಾಯಣಪ್ಪನಿಗೆ ದೈಹಿಕ ಶಿಕ್ಷಕ ಉದ್ಯೋಗ ನೀಡಿದ್ದರು. ನಾರಾಯಣಪ್ಪನಿಗೂ ರತ್ನ ತನ್ನ ಜಾತಿಯವಳು ಎಂಬ ಕಾರಣಕ್ಕೆ ವಿಶೇಷ ಆಸಕ್ತಿ ಇತ್ತು. ಅಲ್ಲದೆ ಒಂದೆರಡು ಬಾರಿ ಅವರಪ್ಪ ರಂಗಣ್ಣನನ್ನು ನೋಡಿದ ನೆನಪು ಇತ್ತು. ಆದ್ದರಿಂದ ಅವರ ಮನೆಯಲ್ಲಿ ಎಲ್ಲರನ್ನು ಒಪ್ಪಿಸಿ ರತ್ನಳನ್ನು ಸ್ಪೆಷಲ್ ಕ್ಲಾಸ್ಗೆ ಕರೆದುಕೊಂಡು ಬರುತ್ತೇನೆ ಎಂಬ ನಂಬಿಕೆ ನಾರಾಯಣಪ್ಪನದಾಗಿತ್ತು. ಅಂದು ಶಾಲೆ ಬಿಟ್ಟ ಕೂಡಲೇ ರತ್ನ ಹಾಗೂ ಇನ್ನಿಬ್ಬರು ವಿದ್ಯಾರ್ಥಿಗಳ ಜೊತೆ ನಾರಾಯಣಪ್ಪನು ನಡೆದೇ ಗಿಡುಗನಹಳ್ಳಿ ತಲುಪಿದ್ದರು.
ಮೇಸ್ಟ್ರು ನಾರಾಯಣಪ್ಪನ ಜೊತೆ ರತ್ನ ಮನೆಗೆ ಬರುವ ಹೊತ್ತಿಗಾಗಲೇ ಹೊಲಗಳಿಗೆ ಹೋಗಿದ್ದ ರಂಗಣ್ಣ-ರಾಮಕ್ಕ ಮನೆಗೆ ಬಂದಿದ್ದರು. ತಮ್ಮ ಮಗಳ ವಿದ್ಯಾಭ್ಯಾಸದ ಬಗ್ಗೆ ಕಾಳಜಿ ವಹಿಸಿ ಮೇಸ್ಟ್ರೊಬ್ಬರು ಮನೆಗೆ ಬಂದಿದ್ದು ಅವರೆಲ್ಲರಲ್ಲಿಯೂ ವಿಶೇಷ ಅಭಿಮಾನವನ್ನೇ ಮೂಡಿಸಿತು. ರತ್ನ ಆಟ-ಪಾಠದಲ್ಲಿ ಎಷ್ಟು ಚೂಟಿ ಎಂಬುದನ್ನು ನಾರಾಯಣಪ್ಪ ಅಗತ್ಯಕ್ಕಿಂತಲೂ ಹೆಚ್ಚು ಪೀಠಿಕೆ ಹಾಕಿ ವಿವರಿಸಿದರು. ಕೊನೆಗೆ ಪರೀಕ್ಷೆ ಹತ್ತಿರವಾಗುವ ಮೂರು ತಿಂಗಳು ರಂಗನಹಳ್ಳಿಯಲ್ಲೇ ಬಿಡುವಂತೆ ಕೋರಿಕೆ ಇಟ್ಟರು. ಈ ಮಧ್ಯೆ ರಾಮಕ್ಕ ಎಂದಿನಂತೆ ಎಲ್ಲದಕ್ಕೂ ಆಗಾಗ್ಗೆ ಬಾಯಿ ಹಾಕುತ್ತ "ಅಯ್ಯೋ ಹೆಣ್ಣು ಮಕ್ಕಳು ಎಷ್ಟು ಓದಿದರೂ ಮುಸುರೆ ತಿಕ್ಕುವುದು ತಪ್ಪುವುದಿಲ್ಲ' ಎಂಬ ಹಳೇ ಮಾತುಗಳನ್ನೆಲ್ಲಾ ಆಡಿದ್ದರು. ಇದಕ್ಕೆ ನಾರಾಯಣಪ್ಪ ಕೂಡ ಮಾತಿನಲ್ಲಿ ನಾನೇನೂ ಕಡಿಮೆ ಇಲ್ಲ ಎಂಬಂತೆ ಎಲ್ಲೋ ಓದಿಕೊಂಡು ಬಂದಿದ್ದ" ಹೇಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ' ಎಂಬ ನುಡಿಮುತ್ತು ಉದುರಿಸಿದ್ದರು. ಈ ನಡುವೆ ಅಗತ್ಯಕ್ಕಿಂತಲೂ ಒಂದು ಮಾತನ್ನು ಹೆಚ್ಚು ಆಡದ ರಂಗಣ್ಣನ ಚಿಂತೆ ಬೇರೆಯೇ ಇತ್ತು. ಮಗಳನ್ನು ಅಲ್ಲಿ ರೂಮು ಮಾಡಿ ಓದಿಸಿದರೆ ಎಷ್ಟು ಖರ್ಚು ಬರುತ್ತದೋ? ಅಷ್ಟೊಂದು ಹಣ ಹೊಂದಿಸುವುದು ನನ್ನ ಬಡತನದ ಬಾಳಿಗೆ ಆದೀತೆ ಎಂಬುದು ರಂಗಣ್ಣನ ಚಿಂತೆ. ಹಾಗೇ ನೋಡಿದರೆ ಆಗ ಶಿಕ್ಷಣಕ್ಕೆ ದುಬಾರಿ ಖರ್ಚು ಇರುತ್ತಿರಲಿಲ್ಲ. ಆದರೆ ನಮ್ಮ ಹಳ್ಳಿಕಡೆ ಆಗ ವಿದ್ಯಾಭ್ಯಾಸವೆಂದರೆ ಬಡವರ ಮಾತಲ್ಲ ಎಂಬ ನಂಬಿಕೆ ಬಲವಾಗಿ ನೆಲೆಸಿತ್ತು. ರಂಗಪ್ಪನ ಮುಖದ ಗೆರೆಯಲ್ಲೇ ಎಲ್ಲವನ್ನು ಅರ್ಥಮಾಡಿಕೊಂಡ ನಾರಾಯಣಪ್ಪ "ನಿಮ್ಮ ಅಭ್ಯಂತರ ಇಲ್ಲವೆಂದರೆ ನಮ್ಮ ಮನೆಯಲ್ಲೇ ಇದ್ದುಕೊಂಡು ಶಾಲೆಗೆ ಹೋಗಲಿ... ನಮ್ಮ ಮನೆಯಲ್ಲೂ ನನ್ನ ಹೆಂಡತಿ, ತಾಯಿ ಬಿಟ್ಟರೆ ಯಾರೂ ಇಲ್ಲ' ಎಂದು ಆಯ್ಕೆಯನ್ನು ಅವರಿಗೆ ಬಿಟ್ಟರು. ಮೇಸ್ಟ್ರು ಇಷ್ಟೊಂದು ಪ್ರೀತಿ, ಅಭಿಮಾನ ತೋರಿದ್ದು ಮನೆಯವರಿಗೆಲ್ಲರಿಗೂ ಮಗಳ ವಿದ್ಯಾಭ್ಯಾಸದ ಬಗ್ಗೆ ಆಸಕ್ತಿ ಮೂಡಿಸಿತು. ಅಲ್ಲದೆ ನಾರಾಯಣಪ್ಪನ ಮೇಲಿನ ಅಭಿಮಾನವೂ ಇಮ್ಮಡಿಯಾಯಿತು. ಆದರೂ ಏಕಾಏಕಿ ಹುಂ ಎಂದು ಬಿಡಲು ರಂಗಣ್ಣ-ರಾಮಕ್ಕನಿಗೆ ಇಷ್ಟವಾಗಲಿಲ್ಲ. ಮಾತು ಬೇರೆಡೆ ಹೊರಳಿಸಿದರು.
ಮನೆಯವರಿಗೆಲ್ಲಾ ಮೇಸ್ಟ್ರು ನಮ್ಮ ಜಾತಿಯವರೇ ಎಂಬುದು ಗೊತ್ತಿದ್ದ ವಿಷಯವೇ ಆಗಿತ್ತು. ಮತ್ತಷ್ಟು ಹತ್ತಿರವಾಗಲು ಬಹುತೇಕ ನಮ್ಮ ಭಾಗದ ಒಕ್ಕಲಿಗರು ಕೇಳುವ ಹಾಗೆ "ನಿಮ್ಮದು ಯಾವ ಕುಲ ?' ಎಂದು ವಿಚಾರಿಸಿದರು. ನಾರಾಯಣಪ್ಪ "ಜಲ್ದೇನರು'ಎಂದ. "ನಾವು ಅಳುನವರು. ನೀವು ಖಾಸ ನೆಂಟರು ಆಗಬೇಕು. ನಿಮ್ಮ ತಾಯಿ ಕುಲ ಯಾವುದು?' ಎಂದ ರಂಗಣ್ಣ. ಇದಕ್ಕೆ ನಾರಾಯಣಪ್ಪ "ಅಳುನವರು' ಎಂದಿದ್ದೇ ಸಂಬಂಧವನ್ನು ಮತ್ತಷ್ಟು ಹತ್ತಿರಕ್ಕೆ ತಂದಿತು. ನಂತರ ಹೆಣ್ಣುಗಳನ್ನು ಎಲ್ಲಿಗೆ ಕೊಟ್ಟಿದ್ದೀರಿ, ಎಲ್ಲಿಂದ ತಂದಿದ್ದೀರಿ ಎಂಬುದನ್ನೆಲ್ಲಾ ವಿಚಾರಿಸಿದ ಮೇಲೆ ನಾವು ನೀವು ಖಾಸ ನೆಂಟರೇ ಸೈ ಎಂಬ ತೀರ್ಮಾನಕ್ಕೆ ಪರಸ್ಪರರು ಬಂದರು. ಕೊನೆಗೆ ನಾರಾಯಣಪ್ಪ ಹೊರಡಲು ಇಚ್ಚಿಸಿ "ಮುಂದಿನ ಸೋಮವಾರದಿಂದ ರತ್ನ ನಮ್ಮ ಮನೆಯಲ್ಲೇ ಇರಲಿ. ಅಂದಿನಿಂದಲೇ ಸ್ಪೆಷಲ್ ತರಗತಿ ನಡೆಯುತ್ತವೆ' ಎಂದು ಎದ್ದರು. ಆಗ ರಂಗಣ್ಣನ ಮಾತಿಗೂ ಮುಂಚೆಯೇ ರಾಮಕ್ಕ "ನೀವು ಇಷ್ಟು ಹೇಳಿದ ಮೇಲೆ ನಮ್ಮದು ಯಾತರದ ಮಾತು? ದೈವದ ಇಚ್ಚಯಂತೆ ಆಗಲಿ' ಎಂದು ಒಪ್ಪಿಗೆ ಕೊಟ್ಟರು. ನಾರಾಯಣಪ್ಪ ಬಂದ ಕೆಲಸ ಆದ ಖುಷಿಯಲ್ಲಿ ಹೊರಡಲು ಎದ್ದರು. ಆಗ ರಂಗಣ್ಣ" ಏನ್ ನೆಂಟ್ರೇ, ಅಪರೂಪಕ್ಕೆ ಮನೆಗೆ ಬಂದಿದ್ದೀರಿ, ಊಟ ಮಾಡ್ಕೊಂಡು ಹೋಗಿ...' ಎಂದರು. ರಾಮಕ್ಕ "ಹೌದಲ್ವೆ, ನಿನ್ನೆಯೇ ಒಂದು ಕೋಳಿ ಕೋಯ್ಯಬೇಕು ಅಂತಿದ್ವಿ. ಮೇಸ್ಟ್ರು ಬಂದಿದ್ದಾರೆ. ಸುನಂದ ಒಂದು ಕೋಳಿ ಹಿಡ್ಕೋ ಹೋಗು...' ಎಂದು ಹೇಳಿ ಸುನಂದ ಕೋಳಿ ಗೂಡಿನ ಕಡೆಗೆ ಹೋಗುವ ಮುಂಚೆಯೇ ರಾಮಕ್ಕನೇ ಕೋಳಿಯನ್ನು ಕೊರ್ರ...ಕೊರ್ರಾ...ಅನ್ನಿಸತೊಡಗಿದರು. ನಾರಾಯಣಪ್ಪ "ಇಲ್ಲ, ಹೋಗ್ಬೇಕು' ಎಂದರೂ ಕೂಡ ಇರುವ ಇಚ್ಚೆಯನ್ನು ಆ ಮಾತೇ ವ್ಯಕ್ತಪಡಿಸುತ್ತಿತ್ತು.
***
ರತ್ನ ಎಸ್ಸೆಸ್ಸೆಲ್ಸಿಯನ್ನು ಸೆಂಕೆಂಡ್ ಕ್ಲಾಸ್ನಲ್ಲಿ ಪಾಸ್ ಮಾಡಿದಳು. ಆದರೆ ಆ ಖುಷಿ ಅನುಭವಿಸುವ ಸ್ಥಿತಿಯಲ್ಲಿ ರತ್ನ ಇರಲಿಲ್ಲ. ಆಕೆ ಆಗಲೇ ಮೂರು ತಿಂಗಳ ಗರ್ಭಿಣಿಯಾಗಿದ್ದಳು! ದೈಹಿಕ ಶಿಕ್ಷಕ ನಾರಾಯಣಪ್ಪನ ಪಾಪದ ಕೂಸು ಅವಳ ಹೊಟ್ಟೆಯಲ್ಲಿ ಬೆಳೆಯುತ್ತಿತ್ತು. ಆಗತಾನೇ ಅಂಗಾಗಗಳು ದುಂಡಗಾಗುತ್ತಿದ್ದ ರತ್ನಳನ್ನು ನಾರಾಯಣಪ್ಪ ತನ್ನ ಮನೆಯಲ್ಲಿ ತನ್ನಿಚ್ಚೆಯಂತೆ ಬಳಸಿಕೊಂಡಿದ್ದ. ಜಾಗೃತಿವಹಿಸದೇ ವಿಷಯ ರಾಮಕ್ಕನಿಗೂ ಗೊತ್ತಾಯಿತು. ಆಗ ರಾಮಕ್ಕ ಅಕ್ಷರಶಃ ರಾಕ್ಷಸಿಯಾದಳು. ತನ್ನ ಮಗಳ ಬಾಯಲ್ಲಿ ರಕ್ತ ಬರುವಂತೆ ಹೊಡೆಯುತ್ತಲೇ ಐದು ಮೈಲಿ ಎಳೆದುಕೊಂಡು ಬಂದು ಮಗಳನ್ನು ಮೇಸ್ಟ್ರು ನಾರಾಯಣಪ್ಪನ ಮನೆ ಬಾಗಿಲಿಗೆ ಎಸೆದು ಹೋಗಿದ್ದಳು. ನೀನು ಸತ್ತರೂ ಇಲ್ಲೇ ಸಾಯಿ, ಬದುಕಿದರೂ ಇಲ್ಲೇ ಬದುಕು. ನೀನು ನನ್ನ ಮಗಳಲ್ಲ. ನಮ್ಮ ಮನೆತನದ ತಲೆ ತಗ್ಗಿಸಿದ್ದೀಯಾ. ಮೇಸ್ಟ್ರು ಮೀಸೆ ಇದಾವೆ ಅಂತ ತಪ್ಪು ಮಾಡಿದ್ದಾನೆ. ನಿನ್ನೇ ಕಟ್ಕಳಲಿ ಎಂದು ದೂಳು ತೂರಿ ಹೋಗಿದ್ದಳು.
ವಿಷಯ ಕ್ಷಣಾರ್ಧದಲ್ಲಿ ಸುತ್ತಲಿನ ಹಳ್ಳಿಗಳಲೆಲ್ಲಾ ವ್ಯಾಪಿಸಿತು. ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವ ಬಗ್ಗೆ ಜನ ಮರುಚಿಂತೆನೆ ಮಾಡತೊಡಗಿದರು. ನಾರಾಯಣಪ್ಪನಂತಹ ಮೇಸ್ಟ್ರೀಗೆ ತಕ್ಕಶಾಸ್ತ್ರೀಯಾಗಬೇಕೆಂದುಕೊಂಡರು. ಆದರೆ ನಾರಾಯಣಪ್ಪ ಸರಕಾರಿ ಸಂಬಳ ಪಡೆದು, ಜಮೀನಿನ ಅದಾಯವೂ ಹೆಚ್ಚಾಗಿ ಉಳ್ಳವರ ಜಾತಿಗೆ ಸೇರಿದ್ದ. ಸುತ್ತಲಿನ ಹದಿನಾರು ಹಳ್ಳಿಗಳ ಮುಖಂಡರ ನ್ಯಾಯ ಪಂಚಾಯಿತಿ ನಡೆಯಿತು. ಬಹುತೇಕ ಮುಖಂಡರು ತಮ್ಮ ಜಾತಿಯ ಮೇಸ್ಟ್ರೀಗೆ ಶಿಕ್ಷೆ ಆಗುವುದು ಬೇಡ. ಏನೋ ಮನುಷ್ಯ ಸಹಜ ತಪ್ಪು ಮಾಡಿದ್ದಾನೆ. ದಂಡ ಕಟ್ಟಿಸಿ ಅವರ ಮಗಳನ್ನು ಅವರ ಮನೆಗೆ ಬಿಡಿಸೋಣ ಎಂಬ ತೀರ್ಮಾನಕ್ಕೆ ಬಂದರು. ಆದರೆ ಈ ಮಾತನ್ನು ರಾಮಕ್ಕನ ಎದುರು ಹೇಳಿದ್ದೇ ಆಕೆ ಕೆರಳಿ ಕೆಂಡವಾದಳು. ನಿಮ್ಮ ಮನೆಯ ಹೆಂಗಸರನ್ನು ನನ್ನ ಗಂಡನ ಬಳಿಗೆ ಕರೆದುಕೊಂಡು ಬಿಡಿ, ನಾನು ಮಾಡುವುದನ್ನೆಲ್ಲಾ ಮಾಡಿ ದಂಡ ಕಟ್ಟಿ ಕೊಡುತ್ತೇನೆ ಎಂದು ಸವಾಲು ಹಾಕಿದಳು. ನ್ಯಾಯ ಹೇಳಲು ಬಂದವರು ತಲೆ ತಗ್ಗಿಸಿದರೆ ಹೊರತು, ರಾಮಕ್ಕ ತನ್ನ ಮಗಳನ್ನು ಮನೆಯಲ್ಲಿ ಇಟ್ಟುಕೊಳ್ಳಲು ಒಪ್ಪಲಿಲ್ಲ. ಕೊನೆಗೆ ಹೆಣ್ಣು ಮಗುವಿನ ಭವಿಷ್ಯ ಹಾಳಾಗುವುದು ಬೇಡ. ಹೇಗೂ ಎಸ್ಸೆಸ್ಸೆಲ್ಸಿ ಪಾಸಾಗಿದ್ದಾಳೆ. ಮುಂದಕ್ಕೆ ಮೇಸ್ಟ್ರು ನಾರಾಯಣಪ್ಪನೇ ಓದಿಸಬೇಕು. ಆಕೆ ಒಪ್ಪಿದರೆ ಮದುವೆ ಕೂಡ ಮಾಡಿಕೊಳ್ಳಬೇಕು ಎಂದು ನ್ಯಾಯ ಬಗೆಹರಿಸಿದರು. ಆದರೆ ರಾಮಕ್ಕ ಮಾತ್ರ ಈ ಯಾವ ವಿಷಯವೂ ತನಗೆ ಸಂಬಂಧಿಸಿದ್ದಲ್ಲ ಎಂಬಂತೆ "ನನ್ನ ಮಗಳು ಸತ್ತು ಹೋದಳು' ಎಂದು ದೂಳು ತೂರಿ ಬಾಗಿಲು ಹಾಕಿಕೊಂಡಳು.
ಈ ಎಲ್ಲ ವಿವಾದ, ಅವಮಾನದಿಂದ ಬಾಲಕ ಸೂರಿ ಅದೆಷ್ಟು ನಲುಗಿ ಹೋದನೆಂದರೆ, ಆತ ಈಗ ಹೇಳುತ್ತಿರುವ ನೂರಾರು ಕಾಮ ಕತೆಗಳ ಬೀಜಗಳೆಲ್ಲಾ ಅವನೊಳಗೆ ಆಗಲೇ ಮೊಳಕೆ ಹೊಡೆಯಲು ಪ್ರಾರಂಭಿಸಿದವು ಎಂದು ಕಾಣುತ್ತದೆ. ಈ ಅವಮಾನದಿಂದಾಗಿಯೇ ಇಂದು ಎಂಥ ಹೆಂಗಸು-ಗಂಡಸಿನ ಬಗ್ಗೆಯಾದರೂ ಅನೈತಿಕ ಸಂಬಂಧದ ಕತೆಯನ್ನು ಯಾವ ಮುಲಾಜಿಲ್ಲದೆ ಹೇಳಿಬಿಡುತ್ತಾನೆ. ಇದು ಆತ ತೀರಿಸಿಕೊಳ್ಳುತ್ತಿರುವ ಪ್ರತಿಕಾರವೋ ಅಥವಾ ಸಮಾಜ ಇರುವುದೇ ಹೀಗೋ ಎಂಬುದು ಸೂರಿಯ ಕೇಳುಗರಿಗಂತೂ ಅರ್ಥವಾಗುವುದಿಲ್ಲ. ಇರಲಿ, ರತ್ನಳನ್ನು ಮೇಸ್ಟ್ರು ನಾರಾಯಣಪ್ಪನೇ ತುಮಕೂರಿನಲ್ಲಿ ನಸರ್ಿಂಗ್ ಕಾಲೇಜಿಗೆ ಸೇರಿಸಿದ. ಹಾಸ್ಟೆಲ್ನಲ್ಲಿ ಬಿಟ್ಟ. ರತ್ನ ತುಮಕೂರು ಸಿಟಿಯಲ್ಲಿ ಅವಮಾನದಿಂದ ನೊಂದುಕೊಳ್ಳುವ ಬದಲು ಗಟ್ಟಿಯಾದಳು. ಇದು ಸಹಜವೆಂದು ಭಾವಿಸಿದಳು. ನಾರಾಯಣಪ್ಪ ಅಗತ್ಯಕ್ಕಿಂತಲೂ ಹೆಚ್ಚು ಹಾಸ್ಟೆಲ್ಗೆ ಬರುವುದನ್ನು ತಡೆದಳು. ನರ್ಸಿಂಗ್ ಕಾಲೇಜಿನ ಪಕ್ಕದಲ್ಲೇ ಇದ್ದ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದ ಹರಿಯಾಣದ ವಿನಯ್ ಚೌತಾಲನ ಮನಗೆದ್ದಳು. ಆತ ಈಕೆಯನ್ನು ಪ್ರೀತಿಸಿದ. ಒಪ್ಪಿ ಮದುವೆಯಾದ.
ಹಳೇ ಕತೆಯನ್ನೆಲ್ಲಾ ಚೌತಾಲನಿಗೆ ರತ್ನ ಹೇಳಿದಳೇ ಇಲ್ಲವೇ ಎಂಬುದು ಇಲ್ಲಿ ಅಪ್ರಸ್ತುತ. ಅವರಿಬ್ಬರು ಅಮೇರಿಕಾ ಸೇರಿ 10ವರ್ಷ ಕಳೆದರೂ ನಮ್ಮೂರಿಗೆ ರತ್ನ ಎಲ್ಲಿದ್ದಾಳೆ ಎಂಬ ಸುದ್ದಿಯೇ ಗೊತ್ತಿರಲಿಲ್ಲ. ಎಲ್ಲವನ್ನು ಜನ ಮರೆತಿದ್ದರು. ರಾಮಕ್ಕನ ಕುಟುಂಬವಂತೂ ಅದನ್ನೆಲ್ಲಾ ನೆನಪು ಮಾಡಿಕೊಳ್ಳಲು ಸಮಯವಿಲ್ಲದಂತೆ ಬಡತನದಲ್ಲಿ ಬೇಯುತ್ತಿತ್ತು. ಉಳಿದ ಐದು ಹೆಣ್ಣು ಮಕ್ಕಳನ್ನು ರಾಮಕ್ಕ-ರಂಗಣ್ಣ ಮದುವೆ ಮಾಡುವ ಹೊತ್ತಿಗೆ ಹೈರಾಣಾಗಿದ್ದರು. ಈ ನಡುವೆ ಅಪ್ಪ ಸತ್ತ ಸುದ್ದಿ ರತ್ನಳಿಗೆ 2ವರ್ಷದಷ್ಟು ತಡವಾಗಿ ತಿಳಿದು ಅಮೇರಿಕಾದಿಂದ ಊರಿಗೆ ಬಂದಳು. ಚೌತಾಲ ಜೊತೆಗಿದ್ದ. ಒಂದು ಮಗು ಕೂಡ ಜೊತೆಗಿತ್ತು. ಅದಕ್ಕೆ ದೇವಿಲಾಲ ಎಂದು ಹೆಸರಿಟ್ಟಿರುವುದಾಗಿ ರತ್ನ ಹೇಳಿದಳು. ಅಪ್ಪನ ಹೆಸರಿನಲ್ಲಿ ಶಾಲಾ ಕಟ್ಟಡವೊಂದನ್ನು ಕಟ್ಟಿಸುವಂತೆ ನಮ್ಮೂರ ಮೇಸ್ಟ್ರಿಗೆ ಹೇಳಿದ ರತ್ನ, ಅದೆಷ್ಟೋ ಚೆಕ್ನ್ನು ಸ್ಥಳದಲ್ಲೇ ಬರೆದುಕೊಟ್ಟಳು. ಅಷ್ಟರಲ್ಲಿ ಎಲ್ಲಿಂದಲೋ ಓಡಿ ಬಂದ ಸೂರಿ ಅಕ್ಕನನ್ನು ತಬ್ಬಿಕೊಂಡು ಒಂದೇ ಸಮನೇ ಅತ್ತುಬಿಟ್ಟ. ರತ್ನ ತನ್ನ ಮನೆಗೆ ಹೋದಳು. ರಾಮಕ್ಕ ಏನೂ ಮಾತಾಡಲಿಲ್ಲ. ದೇವಿಲಾಲನನ್ನು ಎತ್ತಿಕೊಂಡು ಮುದ್ದಾಡಿದ್ದಳು.