ಬೆಂಗಳೂರಿನಲ್ಲಿ ವಾಸವಾದರೂ ನನ್ನೂರು ಚಿತ್ರದುರ್ಗಕ್ಕೆ ಎರಡುವಾರಗಳಿಗೊಮ್ಮೆ ಹೋಗಿ ಬರುತ್ತಿರುತ್ತೇನೆ. ಬೆಳಗ್ಗೆ 7ಕ್ಕೆ ಚಿತ್ರದುರ್ಗ ಬಿಟ್ಟರೂ ಕಚೇರಿ ಸಮಯಕ್ಕೆ ಸರಿಯಾಗಿ ಬೆಂಗಳೂರಿಗೆ ಬಂದು ತಲುಪಬಹುದು. ರಾಜಧಾನಿಗೆ ಬೆಳಗಿನ ತಡೆರಹಿತ ಬಸ್ಸಿನಲ್ಲಿ ಬರುವ ಜನರಲ್ಲಿ ಹೆಚ್ಚಿನವರು ರಾಜಕಾರಣಿಗಳ ಪುಡಾರಿ ಹಿಂಬಾಲಕರು, ಸರಕಾರಿ ಉದ್ಯೋಗಿಗಳು. ವಿಧಾನಸೌಧದಲ್ಲೋ, ಕಾವೇರಿ ಭವನದಲ್ಲೋ ಒಂದೇ ದಿನದಲ್ಲಿ ಕೆಲಸ ಮುಗಿಸಿ ಹಿಂತಿರುಗುವವರು. ಎಲ್ಲೋ ಕೆಲವೇ ಬೆರಳೆಣಿಕೆಯಷ್ಟು ನನ್ನಂತ ತಲೆತಿರುಕ ಬ್ಯಾಚುಲರ್ಸ್ ಗಳು ವಾರಾಂತ್ಯ ರಜೆಯಲ್ಲಿ ಅಪ್ಪ-ಅಮ್ಮನ ನೋಡಿ, ಹಳೇ ಸ್ನೇಹಿತರ ಮಾತನಾಡಿಸಿ ಮತ್ತದೇ ಬೆಂಗಳೂರಿಗೆ ವಾಪಸ್ ಆಗುತ್ತಿರುವವರು.
ಇವರ ನಡುವೆ ಬೆಂಗಳೂರಿಗೆ ಮರಳುವಾಗ ನನ್ನ ಪಕ್ಕದಲ್ಲಿ ಸುಂದರವಾದ ಯುವಕ ಬಂದು ಕುಳಿತ. ಬಹುಷಃ ಸಾಫ್ಟ್ ವೇರ್ ಕಂಪನಿಯ ಉದ್ಯೋಗಿ ಇರಬೇಕು. ಲೀ ಜೀನ್ಸು, ವುಡ್ ಲ್ಯಾಂಡ್ ಷ್ಯೂಸು, ಕೈಯಲ್ಲಿ ಎರಿಕ್ಸನ್ನು, ಕಿವಿಯಲ್ಲಿ ಆಪಲ್ ಇಯರ್ ಫೋನು. ಬಸ್ ಹೊರಟಿತು. ಲೇಡಿ ಕಂಡಕ್ಟರ್ ಕೈಗೆ ನೂರಿಪ್ಪತ್ತು ಕೊಟ್ಟು ಟಿಕೇಟ್ ಮಾಡಿಸಿ ರಾಹುಲ್ ಸಾಂಕ್ರುತ್ಯಾಯನರ 'ವೋಲ್ಗಾ - ಗಂಗಾ' ತೆರೆದು ಓದುತ್ತಾ ಕುಳಿತೆ.
ಕೆಲವು ನಿಮಿಷಗಳ ಪ್ರಯಾಣದ ನಂತರ ಪಕ್ಕದಲ್ಲೆಲ್ಲೋ ರಾಜ್ ಹಾಡಿನ ದ್ವನಿ ಕೇಳಿತು. ನನ್ನ ಪಕ್ಕದಲ್ಲಿ ಕುಳಿತಿದ್ದ ಯುವಕನ ಕೈಯಲ್ಲಿದ್ದ ಐಪೋಡಿನಲ್ಲಿ 'ಬಭ್ರುವಾಹನ' ಚಿತ್ರದ 'ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ' ಹಾಡಿನ ವಿಡಿಯೋ. ನನಗೆ ಸಖತ್ ಆಶ್ಚರ್ಯ. ಜೊತೆಗೆ ಖುಷಿ. ನನ್ನಲ್ಲಿ ಈ ಹಾಡಿನ ವಿಡಿಯೋ ಇರಲಿಲ್ಲ. ತಕ್ಷಣ ಆ ಯುವಕನನ್ನು ಪರಿಚಯ ಮಾಡಿಕೊಂಡು ಬ್ಲೂಟೂತ್ ಮೂಲಕ ನನ್ನ ಮೊಬೈಲಿಗೆ ವರ್ಗಾಯಿಸಿಕೊಂಡೆ. ನಂತರ ಹೇಳಿದ 'ಬಭ್ರುವಾಹ'ನದ ಈ ಹಾಡು ಈಗ ಅವನ ವಯಸ್ಸಿನ ಹುಡುಗರಲ್ಲಿ ಬಹು ಜನಪ್ರಿಯ ವಿಡಿಯೋ ತುಣುಕಂತೆ.
'ಬಭ್ರುವಾಹನ' ಚಿತ್ರದ ಈ ಹಾಡು ಗೊತ್ತಿಲ್ಲದ ಕನ್ನಡಿಗರು ಅತಿವಿರಳ. ಡಾ.ರಾಜ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದ ಈ ಹಾಡಿನ ದೃಶ್ಯ ಎಷ್ಟು ಸಲ ಕೇಳಿದರೂ, ನೋಡಿದರೂ ಮತ್ತೆ ಮತ್ತೆ ನೋಡಬೇಕು ಅನ್ನಿಸುತ್ತದೆ. ದಿವಂಗತ ಟಿ.ಜಿ.ಲಿಂಗಪ್ಪನವರ ಸಂಗೀತ ಮತ್ತು ಹುಣಸೂರು ಕೃಷ್ಣಮೂರ್ತಿಯವರ ಸಾಹಿತ್ಯದಲ್ಲಿ ಮೇಳೈಸಿದ ಈ ಹಾಡು, ಕನ್ನಡ ಚಿತ್ರಲೋಕದಲ್ಲಿ ಎಂದೂ ಮರೆಯದ ಹಾಡು. ಡಾ.ರಾಜ್ ಮತ್ತು ಪಿ.ಬಿ.ಶ್ರೀನಿವಾಸ್ ಪೈಪೋಟಿಗೆ ಬಿದ್ದವರಂತೆ ಹಾಡಿದ್ದಾರೆ. 1977ರಲ್ಲಿ ತೆರೆಕಂಡ ಈ ಚಿತ್ರವನ್ನು ಕೆಸಿಎನ್ ಗೌಡ ನಿರ್ಮಿಸಿದ್ದರು.
ನಿಮಗಾಗಿ ಬಭ್ರುವಾಹನ ಚಿತ್ರದ ಆ ಹಾಡಿನ ಸಾಲುಗಳು ಜೊತೆಯಲ್ಲಿ ವಿಡಿಯೋ .....
ಬಭ್ರುವಾಹನ : ಏನು ಪಾರ್ಥ. ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿ ನನ್ನನ್ನು ಗೆಲ್ಲಲಾರೆ. ಈಗ ಆ ಶಕ್ತಿ ನಿನ್ನಲ್ಲಿಲ್ಲ. ಪರಮ ಪತಿವ್ರತೆಯನ್ನು ನಿಂದಿಸಿದ ಮರು ಕ್ಷಣವೇ ನಿನ್ನ ಪುಣ್ಯವೆಲ್ಲಾ ಉರಿದು ಹೋಗಿ, ಪಾಪದ ಮೂಟೆ ನಿನ್ನ ಹೆಗಲ ಹತ್ತಿದೆ. ಎತ್ತು ನಿನ್ನ ಗಾಂಢೀವ. ಹೂಡು ಪರಮೇಶ್ವರನು ಕೊಟ್ಟ ಆ ನಿನ್ನ ಪಾಶುಪತಾಸ್ತ್ರ. ಶಿವನನ್ನು ಗೆದ್ದ ನಿನ್ನ ಶೌರ್ಯ ನನಗೂ ಸ್ವಲ್ಪ ತಿಳಿಯಲಿ. ಅಥವಾ ಶಿವನನ್ನು ಗೆದ್ದೇ ಎಂಬ ನಿನ್ನ ಅಹಂಕಾರ ನನ್ನಿಂದಲೇ ಮಣ್ಣಾಗಲಿ.
ಅರ್ಜುನ : ಮದಾಂಧ. ಅವರಿವರನ್ನು ಗೆದ್ದೇ ಎಂಬ ಅಹಂಕಾರದಿಂದ ಕೊಬ್ಬಿದ ಮೂರ್ಖ. ಸುರಲೋಕಕ್ಕೆ ಸೋಪಾನ ಕಟ್ಟಿ, ಮತ್ಸ್ಯ ಯಂತ್ರವನು ಭೇದಿಸಿ, ರಣಾಂಗಣದಲ್ಲಿ ವೀರವಿಹಾರ ಮಾಡಿದ ಅರ್ಜುನನ ಭುಜಬಲದ ಪರಾಕ್ರಮ ನಿನಗೇನು ತಿಳಿದಿದೆಯೋ.
ಬಭ್ರುವಾಹನ : ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ
ಸಮರದೋಳ್ ಆರ್ಜಿಸಿದ ಆ ನಿನ್ನ ವಿಜಯಗಳ ಮರ್ಮ
ಎಲ್ಲದಕು ಕಾರಣನು ಶ್ರೀಕೃಷ್ಣ ಪರಮಾತ್ಮ
ಹಗಲಿರುಳು ನೆರಳಂತೆ ತಲೆ ಕಾಯ್ದು ಕಾಪಾಡಿ ಜಯವ ತಂದಿತ್ತ ಆ ಯದುನಂದನ
ಅವನಿಲ್ಲದೆ ಬಂದ ನೀನು ತೃಣಕ್ಕೆ ಸಮಾನ
ಅರ್ಜುನ : ಅಸಾಹಾಯ ಶೂರ ನಾ ಅಕ್ಷೀಣ ಬಲನೋ
ಹರನೊಡನೆ ಹೋರಾಡಿ ಪಾಶುಪತವಂ ಪಡೆದವನೋ
ಆಗ್ರಹದೊಳೆದುರಾಗೊ ಅರಿಗಳಂ ನಿಗ್ರಹಿಸೋ ವ್ಯಾಘ್ರನಿವನೋ
ಉಗ್ರಪ್ರತಾಪೀ
ಬಭ್ರುವಾಹನ : ಓ ಹೊ ಒ ಹೋ ಉಗ್ರಪ್ರತಾಪಿ ಆ!
ಸಭೆಯೊಳಗೆ ದ್ರೌಪತಿಯ ಸೀರೆಯನು ಸೆಳೆವಾಗ ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯ
ನೂಪುರಂಗಳ ಕಟ್ಟಿ ನಟಿಸಿ ತಕಥೈಯಂದು ನಾಟ್ಯ ಕಲಿಸಿದ ನಪುಂಸಕ ನೀನು
ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇದಿಸದೆ ಮಗನನ್ನು ಬಲಿ ಕೊಟ್ಟ ಭ್ರಷ್ಟಾ ನೀನು
ಗಂಡುಗಲಿಗಳ ಗೆಲ್ಲೊ ಗುಂಡಿಗೆಯು ನಿನಗೆಲ್ಲೋ
ಖಂಡಿಸಿದೇ ಉಳಿಸುವೆ ಹೋಗೊ ಹೋಗೆಲೋ ಶಿಖಂಡಿ
ಅರ್ಜುನ : ಫಡ ಫಡ ಶಿಖಂಡಿಯಂದಡಿಗಡಿಗೆ ನುಡಿಯ ಬೇಡೆಲೋ ಮೂಢ
ಭಂಡರೆದೆ ಗುಂಡಿಗೆಯ ಖಂಡಿಸುತಾ ರಣಚಂಡಿಗೌತಣವೀವ ಈ ಗಾಂಢೀವಿ
ಗಂಡುಗಲಿಗಳ ಗಂಡ ಉದ್ಧಂಡ ಭೂಮಂಡಲದೊಳಖಂಡ ಕೀರ್ತಿ ಪ್ರಚಂಡ
ಬಭ್ರುವಾಹನ : ಚಂಡನೋ ಪ್ರಚಂಡನೋ ಪುಂಡನೋ ನಿರ್ಧರಿಸುವುದು ರಣರಂಗ
ಹೂಡು ಬಾಣಗಳ ಮಾಡುವೆ ಮಾನಭಂಗ
ಅರ್ಜುನ : ಕದನದೋಳ್ ಕಲಿಪಾರ್ಥನಂ ಕೆಣಕಿ ಉಳಿದವರಿಲ್ಲ
ಬಭ್ರುವಾಹನ : ಅಬ್ಬರಿಸಿ ಬೊಬ್ಬಿರಿದರಿಲ್ಲಾರಿಗೂ ಭಯವಿಲ್ಲ
ಅರ್ಜುನ : ಆರ್ಭಟಿಸಿ ಬರುತಿದೆ ನೋಡು ಹಂತಕನಾಹ್ವಾನ
ಬಭ್ರುವಾಹನ : ಹಂತಕನಿಗೆ ಹಂತಕನು ಈ ಬಭ್ರುವಾಹನ
ಅರ್ಜುನ : ಮುಚ್ಚು ಬಾಯಿ ಜಾರಿಣಿಯ ಮಗನೆ
ಬಭ್ರುವಾಹನ : ಏ ಪಾರ್ಥ. ನನ್ನ ತಾಯಿ ಜಾರಿಣಿಯೋ ಪತಿವ್ರತೆಯೋ ಎಂದು ನಿರ್ಧರಿಸಲೇ ಈ ಯುದ್ದ.
1 comment:
hi..... sawmi Avare lekana chikkadadru chennagide.... keep posting...
Post a Comment