Thursday, September 25, 2008

ಒಂಟಿ ಹೃದಯ...


ಳೆದ ಒಂದು ವಾರದಿಂದ ಯಾಕೋ ಮನಸ್ಸಿಗೆ ನೆಮ್ಮದಿಯೇ ಇಲ್ಲದಂತಾಗಿತ್ತು. ಕಾರಣಗಳು ನೂರಾರಿವೆ. ಅವುಗಳಲ್ಲಿ ಮುಖ್ಯ ಎನ್ನಬಹುದಾದರೆ ಮತಾಂಧರು ನಡೆಸುತ್ತಿರುವ ದಾಳಿ, ಬಲಹೀನ ಸರಕಾರದ ಒಡೆಯರು ನೀಡುತ್ತಿರುವ ಲಜ್ಜೆಗೇಡಿ ಹೇಳಿಕೆಗಳು, ಕೋಮುಶಕ್ತಿಗಳ ಮೇಲುಗೈ, ಷೇರುಪೇಟೆ ಕುಸಿತದಿಂದಾಗಿ ಆಗುತ್ತಿರುವ ನಷ್ಟ, ವೈಯಕ್ತಿಕವಾಗಿ ಏಕಾಗಿತನ ಮುಂತಾದವುಗಳು. ಸಾಮಾನ್ಯವಾಗಿ ಬೇಸರವಾದಾಗ ಕೆಲವರು ಇಸ್ಪೀಟು, ಜೂಜುಗಳು, ಮದ್ಯಪಾನ, ಸೀಗರೇಟು ಇನ್ನಿತರೆ ಚಟಗಳಲ್ಲಿ ವೇಳೆ ಕಳೆಯಬಹುದು. ಆದರೆ ನನಗೆ ಈ ಯಾವ ಚಟಗಳಲ್ಲೂ ಆಸಕ್ತಿಯಿಲ್ಲ. ಹೀಗೆಂದು ಹೇಳಿ ನನ್ನನ್ನು ನಾನು ಒಳ್ಳೆಯವನು ಎಂದು ಆರೋಪಿಸಿಕೊಳ್ಳುತ್ತಿಲ್ಲ. ನನಗೆ ಯಾಕೋ ಮೊದಲಿನಿಂದಲೂ ಇವುಗಳು ಅಂಟಿಕೊಳ್ಳಲಿಲ್ಲ. ಟೀ ಕಾಫೀಯೂ ರುಚಿಸುವುದಿಲ್ಲ. ಮತ್ತೆ ಕೆಲವರು ಹರಟೆಯನ್ನೇ ಹವ್ಯಾಸ ಮಾಡಿಕೊಂಡಿರುತ್ತಾರೆ. ಎಲ್ಲೋ ಕೆಲವರು ತಮ್ಮ ತೀವ್ರ ದುಗುಡ, ದುಮ್ಮಾನದ ವೇಳೆಯಲ್ಲಿ ತಮ್ಮ ನೆಚ್ಚಿನ ಪುಸ್ತಕಗಳಿಗೆ ಮೊರೆ ಹೋಗುತ್ತಾರೆ, ಅಂತವರಲ್ಲಿ ನಾನೂ ಒಬ್ಬ.
ಸುಖಕ್ಕಾಗಿ ಕಾತರಿಸುವ
ಕೋಟ್ಯಂತರ ಜನಕ್ಕೆ ಹಣ ನೆಲ
ಹೊನ್ನು ಬೇಕು.
ಕೆಲವರಿಗೆ ಪ್ರೀತಿ
ಎಲ್ಲೋ ಕಾಣದ ಕೆಲವರಿಗೆ ಕುಗ್ರಾಮದ
ಹಿತ್ತಿಲೊಂದರ ಹೂವು
ಬಡಜೋಗಿಯ ಹಾಡು.
ಕಛೇರಿಯಲ್ಲಿನ ಕೆಲಸ ಮನಸ್ಸನ್ನು ಮುದುಡಿಸಿತ್ತು. ಹೊರಗೆ ಎಲ್ಲಾದರೂ ಸುತ್ತೋಣವೆಂದರೆ ರಜೆ ಸಮಸ್ಯೆ. ಇಂತಹ ಹೊತ್ತಿನಲ್ಲಿ ಓದಿಗೆ ಮೊರೆ ಹೋಗುತ್ತೇನೆ. ನನ್ನ ಪ್ರೀತಿಯ ಲೇಖಕ ತೇಜಸ್ವಿಯವರ 'ಕರ್ವಾಲೋ' ಅಥವಾ ಲಂಕೇಶರ 'ಗುಣಮುಖ'ನೋ, ಅಥವಾ "ಮನುಷ್ಯನ ಮನಸ್ಸು ಯಾವ ಹೆಣ್ಣನ್ನು ಕುರಿತು ಹೆಚ್ಚು ಧ್ಯಾನಿಸುತ್ತದೆ; ಆತನಿಗೆ ಒಲಿದ ಹೆಣ್ಣನ್ನೋ ಅಥವಾ ಆತನಿಗೆ ಒಲಿಯದೆ ಹೋದ ಹೆಣ್ಣನ್ನೋ?" ಎಂದು ಕೇಳುವ ಏಟ್ಸ್ ಕವಿತೆಗಳನ್ನೋ ಓದಿ ಮನಸ್ಸಿನ ಗಂಟು ಸಡಿಲಗೊಳಿಸಿಕೊಳ್ಳುತ್ತೇನೆ. ನೆನ್ನೆ ಹಾಗೆಯೇ ಆಯಿತು. ಲಂಕೇಶರ 'ಟೀಕೆ-ಟಿಪ್ಪಣಿ'ಯಲ್ಲಿನ ಒಂದು ಬರಹ ಓದಿ ನನ್ನ ಸದ್ಯದ ಎಲ್ಲ ನೋವುಗಳನ್ನು ಮರೆತು ಕ್ರಮೇಣ ಮನಸ್ಸು ಮುದಗೊಳ್ಳತೊಡಗಿತು. ರಾತ್ರಿ ಸುಖ ನಿದ್ದೆ ಆವರಿಸಿತ್ತು.

ನೀವೂ ಓದಿ ಹೊಸ ಚೈತನ್ಯ ಪಡೆಯಬಹುದು ಎಂಬ ನಂಬಿಕೆಯಿಂದ ಆ ಲೇಖನದ ಕೆಲ ಭಾಗ ಕೆಳಗೆ ಕೊಟ್ಟಿದ್ದೇನೆ.

"ನನ್ನನ್ನು ಖುಷಿಪಡಿಸಿ. ನನಗೆ ಜೀವಿಸುವ ಆಶೆ ಕೊಡಿ..."
ಆ ಕಡೆಯಿಂದ ಫೋನಿನಲ್ಲಿ ಬರುತ್ತಿದ್ದ ಹೆಣ್ಣುಮಗಳ ಧ್ವನಿ.
ಆಗತಾನೆ ನನ್ನ ನಿತ್ಯದ ಬ್ಯಾಡ್ಮಿಂಟ್ ನಿಂದ ಬಂದಿದ್ದೆ. ರಾತ್ರಿ ಏಳುಗಂಟೆ; ಎಲ್ಲಿಯಾದರೂ ಹೋಗೋಣವೆಂದು ನನ್ನ ಶಾಲನ್ನು ಹೆಗಲ ಮೇಲೆ ಹಾಕಿಕೊಂಡು ಟೇಬಲ್ಲಿನ ಕಾಗದಗಳನ್ನು ಓರಣಗೊಳಿಸಿ ಒಮ್ಮೆ ಚಿಂತಿಸಿದ್ದೆ, ಮತ್ತೊಂದು ದಿನ ಮೆಲ್ಲಗೆ ತೆವಳುತ್ತ ಕಣ್ಣರೆಯಾಗಲಿತ್ತು. ಪಡುವಣದ ಕೆಂಪು ಮಾಸತೊಡಗಿತ್ತು; ನಕ್ಷತ್ರಗಳು ಮುಗುಳ್ನಗತೊಡಗಿದ್ದವು. ನನ್ನಂತೆಯೇ ಇಡೀ ಬೆಂಗಳೂರು ದಣಿದ ಮೈಮನಸ್ಸುಗಳೊಡನೆ ರಾತ್ರಿಗೆ ಸಿದ್ಧವಾಗತೊಡಗಿತ್ತು. ಆಗತಾನೆ, ಕೇವಲ ಹತ್ತಾರು ನಿಮಿಷಗಳ ಹಿಂದೆ, ಗೆಳೆಯರೊಬ್ಬರೊಂದಿಗೆ ಮಾತಾಡುತ್ತ ಬೆವರು, ಆಟದಿಂದ ಜುಮ್ಮೆನ್ನುವ ಮೈ, ನಿಧನಿಧಾನಕ್ಕೆ ಏರುತ್ತಿದ್ದ ಚಳಿ ಮತ್ತು ಮೃದುವಾಗಿ ಅಡಗುತ್ತಿದ್ದ ವಾಹನಗಳ ಸದ್ದಿನಲ್ಲಿ ಕೂತು ಒಂದು ಸುಂದರ ದಿನವನ್ನು ಬೀಳ್ಕೊಟ್ಟಿದ್ದೆ. ಹಾಗೆಯೇ ನಾನು ನೆಡಬೇಕೆಂದಿದ್ದ ಮರಗಳು, ಹೂಗಿಡಗಳು, ಕುಂಡದಲ್ಲಿ ನಗಲಿರುವ ಗುಲಾಬಿಗಳ ಬಗ್ಗೆ ಚಿಂತಿಸಿದ್ದೆ. ಒಮ್ಮೆಗೇ ಹತ್ತಾರು ಕಡೆ ಹರಿದು ತಲ್ಲಣಗೊಳ್ಳುವ ಮನಸ್ಸನ್ನು ಕಂಡು ಮುಗುಳ್ನಗುತ್ತಲೇ ಗೆಳೆಯರ ಮಾತಿನತ್ತ ಕಿವಿಗೊಟ್ಟಿದ್ದೆ.
ಅವನ್ನೆಲ್ಲ ಮುಗಿಸಿ ಬಂದಾಗ ಆರೂ ಮುಕ್ಕಾಲು ಗಂಟೆ; ನಮ್ಮ ಕಛೇರಿಯಲ್ಲಿ ಯಾರೂ ಇರಲಿಲ್ಲ. ಸಿದ್ಧವಾಗಿ ಹೊರಗೆ ಹೊರಡುವಷ್ಟರಲ್ಲಿ ಆ ಫೋನ್ ಕರೆ ಬಂದಿತ್ತು.
"ನೀವು ಯಾರು? ಲಂಕೇಶ್ ಮಾತಾಡ್ತಿರೋದು" ಅಂದೆ; ಆಕೆ ಧ್ವನಿ ಎಳೆಯ ಧ್ವನಿಯಾಗಿತ್ತು.
"ದಯವಿಟ್ಟು ಕ್ಷಮಿಸಿ. ನಾನು ಯಾರು ಅಂತ ಹೇಳಲ್ಲ. ಅದು ನಿಮಗೆ ಮುಖ್ಯವೂ ಅಲ್ಲ. ನನ್ನ ಹೆಸರು ಕೇಳಿ ನಿಮಗೆ ಏನೂ ಪ್ರಯೋಜನವಿಲ್ಲ" ಅಂದಳು ಆಕೆ. ಅವಳ ಧ್ವನಿ ಭಾರವಾಗಿತ್ತು. ಇಂಗ್ಲಿಷ್ ನಲ್ಲಿ ಮಾತಾಡ್ತಿದ್ದಳು.
" ಸರಿ, ಹೆಸರು ಹೇಳಬೇಡಿ, ಏನು ಬೇಕಿತ್ತು?" ಅಂದೆ.
"ಏನಿಲ್ಲ. ತುಂಬ ಬ್ಯುಸಿಯಾಗಿದ್ದೀರಾ? ನಿಮಗೆ ತೊಂದರೆ ಕೊಡೋಕೆ ನನಗೆ ಇಷ್ಟವಿಲ್ಲ" ಅಂದಳು.
"ಹಾಗೇನಿಲ್ಲ, ಎಲ್ಲಿಗೋ ಹೊರಟಿದ್ದೆ. ಪರವಾಗಿಲ್ಲ, ಮಾತಾಡಿ" ಅಂದೆ.
" ತುಂಬ ಬೇಸರವಾಗಿದೆ. ಮೈಪರಚಿಕೊಳ್ಳೋ ಏಕಾಂಗಿತನ. ಐದು ನಿಮಿಷದಿಂದ ಸುಮ್ಮನೆ ಅಳ್ತಾ ಕೂತಿದ್ದೇನೆ. ನನ್ನ ಮೆಚ್ಚಿನ ಕವಿ ಖಲೀಲ್ ಗಿಬ್ರಾನನ ಪದ್ಯಗಳನ್ನು ಓದಿದೆ; ಆತ ಎಷ್ಟು ಒಳ್ಳೆಯ ಕವಿ, ಆದರೆ ಕೆಟ್ಟ ಮನುಷ್ಯ ಗೊತ್ತೆ- ದುಃಖದುಮ್ಮಾನವನ್ನೇ ಅಪ್ಪಿಕೊಳ್ಳುವಂತೆ, ಸದಾ ಅಳ್ತಿರುವಂತೆ ಮಾಡ್ತಾನೆ ಗಿಬ್ರಾನ್..."
"ನೀವು ವಿದ್ಯಾರ್ಥಿನಿ ಇರಬೇಕಲ್ಲವಾ?" ಅಂದೆ.
"ಅಲ್ಲ, ಅಮೇರಿಕ ವಿಶ್ವವಿದ್ಯಾನಿಲಯದ ಒಂದು ಇಲಾಖೆಗಾಗಿ ಇಲ್ಲಿ ಸಂಶೋಧನೆ ನಡೆಸುವ ಹುಡುಗಿ ನಾನು. ಒಮ್ಮೊಮ್ಮೆ ತುಂಬ ಬೇಸರವಾಗುತ್ತೆ... ಇವತ್ತು ಎಷ್ಟು ಬೇಸರವಾಯಿತೆಂದರೆ ಯಾರಾದರೊಬ್ಬರೊಂದಿಗೆ ಮಾತಾಡಲೇಬೇಕು ಅನ್ನಿಸಿನಿಗೆ ಫೋನ್ ಮಾಡಿದೆ. ನನ್ನನ್ನ ಖುಷಿಪಡಿಸಿ, ನನಗೆ ಜೀವಿಸುವ ಆಶೆ ಕೊಡಿ. ದಯವಿಟ್ಟು ನನ್ನ ಮನಸ್ಸು ನೋಯಿಸಬೇಡಿ. ಹೇಳಿ, ಈ ಜೀವನ ನಡೆಸೋದ್ರಿಂದ ಏನಾದ್ರೂ ಪ್ರಯೋಜನವಿದೆಯೆ?"
ಹಾಗೆಂದು ಹೇಳಿ ಗಟ್ಟಿಯಾಗಿ ಅತ್ತಳು ಹುಡುಗಿ.
"ನೋಡು ಮರಿ, ನೀನು ಯಾರು, ನಿನ್ನ ಹಿನ್ನಲೆ ಏನು ಅಂತ ಗೊತ್ತಿಲ್ಲದೆ ಸುಮ್ಮಸುಮ್ಮನೆ ಹುಚ್ಚನ ಹಾಗೆ ನಗು, ನಗು ಅಂತ ಹೇಳುವವ ನಾನಲ್ಲ, ನಿನ್ನಂತೆಯೇ ನನಗೂ ಅನೇಕ ಸಲ ತೀವ್ರ ಬೇಸರ ಆಗಿದೆ; ಆದರೆ ನಾನು ಸುಖ, ದುಃಖವನ್ನು ಎಷ್ಟು ಗಾಢವಾಗಿ ಅನುಭವಿಸಿದ್ದೇನೆ ಅಂದ್ರೆ, ಈಗ ಕೂತು ಬೇಸರ ಪಡೋಕೆ ಕೂಡ ವೇಳೆ ಇಲ್ಲದಷ್ಟು ಕೆಲಸ ಮಾಡುವ ಕಲೆಯನ್ನು ಕಲ್ತಿದೇನೆ..."
"ಹಾಗಾದ್ರೆ ನಾನು ಸಂತೋಷವಾಗಿ ಸದಾ ಮಾಡಬಹುದಾದ ಕೆಲಸ ಹೇಳಿ..."
ನಾನು ನಕ್ಕು ಕೇಳಿದೆ, "ನೀನು ಯಾರನ್ನೂ ಪ್ರೀತಿಸ್ತಿಲ್ಲವಾ? ನಿನ್ನೆದುರು ನಿಂತು 'ನಾನಿದ್ದೇನೆ, ನಿನ್ನ ವ್ಯಸನವನ್ನೆಲ್ಲ ನನಗೆ ಕೊಡು' ಎನ್ನುವಂಥ ಗೆಳೆಯನಿಲ್ಲವೇ?"
"ನಾನು ನಿಜಕ್ಕೂ ನಂಬಬಹುದಾದ ಗೆಳೆಯ ಸಿಕ್ಕಿಲ್ಲ" ಎಂದು ಮೊತ್ತಮೊದಲಬಾರಿಗೆ ನಕ್ಕು ಹೇಳಿದಳು. "ತಪ್ಪು ತಿಳಿಯಬೇಡಿ, ಆ ಗೆಳೆಯ ನೀವೇ ಆಗಿದ್ದರೆ?" ಅಂದಳು ಹುಡುಗಿ.
"ಹುಚ್ಚು ಹುಡುಗಿ. ನಾನು ಎಲ್ಲ ಸಿಕ್ಕು, ತೊಂದರೆಗಳಿಂದ ಹೊರಬರುತ್ತಿರುವ ಮನುಷ್ಯ; ಬಿಸಿಲುಗುದುರೆಗಳ ಬೆನ್ನು ಹತ್ತಿ ಓಡಾಡುವ ಕಾಲ ಮುಗಿಯಿತು. ಕೇಳ್ತಿದ್ದೀಯ ಮರಿ? ನನಗೆ ನಿನ್ನ ವಯಸ್ಸಿನ ಮಕ್ಕಳಿದ್ದಾರೆ; ದೂರದ, ಹತ್ತಿರದ ಗೆಳತಿಯರಿದ್ದಾರೆ, ಅವರೆಲ್ಲರೂ ಒಂದು ಮಟ್ಟದಲ್ಲಿ ನಿನ್ನಷ್ಟೇ ಅಪರಿಚಿತರು; ಇನ್ನೊಂದು ಮಟ್ಟದಲ್ಲಿ ನನ್ನೊಂದಿಗೆ ಮಾತಾಡುವ, ನನ್ನೊಡನೆ ಓಡಾಡುವ, ನನ್ನ ಮೌನವನ್ನು ಕೂಡ ಹಂಚಿಕೊಳ್ಳುವ ಜನ. ಈ ಜೀವನದಲ್ಲಿ ಏನಾಗುತ್ತೆ ಗೊತ್ತ? ನೀನು ಪುಣ್ಯವಂತೆಯಾಗಿದ್ದರೆ, ನಿನಗೆ ಎರಡು ಅಮೂಲ್ಯ ವಸ್ತುಗಳು ಸಿಗುತ್ತವೆ. ಒಂದು, ನೀನು ನಿನ್ನ ಪೂರ್ತಿ ವ್ಯಕ್ತಿತ್ವವನ್ನು ತೊಡಗಿಸಿ ಮಾಡುಬಲ್ಲ ಕೆಲಸ; ಅದು ನಿನ್ನನ್ನು ಬೆಳೆಸುವ ಜೊತೆಗೇ ನಿನಗೆ ಪ್ರೀತಿ, ವಿಶ್ವಾಸವನ್ನೆಲ್ಲ ತರುತ್ತದೆ; ನಿನ್ನ ಸುತ್ತಣ ಬದುಕಿಗೆ ನೀನು ನೆರವಾಗುವ ಬಗ್ಗೆ ನಿನಗಿರುವ ಅಹಂಕಾರಕ್ಕಿಂತ ಹೆಚ್ಚಾಗಿ ನಿನಗೆ ಬದುಕು ನೀಡಿದ ಕ್ರಿಯಾಶೀಲ ಸಂತೋಷದ ಬಗ್ಗೆ ನಿನ್ನಲ್ಲಿ ಕೃತಜ್ಞತೆ ಹುಟ್ಟುತ್ತೆ. ಆ ಕೃತಜ್ಞತೆಯತ್ತ ನಡೆದಿರುವ ಮನುಷ್ಯ ನಾನು. ಹಳ್ಳಿಯ ಮುಕ್ಕನಾಗಿ ಹುಟ್ಟಿದ ನಾನು ನನ್ನ ಕೆಲಸವನ್ನು ಹುಡುಕಿದೆ; ಅನೇಕ ತಪ್ಪುಗಳನ್ನು, ಸರಿಗಳನ್ನು ಮಾಡಿದೆ; ನಾನೇ ನನ್ನ ಮಾರ್ಗದರ್ಶಕನಾಗಿದ್ದೆ... ಅಥವಾ ನಾನು ಹುಟ್ಟಿದ ಹಳ್ಳಿ ನನ್ನನ್ನು ಬಿಡದ ಆ ಮಲೆನಾಡಿನ ಪರಿಸರ ನನ್ನನ್ನು ನಡೆಸಿತೋ ಗೊತ್ತಿಲ್ಲ. ಅಲ್ಲದೆ, ನಾನು ಸರಿಯಾದ ಮಾರ್ಗದಲ್ಲಿದ್ದೇನೋ ಇಲ್ಲವೋ ಯಾರಿಗೆ ಗೊತ್ತು? ಆದರೆ ನನ್ನ ಕೆಲಸದಿಂದ ನನಗೆ ಅಪಾರ ಸಂತೋಷ ದೊರೆಯುತ್ತಿರುವುದು ಗೊತ್ತು... ಕೇಳ್ತಿದೀಯಾ ಮರಿ? ಕೃತಜ್ಞತೆ ಎರಡನೆಯ ಮುಖ್ಯ ಅಂಶ..."
"ಕೇಳ್ತಿದೇನೆ. ನನ್ನ ಬೇಸರ ಕಡಿಮೆಯಾಗ್ತಿದೆ. ಹೇಳಲಾ? ನಾನು ನಾಟಕಗಳಲ್ಲಿ ನಟಿಸಬೇಕೆಂದು ಬೆಂಗಳೂರಿನ ಇಂಗ್ಲಿಷ್ ನಾಟಕ ತಂಡದಲ್ಲಿದ್ದೆ. ಅಲ್ಲ ಎಷ್ಟು ಸಣ್ಣ ಜನರಿದ್ದಾರೆ ಅಂದ್ರೆ, ನಾನು ಮದ್ರಾಸಿನಿಂದ ಒಂದು ನಾಟಕದ ಸ್ಕ್ರಿಪ್ಟ್ ತರಿಸಿಕೊಡಲಿಲ್ಲ ಎಂದು ನಿರ್ದೇಶಕನೊಬ್ಬ (ಅವನ ಹೆಸರು ಹೇಳಿದಳು) ನನ್ನ ಮೇಲೆ ಕೋಪಗೊಂಡ ಬೈದ. (ಆಗ ನಾನು ಇಂಗ್ಲಿಷ್ ನಾಟಕಗಳ ಶ್ರೀನಿವಾಸಗೌಡರ ಬಗ್ಗೆ ಹೇಳಿದೆ) ಗೊತ್ತು, ಅವರೂ ಗೊತ್ತು. ನನಗೆ ಇವರೆಲ್ಲರಿಂದ ಯಾವ ನೆಮ್ಮದಿಯೂ, ಪ್ರೋತ್ಸಾಹವೂ ಸಿಗಲಿಲ್ಲ" ಅಂದು ನಕ್ಕಳು.
"ಹೀಗೆ ನಾವಿಬ್ಬರೂ ಹೆಸರುಗಳನ್ನು ಹೇಳ್ತಾ ಹೋದ್ರೆ ನನಗೆ ನಿನ್ನ ಹೆಸರು ಊಹಿಸೋದು ಸುಲಭವಾಗುತ್ತೆ. ಅದೆಲ್ಲಬೇಡ. ನಿನ್ನ ತೀವ್ರ ದುಃಖದ ವೇಳೆಯಲ್ಲಿ ನನಗೆ ಫೋನ್ ಮಾಡಿದ್ದಕ್ಕೆ, ಆ ನಿನ್ನ ವಿಶ್ವಾಸಕ್ಕೆ ನನಗೆ ಸಂತೋಷವಾಗಿದೆ. ನಿನಗೆ ಯಾವುದೇ ರೀತಿಯ ಮಾನಸಿಕ ನೆರವು ಬೇಕಾದರೆ ಫೋನ್ ಮಾಡು; ಮತ್ತು ದಯವಿಟ್ಟು ನೆನಪಿಡು, ಬದುಕು ಮೂಲಭೂತವಾಗಿ ಸ್ವಾರ್ಥಿಗಳಿಂದ ಕೂಡಿದ್ದು; ಈ ಸ್ವಾರ್ಥದ ಗುಹೆಯಲ್ಲಿ ಖಾಸಗಿ ವಲಯವನ್ನು, ಪ್ರೀತಿ ವಿಶ್ವಾಸದ ಗೂಡುಗಳನ್ನು ಕಟ್ಟಿಕೊಳ್ಳಬೇಕು; ನಮ್ಮ ಸುಖವನ್ನು ನಮ್ಮ ಅಂತರಾಳದಲ್ಲಿ ಕಾಣುವ ಕಲೆಯನ್ನು ಬೆಳಸಿಕೊಳ್ಳಬೇಕು. ಆದರೆ ಈ ಖಾಸಗಿ ಗ್ರಹಿಕೆಗೆ ಹೊರಜಗತ್ತು ಅನುಭವಗಳನ್ನು ಕೊಡಬೇಕು. ಆಗಲೇ ಸಂಬಂಧಗಳು ಮುಖ್ಯವಾಗೋದು... ನೋಡು, ಎಷ್ಟೇ ಕಿರಿಕಿರಿ, ಬೇಸರ, ಅವಮಾನವೆಲ್ಲ ಇದ್ರೂ ಈ ಜೀವನ ನಿಜಕ್ಕೂ ಜೀವಿಸಲು ಯೋಗ್ಯವಾಗಿದೆ, ಸುಂದರ ಕೂಡ ಆಗಿದೆ, ಇವತ್ತು ಸಂಜೆ ಆಕಾಶದತ್ತ ನೋಡಿದೆಯಾ ಆಕಾಶ ಎಷ್ಟು ಸ್ವಚ್ಛವಾಗಿ ಅಸಂಖ್ಯಾತ ನಕ್ಷತ್ರಗಳ ನಗೆಯಿಂದ ತುಂಬಿತ್ತು. ಈ ಬದುಕಿನಲ್ಲಿ ಒಂದು ಕಾಸನ್ನೂ ಕೂಡ ಕೇಳದೆ ಎಷ್ಟೊಂದು ವಸ್ತುಗಳು ಎಷ್ಟು ತೀವ್ರ ಸಂತೋಷ ಕೊಡುತ್ತವೆ... ಅಂದಹಾಗೆ, ಒಳ್ಳೆಯ ಹುಡುಗನನ್ನು ಪತ್ತೆಹಚ್ಚಿ ಹೆಮ್ಮೆಯಿಂದ ಪ್ರೀತಿಸುವುದನ್ನು ಮರೆಯಬೇಡ. ತುಂಬ ಒಳ್ಳೆಯ ಹುಡುಗರು, ಪ್ರೀತಿಗೆ, ಸ್ನೇಹಕ್ಕೆ ಯೋಗ್ಯವಾದವರು, ನಿನ್ನಷ್ಟೇ ಒಬ್ಬಂಟಿಯಾದವರು ಇದ್ದಾರೆ. ಅವರನ್ನು ತೀರಾ ಕಾಯಿಸಬಾರದು..." ಎನ್ನುತ್ತಿದ್ದಂತೆ ಕುಲುಕುಲು ನಕ್ಕಳು ಹುಡುಗಿ. ಆಕೆಯ ನಗೆ ಮುಗಿಯುವಷ್ಟರಲ್ಲಿ "ಬೈ" ಎಂದು ಹೇಳಿ ಫೋನ್ ಇಟ್ಟು ಹೊರಟೆ.

2 comments:

Anonymous said...

it was nice to re-read Lankesh's one of the best writings. whenever I read this write-up I regain my love for life and start enjoying my living on this earth. despite many paining incidents around the world one should live and let others live. thanks for a wonderful write-up on the blog. i hope you will soon find good-loving heart to battle your loneliness successfully. all the best
- Sumana Ferandes

ದಿನೇಶ್ ಕುಮಾರ್ ಎಸ್.ಸಿ. said...

ನಾನು ತುಂಬ ಇಷ್ಟಪಡುವ ಲಂಕೇಶರ ಈ ಬರೆಹವನ್ನು ಮತ್ತೊಮ್ಮೆ ಓದಲು ಹಚ್ಚಿದ್ದಕ್ಕೆ ತುಂಬಾ ಥ್ಯಾಂಕ್ಸ್.
ನೋಡು, ಎಷ್ಟೇ ಕಿರಿಕಿರಿ, ಬೇಸರ, ಅವಮಾನವೆಲ್ಲ ಇದ್ರೂ ಈ ಜೀವನ ನಿಜಕ್ಕೂ ಜೀವಿಸಲು ಯೋಗ್ಯವಾಗಿದೆ, ಸುಂದರ ಕೂಡ ಆಗಿದೆ...ಎಂಬ ಸಾಲುಗಳು ನೊಂದವರಲ್ಲಿ ಜೀವಚೈತನ್ಯ ಮೂಡಿಸುವಂಥದ್ದು. ಮತ್ತೊಮ್ಮೆ ಥ್ಯಾಂಕ್ಸ್.