ಷ. ಶಟ್ಟರ್ 'ತಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ' ಕೃತಿಯಿಂದ ಪ್ರಸಿದ್ಧರಾದವರು. ಬಹುಷಃ ಕನ್ನಡ ನೆಲದ ವಾಸ್ತು ಮತ್ತು ಶಿಲ್ಪ ಕ್ಷೇತ್ರದ ಅತ್ಯುತ್ತಮ ಸಂಶೋಧಕರಲ್ಲಿ ಒಬ್ಬರು. ಅವರ ಇತ್ತೀಚಿನ ಪುಸ್ತಕ 'ಸೋಮನಾಥಪುರ'. ಅಭಿನವ ಪ್ರಕಾಶನದಿಂದ ಹೊರಬಂದಿದೆ. ಇದು ಕನ್ನಡದ ಮಹತ್ವಪೂರ್ಣ ಸಂಶೋಧನಾ ಪುಸ್ತಕ ಎಂದರೆ ತಪ್ಪಾಗಲಾರದು.
ಷ. ಶಟ್ಟರ್ ಈಗ ಬೆಂಗಳೂರಿನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ನಲ್ಲಿ ಸಂದರ್ಶಕ ಪ್ರಾಧ್ಯಾಪಕರು ಮತ್ತು ಇಂಧಿರಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದ ಆರ್ಟ್ಸ್, ದಕ್ಷಿಣ ವಲಯದ ಗೌರವ ನಿರ್ದೇಶಕರಾಗಿದ್ದಾರೆ. ಶಟ್ಟರ್ ಅವರೇ ಹೇಳುವಂತೆ 'ಸೋಮನಾಥಪುರ' ಗ್ರಂಥದ ಉದ್ದೇಶ ಪ್ರೌಢ ಓದುಗ ಅಥವಾ ಸಂದರ್ಶಕ ಸೋಮನಾಥಪುರದ ಬಗ್ಗೆ ತಿಳಿದುಕೊಳ್ಳಲು ಬೇಕಾದ ಮಾಹಿತಿ ಒದಗಿಸುವುದು.
ಹೊಯ್ಸಳರ ಮತ್ತು ಅವರ ದೇವಾಲಯಗಳ ಪ್ರಸ್ತಾವನೆಯಿಂದ ಪ್ರಾರಂಭವಾಗಿ, ಇಲ್ಲಿಯ ದೇವಾಲಯಗಳ ಇತಿಹಾಸ, ಐತಿಹ್ಯ, ಪೋಷಕ, ವಾಸ್ತು-ಶಿಲ್ಪಿ ಮುಂತಾದವನ್ನು ಚರ್ಚಿಸುತ್ತದೆ. ಶಿಲ್ಪ, ಅರ್ಚನೆ, ಆರ್ಥಿಕ ವ್ಯವಸ್ಥೆಗಳ ಬಗೆಗಿನ ಚಿತ್ರವನ್ನು ಒದಗಿಸುತ್ತದೆ. ಅಲ್ಲದೆ, ಪ್ರಧಾನ ದೇವತೆಗಳ ಪಾಕಶಾಲೆ, ವಸ್ತ್ರಾಭರಣ ಭಂಡಾರ ಮತ್ತು ಮನರಂಜಕ ಬಳಗ ('ನಾಗವಾಸ' ಅಥವಾ ನಾಟ್ಯಗಾರ್ತಿಯರ ಮತ್ತು 'ಮೊಖರಿಗ' ಅಥವ ವಾದ್ಯ ಸಂಗೀತಗಾರ) ಬಗ್ಗೆ ಒಳನೋಟ ನೀಡುತ್ತದೆ.
ಹೊಯ್ಸಳರ ಆಳ್ವಿಕೆಯ ಕಾಲ ( ಸು. ಕ್ರಿ.ಶ. 1000-1336)ದಲ್ಲಿ ಕಟ್ಟಿದ ಅತ್ಯಂತ ಸುಂದರ ದೇವಾಲಯಗಳಲ್ಲಿ ಕೊನೆಯದೂ, ಅಳಿದುಳಿದ ಈ ಶೈಲಿಯ ವಿಷ್ಣು ತ್ರಿಕೂಟಗಳಲ್ಲಿ ಅದ್ಭುತವಾದುದೂ ಎಂಬ ಹಿರಿಮೆ ಸೋಮನಾಥಪುರದ ಕೇಶವ ದೇವಾಲಯದ್ದು. ಏಕಕೂಟ ದೇವಾಲಯಗಳಲ್ಲಿ ಬೇಲುರಿನ ಚನ್ನಕೇಶವ, ದ್ವಿಕೂಟಗಳಲ್ಲಿ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ ಅತ್ಯುತ್ತಮ ಮಾದರಿಗಳು. ವಾಸ್ತು-ಶಿಲ್ಪಿಗಳ ಬಗ್ಗೆ ಸೋಮನಾಥಪುರ ದೇವಾಲಯ ಒದಗಿಸುವ ವಿವರಗಳನ್ನು ಸರಿಗಟ್ಟುವ ಮಾಹಿತಿ ನಮ್ಮ ದೇಶದ ಮಧ್ಯಕಾಲೀನ ದೇವಾಲಯಗಳಲ್ಲೆಲ್ಲೂ ಕಾಣಸಿಗುವುದಿಲ್ಲ. ಐದು ಬಗೆಯಲ್ಲಿ ಅಕ್ಷರ ಸಂಯೋಜನೆ ಮಾಡಿ, ಅರವತ್ತಕ್ಕಿಂತ ಹೆಚ್ಚು ಬಾರಿ ಸಹಿ ಮಾಡಿರುವ ಕೇಶವ ದೇವಾಲಯದ ಶಿಲ್ಪಿಯೊಬ್ಬ ಭಾರತೀಯ ಕಲಾ ಇತಿಹಾಸದಲ್ಲಿ ದಾಖಲೆಯೊಂದನ್ನು ನಿರ್ಮಿಸಿ, ಆಮೂಲಕ ತನ್ನ ಹೆಸರನ್ನು ಚಿರಸ್ಥಾಯಿ ಮಾಡಿಕೊಂಡಿರುವನು. ಇದರ ಪರಿಣಾಮ ಅಲ್ಪಮಟ್ಟಿನದಲ್ಲ, ಏಕೆಂದರೆ 'ಭಾರತೀಯ ಕಲೆ ಅನಾಮಧೇಯ' ಮತ್ತು 'ಭಾರತೀಯ ಶಿಲ್ಪಿಗಳಿಗೆ ವೈಯಕ್ತಿಕತೆಯನ್ನು ಪ್ರತಿಪಾದಿಸಿಕೊಳ್ಳುವುದರ ಬಗ್ಗೆ ಅನಾಸಕ್ತಿ' ಎಂಬ ವ್ಯಾಪಕ ನಂಬಿಕೆಯನ್ನು ಇದು ಅಲ್ಲಗಳೆಯುತ್ತದೆ.
ಇಷ್ಟೇ ಕುತೂಹಲಕರವಾದ ಮತ್ತೊಂದು ವಿಶೇಷತೆ ಈ ಅಗ್ರಹಾರದ ಸಂಸ್ಥಾಪಕನು ತಾನು ಶೂದ್ರನೆಂದು ಸ್ಪಷ್ಟವಾಗಿ ಸಾರಿಕೊಂಡಿರುವುದು. ಸಂಸ್ಕೃತ ಶಬ್ದ ಸಂಪದವನ್ನು ಸಮರ್ಥವಾಗಿ ಬಳಸಿಕೊಂಡು ಸೂಕ್ಷ್ಮ ತೆರೆಯನ್ನೆಳೆಯಲು ಈ ಶೂದ್ರನನ್ನು 'ಬ್ರಹ್ಮಪಾದಪುತ್ರ'ನೆಂದು ಚತುರ ಕವಿಯೊಬ್ಬ ಬಣ್ಣಿಸಿರುವುದು ಮತ್ತೊಂದು ಮಾತು!
ಚಿದಾನಂದ ಮೂರ್ತಿಯವರು ಸಂಶೋಧನೆಯ ಹೆಸರಿನಲ್ಲಿ ಅಪಹಾಸ್ಯಕೀಡಾಗಿರುವ ಹೊತ್ತಿನಲ್ಲಿ ಷ. ಶಟ್ಟರು ಮುಖ್ಯರಾಗುತ್ತಾರೆ. ಇವರ ಅಮೂಲ್ಯ ಪರಿಶ್ರಮದಿಂದ ಹೊರಬಂದಿರುವ, ಸಾಕಷ್ಟು ವಿಶೇಷ ಮಾಹಿತಿ ಬಂಡಾರವನ್ನೇ ಹೊಂದಿರುವ, ಸುಂದರ ಚಿತ್ರಗಳೋಂದಿಗೆ ಮೂಡಿಬಂದಿರು 'ಸೋಮನಾಥಪುರ' ಇತಿಹಾಸ, ವಾಸ್ತು-ಶಿಲ್ಪ, ಕಲೆಯ ಆಸಕ್ತಿ ಇರುವ ಪ್ರತಿಯೊಬ್ಬರೂ ಓದಲೇ ಬೇಕಾದ ಗ್ರಂಥ ಇದು.
ಬೆಲೆ - 100 ರುಪಾಯಿ. ಪ್ರಕಾಶಕರು - ಅಭಿವನ, 17/18-2, 1ನೇ ಮೇನ್, ಮರೇನಹಳ್ಳಿ, ವಿಜಯನಗರ, ಬೆಂಗಳೂರು-560040. ದೂ.-080-23505825.
2 comments:
ಪುಸ್ತಕ ವಿಮರ್ಶಕನ ಹೊಸ ವೇಷ ಸ್ವಾಮಿಗೆ ಒಪ್ಪುತ್ತದೆ. ಕೃತಿಯ ಕುರಿತಾದ ವಸ್ತುನಿಷ್ಠ ಅನಿಸಿಕೆಗಳಿಗೆ ಅಭಿನಂದನೆಗಳು. ಪ್ರಕಾಶಕರು ಇಂತಹ ಸಂಶೋಧಕರನ್ನು ದುಡಿಸಿಕೊಂಡು ಕೊನೆಗೆ ಅವರ ಕೈಗಳಿಗೆ ಚೆಂಬುಕೊಡುವ ಪರಿಪಾಠ ವ್ಯಾಪಕವಾಗಿರುವ ಈ ದಿನಗಳಲ್ಲಿ ಷ.ಶಟ್ಟರ್ ಅವರಿಗೆ ನಾಮ ತಿದ್ದದಂತೆ ನೋಡಿಕೊಳ್ಳೂವ ಜವಾಬ್ದಾರಿ ವಿಮರ್ಶಕರದ್ದು. ಏನೋ ಪ್ರಕಟಿಸಿ ಪ್ರೋತ್ಸಾಹಿಸಿದ್ದೇ ದೊಡ್ಡ ಸಾಧನೆ, ಲೇಖಕರಿಗೆ ಹಣ ಕಾಸಿನ ವಾಸನೆಯೂ ತೋರಿಸಬೇಕಿಲ್ಲ ಎಂಬಂತೆ ವರ್ತಿಸುತ್ತಿರುವ ಹಲವು ಪ್ರಕಾಶಕರಿಂದ ಷ.ಶಟ್ಟರ್ ಅಂಥವರಿಗೆ ರಕ್ಷಣೆ ಬೇಕಿದೆ.
Chennagide anistide. odutini.
Post a Comment