ಮೊನ್ನೆ ಭಾನುವಾರ ಯಾಕೋ ತುಂಬಾ ಬೇಸರವಾಗಿತ್ತು. ಬೆಳಗ್ಗೆ ಸ್ವಿಮ್ಮಿಂಗಿಗೂ ಹೋಗದೆ ಪೇಪರ್ ಓದಲು ಕೂತರೆ ಅದೇ ಅವಕಾಶವಾದಿಗಳ ಹೊಲಸು ರಾಜಕೀಯ. ಪಕ್ಷಾಂತರಿಗಳ ಜನಾನುರಾಗಿ ಹೇಳಿಕೆಗಳು. ಸಾಪ್ತಾಹಿಕ ಪುರವಣಿಗಳೋ ಜಡ್ಡು ಹಿಡಿದಿವೆ. ಯಾವುದೂ ಬೇಡ ಇನ್ನೂ ಸ್ವಲ್ಪಹೊತ್ತು ಮಲಗೋಣವೆಂದು ಯೋಚಿಸುತ್ತಿರುವಾಗ ಹೆಸರಘಟ್ಟಕ್ಕೆ ಬರ್ತೀಯಾ ಎಂದು ನನ್ನ ರೂಮ್ಮೇಟ್ ನಿರಂಜನ ಕೇಳಿದ. ಸರಿ ಒಳ್ಳೆಯದೇ ಆಯಿತು ಪ್ರತಿಮಾ ಬೇಡಿಯ 'ನೃತ್ಯಗ್ರಾಮ'ವಾದರೂ ನೋಡಿಬರುವ ಎಂದು ಬೇಗನೆ ಸ್ನಾನ ಮಾಡಿ ಇಬ್ಬರೂ ಬೈಕಲ್ಲಿ ಹೊರಟೆವು.
ರೈನ್ ವಾಟರ್ ಕ್ಲಬ್ ನ ವಿಶ್ವನಾಥ್ ಸುಮಾರು ದಿನಗಳಿಂದ ಬೆಂಗಳೂರಿನ ಪರಂಪರೆಯ ಬಗ್ಗೆ ನಮ್ಮ ಯುವ ಬೆಂಗಳೂರಿಗರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸುತ್ತಾ ಬಂದಿದ್ದಾರೆ. ಈಗಾಗಲೇ 'ಹೆರಿಟೇಜ್ ವಾಕ್' ಮೂಲಕ ಗವಿಗಂಗಾಧರೇಶ್ವರ ದೇವಾಲಯ, ಕೆಂಪೇಗೌಡ ಗೋಪುರ, ವೈಟ್ ಫೀಲ್ಡ್ ಸುತ್ತಮುತ್ತಲಿನ ಪ್ರದೇಶ, ಹಳೇ ಮಾರ್ಕೇಟ್, ಟಿಪ್ಪುವಿನ ಕೋಟೆಗಳ ಪರಿಚಯ ಮಾಡಿಸಿದ್ದಾರೆ. ಈ ಬಾರಿಯದ್ದು 'ಊರು-ನೀರು' ಹೆಸರಘಟ್ಟದಿಂದ ಬೆಂಗಳೂರು ನಗರಕ್ಕೆ ನೀರು ಸರಬರಾಜು ಮಾಡುತ್ತಿದ್ದ ಕೆರೆಯ ಪರಿಚಯ.
ಕ್ರಿ.ಶ. 1532ರ ಸುಮಾರಿಗೆ ಹೆಸರಘಟ್ಟದ ಕೆರೆ ನಿರ್ಮಾಣವಾಯಿತು. ಅರ್ಕಾವತಿ ನದಿಯ ನೀರು ಕೆರೆಗೆ ಮೂಲ. ನೂರಾರು ವರ್ಷಗಳ ಕಾಲ ನೀರಾವರಿಗೂ ಈ ಕೆರೆಯನ್ನು ಬಳಸಲಾಯಿತು. ಬೆಳೆಯುತ್ತಿರುವ ಬೆಂಗಳೂರಿಗೆ ಕುಡಿಯುವ ನೀರೊದಗಿಸಲು ದಿವಾನ್ ಕೆ. ಶೇಷಾದ್ರಿ ಐಯರ್ ಅವರ ನೇತೃತ್ವದಲ್ಲಿ 1894ರಲ್ಲಿ ಒಂದು ಯೋಜನೆ ಕೈಗೊಳ್ಳಲಾಯಿತು. ಇದಕ್ಕೆ ಮೈಸೂರಿನ ಚೀಫ್ ಎಂಜಿನಿಯರ್ ಎಂ.ಸಿ. ಹಚಿನ್ಸನ್ ಅವರ ನೆರವೂ ಇತ್ತು.
ಬೆಂಗಳೂರು ನಗರಕ್ಕೆ ತಿಪ್ಪಗೊಂಡನಹಳ್ಳಿ ಕೊಳದಿಂದ ನೀರು ತರುವವರೆಗೂ (1932-33) ಹೆಸರಘಟ್ಟದ ಕೆರೆಯೇ ಅತಿದೊಡ್ಡ ಪೂರೈಕೆದಾರ. ಮೊದಲ ಬಾರಿ ಬೆಂಗಳೂರು ನಗರಕ್ಕೆ ಧರ್ಮಾಂಬುಧಿ, ಸಂಪಂಗಿ, ಅಲಸೂರು, ಸ್ಯಾಂಕಿ ಕೆರೆಗಳಲ್ಲದೆ ದೀರ್ಘಕಾಲ ಬಳಸಬಹುದಾದ ನದಿಯ ನೀರು ಸರಬರಾಜು 1896 ಆಗಸ್ಟ್ ತಿಂಗಳ 7ನೇ ತಾರೀಖಿನಂದು ಸಾಕಾರಗೊಂಡಿತು. ಆಗಿನ ಜನಸಂಖ್ಯೆ ಎರಡು ಲಕ್ಷ ಐವತ್ತು ಸಾವಿರ. ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ 55 ಲೀಟರಿನಂತೆ ಸತತ 37 ವರ್ಷ ಸರಬರಾಜು ಮಾಡಲಾಯಿತು.
ಇಟ್ಟಿಗೆಗಳಿಂದ ನಿರ್ಮಿಸಿದ ಕಾಲುವೆಗಳ ಮೂಲಕ ತುರುಬನಹಳ್ಳಿಗೆ ನೀರನ್ನು ತಂದು ಶೋಧಿಸಿ, ಕ್ಲೋರಿನ್ ಬೆರೆಸಿ ಮುಂದೆ ಸೊಲದೇವನಹಳ್ಳಿಗೆ ಕೊಂಡೊಯ್ದು ಅಲ್ಲಿ ಸ್ಟೀಮ್ ಪಂಪ್ ಮೂಲಕ ಚಿಮ್ನಿ ಬೆಟ್ಟ ತಡಾಯಿಸುತ್ತಿದ್ದರು. ಮುಂದೆ ಗುರುತ್ವಾಕರ್ಷಣ ಬಲದಿಂದಲೇ ನಗರದವರೆಗೆ ನೀರು ಹರಿಯುತ್ತಿತ್ತು.
1924, 25 ಮತ್ತು 26ರನೇ ವರ್ಷ ಮಾನ್ಸೂನ್ ವೈಫಲ್ಯದಿಂದ ನೀರ ಶೇಖರಣೆ ಪ್ರಮಾಣ ಕಡಿಮೆಯಾಗುತ್ತಾ ಬಂದಿತು. ಕೊಳತೂರು ಮತ್ತು ಮಧುರೆ ಕೆರೆಗಳ ಮೂಲಕ ದೊಡ್ಡ ತುಮಕೂರು ಕೆರೆಯಿಂದ ಹೆಸರಘಟ್ಟದ ಕೆರೆಗೆ ನೀರು ತರುವ ಕೆಲಸ ಮಾಡಲಾಯಿತಾದರೂ ಬಹಳದಿನ ಅದು ಸಾಧ್ಯವಾಗಲಿಲ್ಲ.
ಬೆಂಗಳೂರು ಗತ್ಯಂತರವಿಲ್ಲದೆ ತಿಪ್ಪಗೊಂಡನಹಳ್ಳಿ ಕೊಳ್ಳ ಮತ್ತು ಕಾವೇರಿ ನೀರಿಗಾಗಿ ತೊರೆಕಾಡಿನಹಳ್ಳಿ ಕಡೆಗೆ ಮುಖಮಾಡಿತು. ಹೆಸರಘಟ್ಟ ಕೆರೆಯ ಜಲ ಮರುಪೂರಣ ಮಾಡುವ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇಂದು ಕೆರೆ ಸಂಪೂರ್ಣ ಬತ್ತಿದೆ. ಮುಂದೊಂದು ದಿನ ತಿಪ್ಪಗೊಂಡನಹಳ್ಳಿ ಕೊಳಕ್ಕೂ ಇದೇ ಗತಿ ಬರಬಹುದು.
ಅತ್ಯಂತ ವ್ಯವಸ್ಥಿತ, ಮಹಾನಗರ ಬೆಂಗಳೂರಿನ ಸ್ಥಿತಿಯೇ ಹೀಗೆ. ಇನ್ನೂ ರಾಜ್ಯದ ಯಾವ ಯಾವ ಊರುಗಳಲ್ಲಿ ಎಷ್ಟೆಷ್ಟೋ ಕೆರೆಗಳು ಬತ್ತಿ ಹೋಗಿವೆಯೋ..?
ಹೀಗೆ ಬತ್ತಿ ಹೋದ ಕೆರೆ ನೋಡಿ ಬರುವ ಹೊತ್ತಿಗೆ ಕಿವಿಗೆ ಬಿದ್ದಿದ್ದು ಕೊಟಗನಹಳ್ಳಿ ರಾಮಣ್ಣನವರ ಹಾಡು.. ದೊಡ್ಡಬಳ್ಳಾಪುರದ "ಸಂವಾದ" ತಂಡದವರು ಸೊಗಸಾಗಿ ಹಾಡಿದರು.
ಅಲ್ಲಿ ಕೇಳಿದ ಒಂದು ಹಾಡಿನ ಸಾಲು
ಮಣ್ಣಿಂದ ಬಂದದ್ದು ಮಣ್ಣಿಗೆ ಸೇರಬೇಕು
ಸೇರದಂತೆ ತಡೆದೆ ಯಾಕಣ್ಣ
ನೀ ಸೇರದಂತೆ ತಡೆದೆ ಯಾಕಣ್ಣ
ನೀ ಮಣ್ಣೀನ ಮಹಿಮೆ ಅರಿಯಣ್ಣ
ಗೀಯಗಾ ಗಾ ಗೀಯಗಾ... ಗೀಯಗಾ ಗಾ ಗೀಯಗಾ...
3 comments:
ಬೆಂಗಳೂರಿನ ಕೆರೆಗಳ ಬಗ್ಗೆ ಉತ್ತಮ ಮಾಹಿತಿ ನೀಡಿದ್ದಕ್ಕೆ ವಂದನೆ. ಆದರೆ ಹೆಸರಘಟ್ಟದ ಕೆರೆಉ ದುರ್ದೆಶೆ ಓದಿ ಬೇಸರವಾಯಿತು. ಮಂಗಳೂರಿನಲ್ಲು ಇಂತಹ ಕೆಲವು ಕೆರೆಗಳು ಪಾಚಿಗಟ್ಟಿ ಹೋಗಿವೆ.
ಕೆರೆ ಬರಹ ಚೆನ್ನಾಗಿದೆ....ನಮ್ಮೂರ ಕೆರೆಯಲ್ಲಿ ಹೂಳೆತ್ತಿದ್ದು ನೆನಪಿಗೆ ಬಂತು.....
Post a Comment