Saturday, July 12, 2008

ಮಾತು ಬೆಣ್ಣೆ.. ಪ್ರೀತಿ ಬಿಸ್ಕತ್..ದಾಮಿ ಪರಿಚಯ ಮಾಡಿಸುತ್ತಾ, ಹಟ್ಟಿ ಚಿನ್ನದ ಗಣಿಯಲ್ಲಿರುವ ನನ್ನ ಮಾವ ರವಿ ಕುಮಾರ್ ಬಗ್ಗೆ ಹೇಳಿದ್ದೆ. ಅವರ ಮನೆಯಲ್ಲಿ ಕಳೆದ ಎರಡು ದಿನಗಳು ತುಂಬಾ ದಿನ ನೆನಪಿನಲ್ಲಿರುವಂತಹ ದಿನಗಳು. ಗಣಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳ ವಾಸಕ್ಕಾಗಿ ಹಟ್ಟಿ ಹಳ್ಳಿಯಿಂದ ಸುಮಾರು ದೂರದಲ್ಲಿ ಸುಸಜ್ಜಿತ ಕ್ವಾಟ್ರಸ್ ಗಳಿವೆ. ಇವುಗಳನ್ನು ಬ್ರಿಟಿಷರ ಕಾಲದಲ್ಲಿ ನಿರ್ಮಾಣ ಮಾಡಲಾಗಿತ್ತಂತೆ. ವಿಶಾಲವಾದ ಕಾಂಪೋಂಡ್. ಒಳಗೆ ವಿವಿಧ ಬಗೆಯ ಹೂ ಗಿಡಗಳ ಕುಂಡಗಳು. ನಡುವೆ ಜೋಕಾಲಿ. ತುಂಬಾ ಸುಂದರವಾದ ಜಾಗ.
ಮಾವನವರದ್ದು ಮೂವರು ಮಕ್ಕಳ ಸುಖವಾದ ಸಂಸಾರ. ರವಿ ಮೂಲತಃ ದಾವಣಗೆರೆ ಜಿಲ್ಲೆಯ ಜಗಳೂರಿನವರು. ಇವರು ಬಿ.ಇ. ಮಾಡಿದ್ದು ಹಾಸನದಲ್ಲಿ. ಅದೇ ಕಾಲೇಜಿನಲ್ಲಿ ಮೈಸೂರ್ ಎಕ್ಸ್ ಪ್ರೆಸ್ ಜಾವಗಲ್ ಶ್ರೀನಾಥ್ ಎಂಜಿನಿಯರಿಂಗ್ ಮಾಡುತ್ತಿದ್ದರು. ಇವರಿಬ್ಬರೂ ಆಪ್ತಮಿತ್ರರು. ಈಗಲೂ ತಮ್ಮ ಬಾಲ್ಯದ ಕ್ರಿಕೆಟ್ ಬದುಕನ್ನು ಸ್ವಾರಸ್ಯವಾಗಿ ನನ್ನ ಮಾವ ವಿವರಿಸುತ್ತಿರುತ್ತಾರೆ.

ನಾವು ಸಣ್ಣವರಿರುವಾಗ ಬೇಸಿಗೆ ಮತ್ತು ದಸರಾ ರಜೆಗಳನ್ನು ಕಳೆಯಲು ನಮ್ಮ ಹಳ್ಳಿ (ಮುಸ್ಟೂರು)ಗೆ ಹೋಗುತ್ತಿದ್ದೆವು. ಮಂಜು ಮತ್ತು ನಾಗರಾಜ ನನ್ನ ಬಾಲ್ಯದ ಸ್ನೇಹಿತರು. ವರಸೆಯಲ್ಲಿ ಒಬ್ಬನು ಮಾವ, ಮತ್ತೊಬ್ಬನು ಅಳಿಯ. ಇವರಿಬ್ಬರು ಮಹಾನ್ ಪೋಕರಿಗಳು. ಚಿಕ್ಕ ವಯಸ್ಸಿಗೇ ಸೀಗರೇಟ್ ಸೇದುವ ಹವ್ಯಾಸ ರೂಢಿಸಿಕೊಂಡಿದ್ದರು. ಇವರ ಜೊತೆ ಸೇರಿ ನಾನೂ ಒಮ್ಮೆ ರುಚಿ ನೋಡಿ ನಮ್ಮ ತಾಯಿಯವರ ಕೈಗೆ ಸಿಕ್ಕಿಬಿದ್ದು ದೊಡ್ಡ ರಂಪ ಆಗಿ ಬೇಗನೆಯೇ ಸೀಗರೇಟ್ ಚಟ ಕೈ ಬಿಡಬೇಕಾಯಿತು. ಇವರಿಬ್ಬರಿಗೆ ನಮ್ಮ ಬಂಧು ಬಾಂಧವರ ಎಲ್ಲ ರಹಸ್ಯಗಳೂ ಗೊತ್ತಿರುತ್ತಿತ್ತು. ಇವರ ಜಾಸೂಸ್ ಗಿರಿಯಿಂದ ನಮ್ಮ ರವಿ ಮಾವನವರ ಪ್ರೇಮ ಪ್ರಕರಣ ಬಯಲಾಗಿತ್ತು. ನಮ್ಮ ತಂದೆಯವರ ಚಿಕ್ಕಪ್ಪನ ಮಗಳು ನಾಗರತ್ನ ( ನನಗೆ ಅತ್ತಿಗೆ ) ಮತ್ತು ನನ್ನ ಮಾವನರ ನಡುವೆ ಸುಮಾರು ದಿನಗಳ ಪ್ರೇಮವಿತ್ತು. ಬಿ.ಎ ಮುಗಿಸಿ ಮನೆಯಲ್ಲಿದ್ದ ನನ್ನ ಅತ್ತಿಗೆ ಮತ್ತು ಎಂಜಿನಿಯರಿಂಗ್ ಮುಗಿಸಿ ನಿರುದ್ಯೋಗಿಯಾಗಿದ್ದ ನನ್ನ ಮಾವನವರಿಗೆ ಮಾಡಲು ಬೇರೇನು ಕೆಲಸವಿಲ್ಲದೆ ಪ್ರೀತಿಸುತ್ತಿದ್ದರು. ಇವರಿಬ್ಬರ ಕುಚೇಷ್ಟೆಯಿಂದ ನಮ್ಮ ಮಾವನವರ ಪ್ರೇಮ ಹಿರಿಯರಿಗೆ ಗೊತ್ತಾಗಿ ಬೇಗನೆ ಇಬ್ಬರಿಗೂ ಮದುವೆ ಮಾಡಬೇಕಾಯಿತು.

ನಂತರ ಮಾವನವರಿಗೆ ಹಟ್ಟಿ ಚಿನ್ನದ ಗಣಿ ಎಲೆಕ್ಟ್ರಿಕಲ್ ವಿಭಾಗದಲ್ಲಿ ಎಂಜಿನಿಯರ್ ಕೆಲಸ ಸಿಕ್ಕಿತು. ಇಲ್ಲಿ ಬಂದು ನೆಲಸಿದರು.

ನನ್ನ ಅತ್ತಿಗೆ ಪಾಕ ಪ್ರವೀಣೆ. ನಾವು ಬದಾಮಿ ಟ್ರಿಪ್ ಫಿಕ್ಸ್ ಮಾಡಿದ ಕೂಡಲೆ ದಾರಿಯಲ್ಲಿ ತಿನ್ನಲು ಬೇಕಾಗುತ್ತದೆ ಎಂದು ಚಕ್ಕುಲಿ, ಶಂಕರಪೊಳೆ, ಬೆಣ್ಣೆ ಬಿಸ್ಕತ್ ಮುಂತಾದ ತಿನಿಸುಗಳನ್ನು ತಯಾರು ಮಾಡಿಕೊಂಡಿದ್ದರು.

ಬೆಣ್ಣೆ ಬಿಸ್ಕತ್ ಗಳನ್ನು ನಾವು ಬೇಕರಿಯಿಂದ ಕೊಂಡು ತಂದು ತಿನ್ನುತ್ತಿದ್ದೆವು. ಅದನ್ನು ಮಾಡಲು ಪಾಕತಜ್ಞರಿಂದ ಮಾತ್ರ ಸಾಧ್ಯ ಎಂದು ತಿಳಿದಿದ್ದ ನಮಗೆ, ಅತ್ತಿಗೆ ಮನೆಯಲ್ಲೇ ಮಾಡುತಿದ್ದದ್ದು ಸಕತ್ ಆಶ್ಚರ್ಯವಾಗಿತ್ತು. ಮನೆಯಲ್ಲಿಯೇ ಮಾಡಿದ ಬಿಸ್ಕತ್ ನ ರುಚಿಯೇ ಬೇರೆ. ಅದರಲ್ಲೂ ನಮ್ಮತ್ತೆ ಕೈ ಬಿಸ್ಕತ್ತು ಸಂಬಂಧಿಗಳ ಮನೆಗಳಲ್ಲಿ ತುಂಬಾ ಪ್ರಸಿದ್ಧಿ. ನನಗಂತು ಹೊಸ ಹೊಸ ತಿಂಡಿ ತಿನಿಸುಗಳನ್ನು ತಿನ್ನುವುದು, ಮಾಡುವುದೆಂದರೆ ಮೊದಲಿಂದಲೂ ತುಂಬಾ ಆಸಕ್ತಿ. ನಾನು ಪಿಯುಸಿ ಓದುವಾಗ ಒಮ್ಮೆ ಇವರ ಮನೆಗೆ ಬಂದಿದ್ದೆ. ಆಗ ಇವರ ಬೆಣ್ಣೆ ಬಿಸ್ಕತ್ತಿಗೆ ಮಾರು ಹೋಗಿ, ಮನೆಗೆ ಬಂದು ನಾನೂ ಮಾಡಿ ಸಂತೋಷ ಪಟ್ಟಿದ್ದೆ.

ನೀವು ಆ ಬೆಣ್ಣೆ ಬಿಸ್ಕತ್ ರುಚಿ ನೋಡಬೇಕೆ? ಹಾಗಿದ್ದರೆ ನಿಮಗಾಗಿ ಮಾಡುವ ವಿಧಾನ ಕೊಟ್ಟಿದ್ದೇನೆ ಪ್ರಯತ್ನಿಸಿ.

ಬೇಕಾಗುವ ಪದಾರ್ಥಗಳು: ಮೈದಾ ಅರ್ಧ ಕಿಲೋ, ಸಕ್ಕರೆ ಅರ್ಧ ಕಿಲೋ, ಒಂದು ಕಪ್ ಬೆಣ್ಣೆ ಅಥವಾ ವನಸ್ಫತಿ, ಬೇಕಿಂಗ್ ಪೌಡರ್ ಒಂದು ಚಮಚೆ, ಒಂದು ಕಪ್ ತುರಿದ ಒಣ ಕೊಬ್ಬರಿ, ಏಲಕ್ಕಿ ಪುಡಿ ಒಂದು ಚಮಚೆ, ಬೆಣ್ಣೆಯಲ್ಲಿ ಕರಿದ ಗೊಡಂಬಿ ಚೂರು ಅರ್ಧ ಕಪ್.

ಮಾಡುವ ವಿಧಾನ: ಮೊದಲು ಸಕ್ಕರೆಯನ್ನು ಪುಡಿ ಮಾಡಿಟ್ಟುಕೊಳ್ಳಿ. ಬೆಣ್ಣೆಯನ್ನು ದ್ರವರೂಪಕ್ಕೆ ಬರುವವರೆಗೂ ನಾದಿಕೊಳ್ಳಿ. ನಂತರ ಪುಡಿ ಮಾಡಿದ ಸಕ್ಕರೆ ಮತ್ತು ಮೈದಾವನ್ನು ಸೇರಿಸಿ ಬೆಣ್ಣೆಯಲ್ಲಿ ಕಲಸಿ. ಬೇಕಿಂಗ್ ಪೌಡರ್, ಏಲಕ್ಕಿ ಪುಡಿ, ಗೋಡಂಬಿ ಚೂರನ್ನು ಬೆರಸಿ. ಸಮನಾದ ಆಕಾರದಲ್ಲಿ ಉಂಡೆ ಮಾಡಿಟ್ಟುಕೊಳ್ಳಿ. ನಂತರ ಉಂಡೆಗಳನ್ನು ಒಂದು ತಟ್ಟೆಯಲ್ಲಿಟ್ಟು ಮೈಕ್ರೋ ಓವನ್ನಲ್ಲಿಡಿ. ಸುಮಾರು 75 ಡಿಗ್ರಿ ಉಷ್ಣಾಂಶದಲ್ಲಿ ನಾಲ್ಕು ನಿಮಿಷ ಬಿಡಿ. ಬಿಸಿ ಬಿಸಿಯಾದ ಬೆಣ್ಣೆ ಬಿಸ್ಕತ್ ರೆಡಿ.

ಓವನ್ ಬರುವ ಮೊದಲು ಬಿಸ್ಕತ್ ಮಾಡಲು ನಮ್ಮತ್ತೆ ಒಂದು ಉಪಾಯ ಕಂಡುಕೊಂಡಿದ್ದರು. ನುಣುಪಾದ ಮರಳನ್ನು ಒಂದು ಬಾಣಲೆಯಲ್ಲಿ ಹಾಕಿ ಗ್ಯಾಸ್ ಸ್ಟವ್ ಮೇಲಿಟ್ಟು, ಅದರ ಮೇಲೆ ತಟ್ಟೆಯನ್ನು ಬೋರಲಾಗಿ ಇಟ್ಟು, ಅದು ಬಿಸಿಯಾದ ಮೇಲೆ ಎಲ್ಲವನ್ನೂ ಮಿಶ್ರಮಾಡಿ ಕಟ್ಟಿಟ್ಟ ಉಂಡೆಗಳನ್ನು ಇಡುತ್ತಿದ್ದರು. ಇಪ್ಪತ್ತು ನಿಮಿಷಗಳಲ್ಲಿ ಬಿಸ್ಕತ್ ತಯಾರಾಗುತ್ತಿತ್ತು. ಓವನ್ ಇಲ್ಲದಿದ್ದವರು ಬೇಕಿದ್ದರೆ ಈ ತಂತ್ರಜ್ಞಾನದಲ್ಲಿ ಪ್ರಯೋಗ ಮಾಡಿ ನೋಡಬಹುದು. ಓವನಲ್ಲಿ ಮಾಡಿದ ಬಿಸ್ಕತ್ ಗಳಿಗಿಂತ ಇವು ರುಚಿಯಾಗಿರುತ್ತಿದ್ದವು. ಅಥವಾ ನಮ್ಮ ಭ್ರಮೆಯೋ...

1 comment:

Anonymous said...

no comments unless we are provided with biscuits!
Adirli, nimma mavana maana heegella blognalli tegibardu. BE mugisi kelasa irlilla hagaagi love madtidru antella bardidiya.
heege blognalli hoda maana uliskoloke website launch madidru agaakilla!

- niruttara