Wednesday, July 2, 2008

ಭವ್ಯ ಬದಾಮಿಯಲ್ಲಿ ಆ ದಿನಗಳನ್ನು ನೆನೆಯುತ್ತಾ...

(ಗುಡ್ಡದ ಬದಿಯನ್ನು ಕೊರೆದು ನಿರ್ಮಿಸಿದ ಬಾದಾಮಿಯ ಗುಹಾಲಯಗಳು ವಿಶ್ವವಿಖ್ಯಾತ. ಭಾರತೀಯ ದೇವಸ್ಥಾನ ನಿರ್ಮಾಣ ಕಲೆಯ ತೊಟ್ಟಿಲೆಂದೆನಿಸಿರುವ ಐಹೊಳೆ ಪಟ್ಟದಕಲ್ಲುಗಳೂ, ಚಾಲುಕ್ಯರ ಪೂರ್ವ ರಾಜಧಾನಿಯಾಗಿದ್ದಿರಬಹುದಾದ ಮಹಾಕೂಟವೂ ಬಾದಾಮಿಗೆ ಅನತಿ ದೂರದಲ್ಲಿಯೆ ಇವೆ.
ಕ್ರಿಸ್ತಶಕ ೬೪೨ರಲ್ಲಿ ಇಮ್ಮಡಿ ಪುಲಿಕೇಶಿಯ ಕೊನೆಗಾಲದಲ್ಲಿ ಪಲ್ಲವರು ಬಾದಾಮಿಯನ್ನು ಹಾಳುಗೆಡವಿದರೆಂಬುದು ಇತಿಹಾಸ. ೧೩ ವರ್ಷಗಳ ನಂತರ ಪುಲಿಕೇಶಿಯ ಮಗ ವಿಕ್ರಮಾದಿತ್ಯ ಪಲ್ಲವರನ್ನು ಸೋಲಿಸಿ ರಾಜ್ಯವನ್ನು ಮರು ಸ್ಥಾಪಿಸಿದ. ೭೫೦ರ ವೇಳೆಗೆ ಸಾಮ್ರಾಜ್ಯ ಬಲಗುಂದುತ್ತಿತ್ತು. ೭೫೩ರಲ್ಲಿ ರಾಷ್ಟ್ರಕೂಟರ ವಂಶದವನಾದ ದಂತಿದುರ್ಗ ಇಮ್ಮಡಿ ಕೀರ್ತಿವರ್ಮನನ್ನು ಬದಿಗೊತ್ತಿ ತನ್ನ ರಾಜವಂಶವನ್ನು ಸ್ಥಾಪಿಸಿದ. ಅಲ್ಲಿಗೆ ಬಾದಾಮಿಯು ಚರಿತ್ರೆಯ ಮುಖಪುಟದಿಂದ ಮರೆಯಾಯಿತು. ಮುಂದೆ ಚಾಲುಕ್ಯ ವಂಶದವರು ಮತ್ತೆ ರಾಜ್ಯಕ್ಕೆ ಬಂದಾಗ ಕಲ್ಯಾಣ ರಾಜಧಾನಿಯಾಯಿತು.)


ಳೆದವಾರ ಹಟ್ಟಿಚಿನ್ನದ ಗಣಿಯಲ್ಲಿ ಎಲೆಕ್ಟ್ರಿಕಲ್ ವಿಭಾಗದ ಮ್ಯಾನೇಜರ್ ಆಗಿರುವ ರವಿ ಕುಮಾರ್ (ನನ್ನ ಮಾವ) ಅವರ ಒತ್ತಾಯ ಮತ್ತು ನನ್ನ ಇತಿಹಾಸ ಆಸಕ್ತಿ ಎರಡೂ ಸೇರಿ ಬದಾಮಿ ನೋಡುವ ಅವಕಾಶ ಸಿಕ್ಕಿತ್ತು. ತಡಮಾಡದೆ ಆಫೀಸಿಗೆ ರಜಾ ಚೀಟಿಕೊಟ್ಟು ಹೆಗಲಿಗೆ ಕ್ಯಾಮೆರಾ ಏರಿಸಿಕೊಂಡು ಹೊರಟೇಬಿಟ್ಟೆ. ಬದಾಮಿಗೆ ನೇರವಾಗಿ ಬೆಂಗಳೂರಿನಿಂದ ಸಾಕಷ್ಟು ಬಸ್ಸುಗಳಿವೆ. ದಾರಿಯಲ್ಲಿ ಹಂಪಿಯೂ ಸಿಗುತ್ತೆ. ರಜಾ ಕಡಿಮೆ ಇದ್ದಿದ್ದರಿಂದ ನೇರವಾಗಿ ಹಟ್ಟಿಗೆ ಹೋದೆ. ಹಟ್ಟಿಯಿಂದ ಸುಮಾರು ನೂರು ಕಿಲೋಮೀಟರ್ ಪ್ರಯಾಣ. ನಾವೆಲ್ಲ ತಿಳಿದಂತೆ ಉತ್ತರ ಕರ್ನಾಟಕವೆಂದರೆ ಬರೀ ಬಿಸಿಲು ಬಯಲಿನ ಪ್ರದೇಶವೆಂಬುದು ತಪ್ಪೆಂದು ಬನಶಂಕರಿಗೆ ಬಂದಾಗ ತಿಳಿಯಿತು.

ಸುಂದರವಾದ ತೆಂಗಿನ ತೋಟಗಳ ನಡುವೆ ಪ್ರಶಾಂತವಾಗಿ ಕುಳಿತಿರುವ ಬನಶಂಕರಿ ದೇವಿಗೆ ಪೂಜೆಸಲ್ಲಿಸಿ ಮುಂದೆ ಹೊರಟರೆ ಕೆಂಪು ಮಣ್ಣಿನ ಶಿಲಾಪದರದ ಬೆಟ್ಟಗಳ ಸಾಲು ಎದುರಾಗುತ್ತವೆ. ಬನಶಂಕರಿಯಿಂದ 14 ಕಿಲೋಮೀಟರ್ ಪ್ರಯಾಣ ಬದಾಮಿ. ನಮ್ಮದೋ ಸುಮೋ ಜೀಪು. ಡ್ರೈವರ್ ಮೆಹಬೂಬ್ ಸಕಲಕಲಾವಲ್ಲಬಾ. ಅವನಿಗೆ ಈ ಪ್ರದೇಶ ಚಿರಪರಿಚಿತ. ಸರಾಗವಾಗಿ ಸಾಗಿದ್ದ ನಮ್ಮ ಪ್ರಯಾಣ ತಟ್ಟನೆ ಒಮ್ಮೆಗೆ ನಿಂತಿತು. ಮೆಹಬೂಬನ ಕೋಳಿ ರುಚಿಯ ಚಟಕ್ಕೆ ನಮ್ಮ ಪ್ರಯಾಣ ಒಂದು ಗಂಟೆ ತಡವಾಗಬೇಕಾಯಿತು. ಬದಾಮಿಗೆ ಬಂದಾಗ ಮಧ್ಯಾಹ್ನ 12 ಗಂಟೆ.

ನಮಗೋ ಇತಿಹಾಸದ ಜ್ಞಾನ ಕಡಿಮೆ. ಗೈಡ್ ಇಲ್ಲದೆ ಮುಂದುವರೆಯುವುದು ಸರಿಯಲ್ಲವೆಂದು ತೀರ್ಮಾನಿಸಿದೆವು. ಸುಮಾರು ಮುವತ್ತೈದರ ಪ್ರಾಯದ ಒಬ್ಬವ್ಯಕ್ತಿ ಇನ್ನೂರು ಕೊಡಿ ನಿಮಗೆ ಬದಾಮಿಯ ಇತಿಹಾಸ, ಕಲೆಯಬಗ್ಗೆ ತಿಳಿಸುತ್ತೇನೆಂದ. ಕರ್ನಾಟಕ ಟೂರಿಸಮ್ ಅನುಮೋದಿಸಿರುವ ಗೈಡ್ ಪಾಸ್ ಪರಿಶೀಲಿಸಿ ನೂರೈವತ್ತಕ್ಕೆ ಚೌಕಾಸಿಮಾಡಿ ಮುಂದುವರೆದೆವು.

ಉತ್ತರಕ್ಕೆ ಬೆಟ್ಟ, ದಕ್ಷಿಣಕ್ಕೆ ಮೆದು ಕಲ್ಲಿನ ಬೆಟ್ಟಗಳು. ಈ ಎರಡನ್ನೂ ಬೇರ್ಪಡಿಸುವ ಅಗಸ್ತ್ಯ ಹೊಂಡ ಪಶ್ಚಿಮಕ್ಕಿದ್ದರೆ, ಬದಾಮಿ ಊರು ಪೂರ್ವಕ್ಕೆ ಇದೆ. ಆರರಿಂದ ಎಂಟನೇ ಶತಮಾನದಲ್ಲಿ ಅತ್ಯಂತ ವೈಭವದ ದಿನಗಳನ್ನು ಕಂಡ ಬದಾಮಿಯಲ್ಲಿ ಈಗಲೂ ಸಹ ಚಾಲುಕ್ಯರ ಶಿಲ್ಪಕಲೆಯ ವೈಭವ ನೋಡಬಹುದು. ಎರಡನೇ ಪುಲಕೇಶಿ ಚಾಲುಕ್ಯರ ಪ್ರಮುಖ ದೊರೆ. ಈತನ ಕಾಲದಲ್ಲಿ ಚಾಲುಕ್ಯರ ಸಾಮ್ರಾಜ್ಯ ನರ್ಮದಾ ನದಿ ತೀರದವರೆಗೆ ಹಬ್ಬಿತ್ತಂತೆ. ಪುಲಕೇಶಿಗೂ ಮತ್ತು ಹರ್ಷವರ್ದನಿಗೆ ಘೋರ ಕಾಳಗವಾಯಿತು. ಇದರಲ್ಲಿ, ಪುಲಕೇಶಿ ವಿಜಯಸಾಧಿಸಿ, 'ದಕ್ಷಿಣಪಥೇಶ್ವರ' ಎಂಬ ಬಿರುದನ್ನು ಸ್ವತಃ ಹರ್ಷವರ್ಧನನೇ ದಯಪಾಲಿಸಿದನಂತೆ. ಚಾಲುಕ್ಯರ ವೈಭವವನ್ನು ಇಲ್ಲಿರುವ ಗುಹಾಲಯಗಳಲ್ಲಿ, ಪಟ್ಟದಕಲ್ಲಿನಲ್ಲಿ ಮತ್ತು ಐಹೊಳೆಯಲ್ಲಿ ಕಾಣಬಹುದು.

ಬದಾಮಿಗೆ ಹಲವಾರು ಶತಮಾನಗಳ ಇತಿಹಾಸವಿದೆ. ಆಗಸ್ತ್ಯ ಕಾಲದಲ್ಲಿ ಬದಾಮಿಯ ಉಲ್ಲೇಖವಿದೆ. ಮೊದಲು ಬಾದಾಮಿಗೆ 'ವಾತಾಪಿ' ಎಂಬ ಹೆಸರಿತ್ತು. ಜನಪದ ಕತೆಯ ಪ್ರಕಾರ ಯಕ್ಷಣಿ ವಿದ್ಯೆ ಗೊತ್ತಿರುವ ಇಲಲ್ವ ಮತ್ತು ವಾತಾಪಿ ಎಂಬ ರಾಕ್ಷಸ ಸಹೋದರರು ಇಲ್ಲಿರುವ ಗುಡ್ಡ ಬೆಟ್ಟಗಳಲ್ಲಿ ವಾಸವಾಗಿದ್ದರು. ಋಷಿ ಮುನಿಗಳನ್ನು ಹತ್ಯೆಗಯೈಲು ಒಂದು ಸುಲಭ ಉಪಾಯ ಕಂಡುಕೊಂಡಿದ್ದರು. ಯಕ್ಷಣಿ ವಿದ್ಯೆಯಿಂದ ಇಲಲ್ವ ವಾತಾಪಿಯನ್ನು ಮೇಕೆಯನ್ನಾಗಿ ಪರಿವರ್ತಿಸುತ್ತಿದ್ದ. ನಂತರ ಇಲಲ್ವ ಯಾವುದಾದರು ಮುನಿಗಳನ್ನು ಕರೆದುಕೊಂಡು ಬಂದು, ಆ ಮೇಕೆಯ ಮಾಂಸದಿಂದ ತಯಾರಿಸಿದ ಊಟವನ್ನು ಬಡಿಸುತ್ತಿದ್ದ. ನಂತರ ಇಲಲ್ವ ವಾತಾಪಿಯನ್ನು ಹೊರಗೆ ಕರೆಯುತ್ತಿದ್ದ. ವಾತಾಪಿ ಹೊಟ್ಟೆ ಬಗೆದು ಹೊರಗೆ ಬರುತ್ತಿದ್ದ. ಹೀಗೆ ಹಲವಾರು ಮುನಿಗಳ ಹತ್ಯೆಗಳಾದವು. ನಂತರ ಈ ದುಷ್ಟರ (ಯಾರು ದುಷ್ಟರು?) ಸಂಹಾರಕ್ಕಾಗಿ ಅಗಸ್ತ್ಯ ಮುನಿಗಳು ಆಗಮಿಸಿದರು. ಊಟವಾದ ನಂತರ ವಾತಾಪಿ ಜೀರ್ಣವಾಗೆಂದು ಹೇಳುತ್ತಾರೆ. ಇಲಲ್ವ ವಾತಾಪಿಯನ್ನು ಹೊರಗೆ ಬಾ ಎಂದಾಗ ಆತ ಜೀರ್ಣವಾದ ಕಾರಣ ಹೊರಗೆ ಬರಲು ಅಗುವದಿಲ್ಲ. ಹೀಗೆ ವಾತಾಪಿ ಕಥೆ ಮುಗಿಯುತ್ತದೆ. ವಾತಾಪಿಇದ್ದನೆಂಬ ಕಾರಣಕ್ಕಾಗಿ ವಾತಪಿ ಎಂಬ ಹೆಸರೂ ಬಂದಿರಬಹುದು.

ದಕ್ಷಿಣದಲ್ಲಿರುವ ಬೆಟ್ಟಗಳಲ್ಲಿ ಕೆಂಪು ಮಣ್ಣಿನ ಶಿಲಾಬೆಟ್ಟಗಳಿವೆ. ಇದರಲ್ಲಿ ನಾಲ್ಕು ಗುಹಾಂತರ ದೇವಾಲಯಗಳಿವೆ. ಮೊದಲನೆಯದು ಶಿವನಿಗೆ ಅರ್ಪಿತವಾಗಿದೆ. ಇಲ್ಲಿ ನಟರಾಜನ ಒಂದು ಅದ್ಬುತವಾದ ನಾಟ್ಯದ ಭಂಗಿಯಿದೆ. ಇದರ ವಿಶೇಷ ನಾಟ್ಯ ಪ್ರಕಾರದ ಎಂಬತ್ತೋಂದೂ ಭಂಗಿಯನ್ನು ಪ್ರದರ್ಶಿಸಿರುವುದು. ಶಿಲ್ಪಿ ತನ್ನ ನೈಪುಣ್ಯತೆ ಮೆರೆದಿದ್ದಾನೆ. ಅರ್ಧನಾರಿಶ್ವರನ ವಿಗ್ರಹ, ನಂದಿ, ದುರ್ಗ, ಗಣಪತಿ ಮತ್ತು ಹಾವಿನಹೆಡೆ ಕೆಳಗಡೆರುವ ಶಿವ, ಮುಂತಾದ ಸೊಗಸಾದ ಕೆತ್ತನೆಗಳನ್ನು ಕಾಣಬಹುದು.

ಎರಡು ಮತ್ತು ಮೂರನೇ ಗುಹೆಗಳು ವಿಷ್ಣುವಿಗೆ ಸರ್ಪಿತವಾಗಿವೆ. ಪ್ರವೇಶದ್ವಾರದಲ್ಲಿ ಜಯ-ವಿಜಯ ದ್ವಾರಪಾಲಕರು, ಒಳಗಡೆ ವಿಷ್ಣುವಿನ ಅವತಾರಗಳಾದ ವಾಮನ ಅವತಾರ, ಕೃಷ್ಣ ಲೀಲೆಗಳು, ನರಸಿಂಹನ ಅವತಾರ, ಹರಿಹರ, ಶೇಷನಾಗ ಮತ್ತು ಛಾವಣಿ ಮೇಲೆ ಸ್ವಸ್ತಿಕ, ಮತ್ಸಗಳ ಸುಂದರವಾದ ಕೆತ್ತನೆ ಕಾಣಬಹುದು.

ಮೂರನೆಯದು ಜೈನರಿಗೆ ಸಮರ್ಪಿತವಾದ ಈ ಗುಹೆಯಲ್ಲಿ ಪಾರ್ಶ್ವನಾಥ, ತೀರ್ಥಂಕರರ ಕೆತ್ತನೆಗಳಿವೆ.

ಗೈಡ್ ಸಂಪೂರ್ಣ ತಲ್ಲೀನನಾಗಿ ವರ್ಣಿಸುತ್ತಾ, ಗುಹಾಂತರ ದೇವಾಲಯಗಳಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಧರ್ಮಸಮಾನತೆ. ಆಗಿನ ಕಾಲಕ್ಕೆ ಶೈವರು ಮತ್ತು ವೈಷ್ಣವರ ನಡುವೆ ಸಾಮರಸ್ಯ ಮೂಡಿಸಲು ಶಿವ ಮತ್ತು ವಿಷ್ಣು ದೇವಾಲಯಗಳನ್ನು ನಿರ್ಮಿಸಿದರು. ಜೊತೆಯಲ್ಲಿ ಜೈನರಿಗೂ ಪ್ರಾಮುಖ್ಯತೆ ನೀಡಲು ಒಂದು ಜೈನ ಬಸದಿಯನ್ನೂ ನಿರ್ಮಿಸಿದರು ಎಂದು ನಮ್ಮ ಹಿಂದೂ ಧರ್ಮದ ಔದಾರ್ಯತೆಯನ್ನು ಕೊಂಡಾಡತೊಡಗಿದ. ನಮ್ಮ ಮಾವನವರಿಗೋ ನಮ್ಮ ಸಂಸ್ಕೃತಿ, ನಮ್ಮ ಹಿಂದೂ ಧರ್ಮದಬಗ್ಗೆ ಹೆಮ್ಮೆ ಎನ್ನಿಸತೊಡಗಿತು.

ನನಗೆ ಮನಸಿನಲ್ಲಿ ಎಲ್ಲಿಯೋ ಒಂದು ಸಂಶಯ ಸುಳಿಯ ತೊಡಗಿತು. ಈ ವ್ಯಕ್ತಿ ಹೇಳುತ್ತಿರುವ ಇತಿಹಾಸ ಯಾರ ಇತಿಹಾಸ. ಬಹು ಸಂಖ್ಯಾತರಾದ ದುಡಿಯುವ ವರ್ಗಗಳಿಗೆ ಸೇರದ ಇತಿಹಾಸವನ್ನು ನಾವು ಯಾವ ರೀತಿ ಅರ್ಥೈಸಿಕೊಳ್ಳುತ್ತಿದ್ದೇವೆ. ಶೈವ ಮತ್ತು ವೈಷ್ಣವ ಧರ್ಮದ ಹೊಡೆದಾಟ ಕೇವಲ ಉನ್ನತ ವರ್ಗಗಳ ಸಣ್ಣತನವಲ್ಲವೇ. ಕಡೆಗೆ ಗುಹೆಯ ಮೆಟ್ಟಿಲುಗಳನ್ನು ಇಳಿಯುವಾಗ ಗೈಡನ್ನು ಕೇಳಿದೆ ನಿನ್ನದು ಯಾವ ಜಾತಿ ಎಂದು. ಮೆಲ್ಲನೆ ನಾಚುತ್ತಾ 'ಅಗಸರು' ಎಂದು.

ಮನಸ್ಸಿನಲ್ಲೇ ಅಂದುಕೊಂಡೆ ಇತಿಹಾಸ ನಿನ್ನನ್ನು ಎಲ್ಲಿಯೂ ನೆನಪಿಸಿಕೊಂಡಿಲ್ಲವಲ್ಲವೆಂದು.

(ಗೈಡ್ ಹೇಳಿದ ಇತಿಹಾಸದ ಕಥೆಗಳನ್ನು ನಮ್ಮ ಮುಂದೇ ನಿಲ್ಲುವಂತೆ ಮಾಡಿದ್ದು ಬದಾಮಿಯ ಸ್ಮಾರಕಗಳು. ಈ ದೇಗುಲಗಳ, ಪ್ರತಿಮೆಗಳ ಹಿಂದೆ ಅದೆಷ್ಟು ಕಥೆಗಳು ಇವೆಯೋ? ಅದೆಷ್ಟು ಶ್ರಮಿಕರ ಜೀವನಗಾಥೆಗಳಿವೆಯೋ..? ನಾವು ಮಾತ್ರ ಚಾಲುಕ್ಯರ ದೊರೆಗಳನ್ನು ನೆನಪಿಸಿಕೊಳ್ಳುತ್ತೇವೆ. ಗೈಡ್ ನಮಗೆ ಒಂದೋ ಎರಡು ಹೇಳಿದನಷ್ಟೆ.. ಅಂಥ ಕಥೆಗಳ ಕಂಪನಗಳನ್ನು ಎಲ್ಲರೊಳಗೂ ಉಂಟು ಮಾಡುವ ಬದಾಮಿಯನ್ನು ಕೆಮೆರಾದಲ್ಲಿ ಸೆರೆಹಿಡಿಯುವ ಪ್ರಯತ್ನ ಮಾಡಿದ್ದೇನೆ. ಅಲ್ಲಿ ತೆಗೆದ ಒಂದಿಷ್ಟು ಫೋಟೋಗಳು ಇಲ್ಲಿವೆ...)



ಚಾಲುಕ್ಯರ ರಾಜಧಾನಿಯಾಗಿದ್ದ ಇತಿಹಾಸ ಪ್ರಸಿದ್ಧ ಬದಾಮಿ ಗುಹಾಂತರ ದೇವಾಲಯ


ಮೊದಲನೆ ಗುಹಾಲಯ (ಶಿವ)


ಅರ್ಧನಾರೇಶ್ವರ


ಶಿವ ಪಾರ್ವತಿ ಮತ್ತು ಸೇವಕಿ

ಶಿವನ ನಾಟ್ಯಭಂಗಿ

ಎರಡನೆಯ ಗುಹಾಲಯ (ವಿಷ್ಣು)

ವಾಮನ ಅವತಾರ


ಚಕ್ರವರ್ತಿ ಪುಲಕೇಶಿ ಹೋಲುವ ವಿಷ್ಣುವಿನ ಮೂರ್ತಿ

ವಿಷ್ಣುವಿನ ವರಹಾ ಅವತಾರ

ನರಸಿಂಹ

ಅಗಸ್ತ್ಯ ಹೊಂಡ




ಭೂತನಾಥ ದೇವಾಲಯ

8 comments:

Anonymous said...

hi dear swamy,
very happy that you have started your blog. we wish to read you more and more. mazaa maadi.
take care
venky

kanthbaraha said...

baravanige chennagide. tumba simple aagi bareeteeri. continue maadi.

Lakshmikanth

ಗಿರೀಶ್ ರಾವ್, ಎಚ್ (ಜೋಗಿ) said...

ಗುಡ್ ಲಕ್ ಡಿಯರ್, ಬರಹ ಚೆನ್ನಾಗಿದೆ. ಮತ್ತೊಂದು ದಿಕ್ಕಿನಿಂದ ನೋಡ್ತಿದ್ದೀರಿ. ಫೋಟೋಗಳೂ ಚೆನ್ನಾಗಿವೆ. ಬೆಟರ್ ದ್ಯಾನ್ ಒರಿಜಿನಲ್. ನಾನೂ ಬಾದಾಮಿಗೆ ಹೋಗಿದ್ದೆ. ನಿರಾಸೆಯಿಂದ ವಾಪಸ್ಸು ಬಂದೆ. ಐತಿಹಾಸಿಕ ತಾಣಗಳೇನಿದ್ದರೂ ಫೋಟೋಗ್ರಾಫರ್ ಗಳಿಗೆ ಮಾತ್ರ.
ಗುಡ್ ಲಕ್
-ಜೋಗಿ

vidyarashmi Pelathadka said...

hi,

khushi aaytu nim blog odi. chennagi vinyasa madteera, chennagi vadisteera andkondidde. chennagi bariteeri kuda, nice. ithihasavannu noduva nimma drishti illi eshtu bhinnavendu spashtavagide. heege vaividhyathe halavu reethiyalli teredukollali.

-vidyarashmi

Sathish G T said...

antu barahakke maralide annode santhosha. it is good. inmunde blog update mado karanakkadru nitya baritiru. aa mulaka nannathavarigu hottekichchu untagi baribahudu. it is a good attempt.
photos are good. adru mehaboobana koli ruchi bagge hechchu bareyade nirase untu madidiya. ondu spashta agolla. mundina barahadalli swalpa vivarisidare olledu.
blog bandh agadirali.

ಕಾರ್ತಿಕ್ ಪರಾಡ್ಕರ್ said...

ಸ್ವಾಮಿ ಸರ್, ಸೂಪರ್ ಸರ್ .....ನಿಮ್ಮ ಅಲೆದಾಟ ಮುಂದುವರಿಯಲಿ....ಒಂದಷ್ಟು ಚಂದದ ಫೋಟೋಸ್,ಜೊತೆಗೆ ಬರಹ ನಮಗಿರಲಿ..(ಅಷ್ಟರ ಮಟ್ಟಿಗೆ ನಾನು ಸ್ವಾರ್ಥಿ!)

Unknown said...

hi Swamy,

nimma badami lekhana nanna 2varshada hindina badami betiya nenpu thantu. neevu puta vinyasadallaste praveenaru endukondige, aadare barahdallu sai enisikodidara. haage munduvaresi.
best of luck
Yeshodha

Rakesh Holla said...

Hi,
Tumba channagide sir....