Friday, July 18, 2008

ಏನು ಹೇಳಲೋ ನಿನ್ನ ಬಿರುದಾ ಮದಕೇರಿ...



'ನಮ್ಮ ನಾಡಿನ ಸಾಂಸ್ಕೃತಿಕ ಪುರಾಣ ಎಂದರೆ ಅದು ಕೇವಲ ರಾಮಾಯಣ, ಮಹಾಭಾರತಗಳ ಪುರಾಣ ಎಂಬ ಸಾರ್ವತ್ರಿಕ ಅಭಿಪ್ರಾಯವಿರುವ ಈ ಸನ್ನಿವೇಶದಲ್ಲಿ, ಬುಡಕಟ್ಟು ಮಹಾಕಾವ್ಯಗಳ ಮೂಲಕ ಕನ್ನಡ ಸಂಸ್ಕೃತಿಯನ್ನು ಹುಡುಕುವ ಕಾರ್ಯ ನಡೆಯಬೇಕಿದೆ. ಮಾತೆತ್ತಿದರೆ 'ಭಾರತೀಯ ಸಂಸ್ಕೃತಿ' ಎಂಬ ಸಾರ್ವತ್ರಿಕರಿಸುವ ಭ್ರಮೆಯಿಂದ ಹೊರ ಬಂದು ಪ್ರತಿಯೊಂದು ಭಾಷೆಯ ನೆಲಕ್ಕೂ ತನ್ನದೇ ಆದ ವೈಶಿಷ್ಟ್ಯತೆ ಇದೆ, ತನ್ನದೇ ಆದ ಸಂಸ್ಕೃತಿ ಇದೆ ಎಂಬ ವಾಸ್ತವದ ನೆಲೆಯಲ್ಲಿ, ನೆಲದ ಗುಣ ಹುಡುಕುವ ಕಾರ್ಯಕ್ಕೆ ನಾವೀಗ ಮುಂದಾಗಬೇಕಿದೆ. ಅಖಿಲ ಭಾರತೀಯ ಮಟ್ಟದ ರಾಮ, ಕೃಷ್ಣ, ಶಿವ ಅಥವಾ ಇತರೆ ದಶಾವತಾರದ ದೈವಗಳಂತಲ್ಲದೆ ಒಂದು ವಿಶಿಷ್ಟ ಭೂಪ್ರದೇಶದ ಅಥವಾ ಒಂದು ಬುಡಕಟ್ಟಿನ ಪರಂಪರೆಯಲ್ಲಿ ಸೃಷ್ಟಿಯಾಗಿರುವ ದೈವ ಪುರುಷರು ಇವತ್ತಿನ ಸಂಸ್ಕೃತಿ ಚಿಂತಕರಿಗೆ ಮುಖ್ಯವಾಗಬೇಕಾಗಿದೆ. ಕಾಡು ಮತ್ತು ನಾಡಿನ ಹತ್ತಾರು ಜನ ವರ್ಗಗಳು ಪೂಜಿಸುವ ದೈವಗಳು ಮತ್ತು ಆ ದೈವಗಳ ಬಗ್ಗೆ ಅವರು ಕಟ್ಟಿಕೊಂಡ ಕಥನಗಳು ನೂರಾರು. ಈ ಕಥನಗಳೇ ನಿಜವಾದ ಅರ್ಥದಲ್ಲಿ ನಮ್ಮ ಸಂಸ್ಕೃತಿಯ ಇತಿಹಾಸವನ್ನು ರೂಪಿಸಬಲ್ಲ ಮುಖ್ಯ ಸಂಗತಿಗಳು. ಈ ಕಥನಗಳನ್ನು ಅಭ್ಯಸಿಸುವುದರಿಂದ ಭಾರತದ ಇದುವರೆಗಿನ ವ್ಯವಸ್ಥೆಯಲ್ಲಿ ನಿರ್ಲಕ್ಷಿಸಲ್ಪಟ್ಟ ಜನವರ್ಗಗಳಿಗೆ ಕೂಡ ಒಂದು ಶ್ರೀಮಂತ ಸಂಸ್ಕೃತಿ ಇದೆ ಎಂಬುದನ್ನೂ ಆ ಸಂಸ್ಕೃತಿಗೆ ಒಂದು ಪರಂಪರೆ ಇದೆ ಎಂಬುದನ್ನೂ ಆ ಪರಂಪರೆಯೇ ಒಂದು ನಾಡಿನ ವಿವೇಕ ಮತ್ತು ಜ್ಞಾನವನ್ನು ಕಾಪಾಡಿಕೊಂಡು ಬಂದಿದೆ ಎಂಬುದನ್ನೂ ನಾವು ತಿಳಿಯುತ್ತೇವೆ' ಎಂದು ಚಂದ್ರಶೇಖರ ಕಂಬಾರರು ಕನ್ನಡ ವಿವಿ ಹೊರತಂದ 'ಮಂಟೇಸ್ವಾಮಿ ಮಹಾಕಾವ್ಯ' ಕ್ಕೆ ಮುನ್ನುಡಿಯಲ್ಲಿ ಬರೆಯುತ್ತಾರೆ.

ಕನ್ನಡದಲ್ಲಿ ಐತಿಹಾಸಿಕ ಜನಪದ ಕಾವ್ಯಗಳ ಕುರಿತು ಶ್ರೀಮತಿ ಜಯಲಕ್ಷ್ಮಿ ಸೀತಾಪುರ ರವರು ಮಹತ್ವದ ಸಂಶೋಧನೆ ಮಾಡಿದ್ದಾರೆ. ಕರ್ನಾಟಕದ ಜನಪದ ವೀರಕಾವ್ಯಗಳಿಗೆ ಪ್ರೇರಣೆಯನ್ನು ನೀಡಿದ ಐತಿಹಾಸಿಕ ಸ್ಥಳಗಳಲ್ಲಿ ಚಿತ್ರದುರ್ಗ ಮುಖ್ಯವಾದುದು. ಚಿತ್ರದುರ್ಗದ ವೀರರನ್ನು ಕುರಿತಂತೆ ವಿಫುಲವಾಗಿ ಲಾವಣಿಗಳು ಮತ್ತು ಕಾವ್ಯಗಳು ಸೃಷ್ಟಿಯಾಗಿವೆ. ಅವುಗಳಲ್ಲಿ ಕೆಲವನ್ನು ಜಯಲಕ್ಷ್ಮಿಯವರು ಸಂಗ್ರಹಿಸಿದ್ದಾರೆ. ಅವರ ಸಂಗ್ರಹದಲ್ಲಿ ಚಿತ್ರದುರ್ಗದ ಮದಕರಿನಾಯಕರಿಗೆ ಸಂಬಂಧಿಸಿದ್ದನ್ನು ಮಾತ್ರ ನಿಮಗೆ ಪರಿಚಯಿಸುತ್ತಿದ್ದೇನೆ.

ಚಿತ್ರದುರ್ಗ ಜಿಲ್ಲೆಯ ಕೆರೆ, ದೇವಾಲಯ, ಸ್ಮಾರಕ ಶಿಲೆ ಮುಂತಾದವುಗಳ ಭಿನ್ನ ನೆಲೆಯಲ್ಲಿ ಅನೇಕ ವೀರರ ಕಥೆಗಳು ಹುದುಗಿಕೊಂಡಿವೆ. ಚಿತ್ರದುರ್ಗ ಜಿಲ್ಲೆ ಪ್ರೇಮಗೀತೆಗಳಿಗೇ ಅಲ್ಲದೆ ಚಾರಿತ್ರಿಕ ಗೀತೆಗಳಿಗೂ, ಕೌತುಗೀತೆಗಳಿಗೂ ಆಗರವೆನಿಸಿವೆ ಎಂಬುದನ್ನು ಗುರುತಿಸಿ ಮತಿಘಟ್ಟ ಕೃಷ್ಣಮೂರ್ತಿ ಅವರು ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದ ಕೋಲಾಟ ಪದಗಳನ್ನು, ಐತಿಹಾಸಿಕ ಗೀತೆಗಳನ್ನು ಪ್ರಕಟಿಸಿದ್ದಾರೆ. ಈ ಜಿಲ್ಲೆಯ ಕೋಲಾಟದ ಪದಗಳನ್ನು ಹಾಡುವ ‘ನಾಯಕರು’ ತಮ್ಮ ಕುಲಭೂಷಣರಾದ ದುರ್ಗದ ಪಾಳೆಯಗಾರರಿಗೆ ಸಂಬಂಧಿಸಿದ ಪದಗಳನ್ನು ಹಾಡುತ್ತಾರೆ. ವಿಶೇಷ ಎಂದರೆ ಇವರು ಚಿತ್ರದುರ್ಗದ ನಾಯಕರೆಲ್ಲರನ್ನು ‘ಮದಕರಿ ನಾಯಕ’ ಎಂದೇ ಹೇಳುತ್ತಾರೆ.

ಮಾಯಕೊಂಡದ ಯುದ್ಧ ಚಿತ್ರದುರ್ಗದ ಇತಿಹಾಸದಲ್ಲಿ ತುಂಬ ಮಹತ್ವದ್ದು. ಆ ಯುದ್ಧದಲ್ಲಿ ದುರ್ಗದ ನಾಯಕ ಮತ್ತು ಆತನ ನೆಚ್ಚಿನ ಸರದಾರ ನಾಡಿಗ ಸಂಕಣ್ಣ ಮಡಿದರು. ಆ ಯುದ್ಧದಲ್ಲಿ ಕುತಂತ್ರದಿಂದ ನಾಯಕನನ್ನು ಕೊಲ್ಲಲಾಯಿತೆಂಬ ಸೂಚನೆ ಕೂಡ ಕೆಲವು ಪದಗಳಲ್ಲಿ ಸಿಗುತ್ತದೆ. ‘ಕಾಳಗದ ಪದ’ ಯುದ್ಧದ ಬಿರುಸನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತದೆ. ರಾಜಕುಮಾರ ಜಂಪಣ್ಣನ ಶೌರ್ಯವನ್ನು ಕುರಿತ ಪದಗಳು, ಅವನ ಅಕಾಲ ಮರಣವನ್ನು ಕುರಿತ ಪದಗಳು ಕೂಡ ಮತಿಘಟ್ಟ ಅವರ ಸಂಗ್ರಹದಲ್ಲಿವೆ. “ಒಂದು ರೀತಿಯಲ್ಲಿ ಜನಪದ ಸಾಹಿತ್ಯ ಕ್ಷೇತ್ರದಲ್ಲಿ ಚಿತ್ರದುರ್ಗ ಜಿಲ್ಲೆಗೆ ವಿಶಿಷ್ಟ ಸ್ಥಾನ ಸಲ್ಲಬೇಕು” ಎಂಬ ಮತಿಘಟ್ಟ ಅವರ ಮಾತು, ಚಿತ್ರದುರ್ಗಕ್ಕೆ ಐತಿಹಾಸಿಕ ಕಾವ್ಯಗಳಲ್ಲಿ ಸಲ್ಲಬೇಕಾದ ಸ್ಥಾನವನ್ನು ನಿರ್ದೇಶಿಸುತ್ತದೆ.

ಚಿತ್ರದುರ್ಗವನ್ನು ಕುರಿತ ಗೀತೆಗಳನ್ನು ಸಂಗ್ರಹಿಸಿದವರಲ್ಲಿ ಕೃಷ್ಣಮೂರ್ತಿ ಅವರೇ ಅಲ್ಲದೆ, ಕ.ರಾ.ಕೃ. ಮತ್ತು ಹುಲ್ಲೂರು ಶ್ರೀನಿವಾಸ ಜೋಯಿಸ ಅವರುಗಳೂ ಮುಖ್ಯರಾದವರು. ಹುಲ್ಲೂರು ಶ್ರೀನಿವಾಸ ಜೋಯಿಸರು ಹಲವಾರು ಗೀತೆಗಳನ್ನು ಸಂಗ್ರಹಿಸಿರುವುದೇ ಅಲ್ಲದೆ ಅನೇಕ ಲೇಖನಗಳನ್ನೂ ಪ್ರಕಟಿಸಿದ್ದಾರೆ. ‘ಪಾಳೆಯಗಾರರ ಜನಪದ ಗಾತೆಗಳು’, ‘ಮಾಯಕೊಂಡದ ಲಡಾಯಿ’, ‘ಮಾಯಿಕೊಂಡದ ಮುತ್ತಿಗೆ ಅಥವಾ ರಣಧೀರ ಹಿರೇ ಮದಕರಿನಾಯಕ’ ಮುಂತಾದ ಸಂಗ್ರಹಗಳನ್ನು ಹೊರತಂದಿರುವ ಶ್ರೀನಿವಾಸ ಜೋಯಿಸರು ಚಿತ್ರದುರ್ಗದ ವಿದ್ವಾಂಸರ ಗಮನ ಸೆಳೆದವರು. ಕ.ರಾ.ಕೃ. ಅವರು ಪ್ರಕಟಿಸಿದ ‘ಮಲ್ಲಿಗೆ ನಗುತಾವೆ’ ಎಂಬ ಸಂಕಲನದಲ್ಲಿ ‘ಚಿತ್ರದುರ್ಗದ ಮದಕರಿ ನಾಯಕನ ಗೀತೆಗಳು’, ‘ಏನು ಹೇಳಲೋ ನಿನ್ನ ಬಿರುದಾ’, ‘ನಾಯಕನ ರಥವ ಕುರಿತು ಪ್ರಕಟಿಸಿದ ‘ಪಾಳಯಗಾರರಪದಗಳು’ ಮತ್ತು ‘ಚಿತ್ರಕಲ್ಲು ಮದಕರಿ’ ಎಂಬ ಸಂಕಲನಗಳಲ್ಲಿ ಮದಕರಿ ನಾಯಕನನ್ನು ಕುರಿತ ಬಿಡಿಗೀತೆಗಳು ಒಟ್ಟಿಗೆ ಸಿಗುತ್ತವೆ.

ಐತಿಹಾಸಿಕವಾಗಿ ಹಿರಿಯ ಮದಕರಿನಾಯಕ ಕ್ರಿ.ಶ.1721 ರಿಂದ 1748ರವರೆಗೆ ಆಳ್ವಿಕೆ ನಡೆಸಿದರೆ, ಕೊನೆಯ ಅರಸನಾದ ರಾಜಾವೀರ ಮದಕರಿನಾಯಕ ಕ್ರಿ.ಶ. 1754 ರಿಂದ 1779ರವರೆಗೆ ಅಧಿಕಾರ ನಡೆಸಿದ್ದಾನೆ. ಹಿರೇ ಮದಕರಿ ನಾಯಕ ಇಂದಿನ ಜಿಲ್ಲೆಯ ಮಾಯಕೊಂಡದಲ್ಲಿ ನಡೆದ ಯುದ್ಧದಲ್ಲಿ (ಕ್ರಿ.ಶ.1748-49) ಸಾವನ್ನಪ್ಪಿದವನು. ರಾಜಾ ಮದಕರಿನಾಯಕ ಸ್ವಜನರ ಪಿತೂರಿಗೂ ವೈರಿಗಳ ತಂತ್ರಕ್ಕೂ ಬಲಿಯಾದವನು. ನೆರೆ ಸಂಸ್ಥಾನಿಕರ ದ್ವೇಷಕ್ಕೆ ಆತ ಬಲಿಯಾಗಿ ಶ್ರೀರಂಗಪಟ್ಟಣದ ಹೈದರಾಲಿಗೆ ದುರ್ಗವನ್ನು ಒಪ್ಪಿಸಿದನು. ಆತ ಸೆರೆಯಾಳಾಗಿ ದುರ್ಗದ ಚರಿತ್ರೆಯಲ್ಲಿ ದುರಂತಕ್ಕೆ ಆಸ್ಪದವಾದವನು. ಆದರೆ ಈ ಚಾರಿತ್ರಿಕ ಸಂಗತಿಗಳನ್ನು ಜನಪದ ಕವಿಗಳು ತಮ್ಮದೆ ಆದ ರೀತಿಯಲ್ಲಿ ನಿರೂಪಿಸಿದ್ದಾರೆ.

ತಾವರೆಗೆರೆ, ಇಕ್ಕನೂರು, ಕೋಡಿಹಳ್ಳಿಗಳನ್ನು ವಶಪಡಿಸಿಕೊಂಡ ಮದಕರಿ ನಾಯಕ:

ಸೀರ್ಯಾವ ಗೆದ್ದ ಸಿನ್ನದುಂಗುರ ಗೆದ್ದ
ಮಾತಿನಲ್ಲಿ ಗೆದ್ದ ಮಲೆನಾಡು.

ಮದಕರಿ ನಾಯಕನ ಇಂಥ ವೀರಗುಣವನ್ನು ತಿಳಿಸುವ ಹಲವು ಗೀತೆಗಳಿವೆ. ಇವುಗಳಲ್ಲಿ ಮದಕರಿನಾಯಕ ಗೆದ್ದ ಪ್ರದೇಶಗಳನ್ನು ಜನಪದರು ಉಲ್ಲೇಖಿಸಿದ್ದಾರೆ:

ಕುಂತೆ ಕಡಿದ ಕುಂದರಿಪ ತಂಕ
ನಿಂತ್ ಕಡಿದ ನೀಡುಗಲ್ಲಿನ ತಂಕ
ಬಾಗಿ ಕಡೆದ ಬಳ್ಳಾರಿ ತಂಕ
ತೂಗಿ ಕಡಿದ ತುಮ್ಕೂರು ತಂಕ
ಧೀರ ಮದಕೇರಿ ಕಡಿದ
ಸೀರ್ಯ ದೂರೆ ಬಾಗಿಲ ತಂಕ

ಮದಕರಿ ನಾಯಕ ಮೇಲು ದುರ್ಗವನ್ನು ಭದ್ರಪಡಿಸಿ ಆಯಕಟ್ಟಿನ ಸ್ಥಳಗಳಲ್ಲಿ ಫಿರಂಗಿಗಳನ್ನು ಇಡಿಸಿದ ಒಳಪೇಟೆ ಹೊರಪೇಟೆಗಳನ್ನು ಕಟ್ಟಿಸಿದ.

ಮೇಲು ದುರುಗದ ಮ್ಯಾಲೆ ಜೋಡೆಳ್ಳು ಫಿರಂಗಿ
ನೋಡೆ ನಿಂಗಮ್ಮ ನಿನಮಗ
ನೋಡೆ ನಿಂಗಮ್ಮ ನಿನಮಗ ಮೆದಕೇರಣ್ಣ
ಸಿರ್ಯಾವೇ ಗೆದ್ದು ಬರುತಾನೆ

ಎಂಬುದು ಜನರ ವಿಶ್ವಾಸ ಮೂಡಿಬಂದ ಮಾತು.
ರಾಜ್ಯವನ್ನು ಸುಭದ್ರಗೊಳಿಸಿದ ಮದಕರಿನಾಯಕ ಜರಮಲೆ ಸೀಮೆಗೆ ಯುದ್ಧಕ್ಕೆ ಹೊರಟ. ಗಂಡುಗಲಿಯಾದ ನಾಯಕ ಓಲೆಯನ್ನು ನೋಡಿ ಸಿಡಿದೆದ್ದು ಹೀಗೆ:

ಈಬೇಟು ಹುಡುಗರು ಚೀಟಿ ಚಿಲ್ಲಣದೋರು
ಆಸುರು ಬಲ್ಕೀದ ಈ ಬೇರು
ಅಸುರು ಬಿಲ್ಕೀದ ಈಬೇರ್ ಮೆಲಕೇರಣಗೆ
ಬೇಬೇ ಸಲಾಮ್ ತಾವು ಕೊಡುತಾರೆ
ದೊಡ್ಡ ದೊಡ್ಡ ಹಿರಿಯರು ಎದ್ದು ಗುರಿಕಾರರು
ಚಿಂತರುಕಲ್ಲಿಗು ತಕ್ಕ ಹಳಬರು - ಮೆದಕೇರಣಗೆ
ನಿಂತು ಸಲಾಮತಾ ಕೊಡುತಾರೆ.

ಯುದ್ಧದ ಕರೆಯನ್ನು ಕೇಳಿದ ಮದಕರಿ ನಾಯಕನು ಎದ್ದ ಬಗೆಯನ್ನು ಜನಪದ ಕವಿ ವರ್ಣಿಸಿದ ರೀತಿ ಇದು:

ಎದ್ದನು ಮದಕೇರಿ ಎಳೆಮೀಸೆ ತಿರುವುತ
ಕೈಕಾಲು ಮುಖವ ತೊಳೆದಾನೆ - ಮದಕೇರೆ
ನಿಲುವ ಕನ್ನಡೆಯ ಹಿಡಿದಾನೆ ಮದಕೇರಿ
ಇಟ್ಟಾನೆ ಹಿರಿಯ ನಾಮಗಳ.

ಯುದ್ಧಕ್ಕೆ ಹೊರಟ ಮದಕರಿ ನಾಯಕನು ತನ್ನ ಕುಲದೇವತೆ ಉಚ್ಚಂಗಿ ಎಲ್ಲಮ್ಮನ ಬಳಿಗೆ ಪ್ರಸಾದ ಕೇಳಲು ಹೋಗುತ್ತಾನೆ. ಆದರೆ ದೇವಿ ಎಡಗಡೆ ವರ ಕೊಡುತ್ತಾಳೆ. ಅವನು ಕುಪ್ಪಸ ತೊಡಲು ಹೋದಾಗ ‘ಬೆಕ್ಕೆರಡು ಸೀತಾವು’ ಇಷ್ಟಾದರೂ ಮದಕರಿ ನಾಯಕ ಯುದ್ಧಕ್ಕೆ ಸನ್ನದ್ಧನಾಗುತ್ತಾನೆ. ಅವನು ಹಾವಿನ ಶಕುನಕ್ಕೂ ಅಂಜಲಿಲ್ಲ. ಮೇಲುವರ್ಗದ ಸಿದ್ದೇಶನ ಗುಡಿಯನ್ನೂ ಕೇಳಲಿಲ್ಲ. ಆತ ವರನನ್ನು ಕೇಳಿದ ಎಲ್ಲ ದೈವಗಳೂ ಅವಕೃಪೆಯನ್ನೇ ನೀಡಿವೆ.

ಮದಕರಿ ನಾಯಕ ಮಾಯಕೊಂಡದ ಕಣದಲ್ಲಿ ಯುದ್ಧ ಮಾಡಿದ ಚಿತ್ರವನ್ನು ಜನಪದ ಕವಿಗಳು ವರ್ಣಿಸಿದ್ದಾರೆ. ಸಂಕನೆಂಬ ಕಲಿಯನ್ನು ಕೂಡಿಕೊಂಡು ಮದಕರಿ ಹೋರಾಡಿದ ರೀತಿ ಇದು.

ಆನೆ ಮೇಲೆ ಮೆದಕೇರಿ ಕೆಳಗಡೆ ಸಂಕಣ್ಣ
ಆಗ ಬ್ಯಾಗದಲೇ ಹೊರಟಾರೋ
ಆಗ ಬ್ಯಾಗದಲೀ ಹೊರಟು ಹೋಗುವಾಗ
ತುರುಕರ ತಂಡೇ ಬೆನ್ನತ್ತಿ
ಅಡ್ಡಗಟ್ಟಿದವಣ್ಣ ಆರು ಸಾವರಿದಂಡು
ಬೆನ್ನು ಹತ್ತಿದವಣ್ಣ ಮೂರು ಸಾವಿರದಂಡು
ಮೆದರಕೇರಿಗಾಗಾ ಸಿಗಕೊಡದರು.

ಮದಕರಿ ನಾಯಕನನ್ನು ಕತ್ತಿಯಲ್ಲಿ ಕಡಿದರು, ಬಾಕುವಿನಲ್ಲಿ ತಿವಿದರು. ಕತ್ತಿ ಕಟಾರಿ ಕೈಹಿಟ್ಟು ಹೊದಾಗ ‘ಮಿಟ್ಟಿ’ಯಲ್ಲೇ ಹೊಡೆದರು. ಕತ್ತಲಾಗುವ ವೇಳೆಯಲ್ಲಿ ಮಾಯಕೊಂಡದ ಕೋಟೆಯ ಬಾಗಿಲನ್ನು ಹಾಕಿಕೊಂಡರು. ಮದಕರಿನಾಯಕ ಚಿತ್ರದುರ್ಗಕ್ಕೆ ಹೋಗುವುದು ಬೇಡವೆಂದು ನಿಶ್ಚಯಿಸಿದ. ಗಂಗಾಸ್ನಾನ ಮಾಡಿ ಕುಲದೇವರನ್ನು ನೆನೆದ. ಮನೆದೇವರು ಪ್ರತ್ಯಕ್ಷನಾಗಿ ವರ ಬೇಡೆಂದಾಗ:

ಚಿತ್ರದುರ್ಗಕ್ಕೆ ಹೋದರೆ ಹಿಂಸೆ ಬಂದಿತು ನಮಗೆ
ಇಲ್ಲಿನ ಈ ರಾಜ್ಯವು ಬೇಡೆಂದ ಮನೆಸ್ವಾಮಿ
ನನ್ನ ತಗೊಂಡೆ ಹೋಗೆಂದ.

ಅದಕ್ಕೆ ಮನೆ ಸ್ವಾಮಿ ಮೂರು ಮಾಯದ ಹಣ್ಣನ್ನು ಆತನ ಕೈಗೆ ಕೊಟ್ಟ. ಹಣ್ಣಿನೊಡನೆ ಆನೆಯನ್ನು ಹತ್ತಿ ಕುಳಿತ ಮದಕರಿ ರಣಭೂಮಿಗೆ ಬಂದ. ಆನೆಗೊಂದು ಹಣ್ಣು ತಿನ್ನಿಸಿ, ತಾನೊಂದು ಹಣ್ಣು ತಿಂದು ಸಂಕಣ್ಣನಿಗೊಂದು ಹಣ್ಣನ್ನು ಕೊಟ್ಟ. ಆನೆಯೂ ಸೇರಿದಂತೆ ಇವರಿಬ್ಬರು ರಣರಂಗದಲ್ಲೇ ಪ್ರಾಣಬಿಟ್ಟರು.

ಸ್ವಾಭಿಮಾನಿಯಾದ ಮದಕರಿ ನಾಯಕ ದುರ್ಗಕ್ಕೆ ಹಿಂತಿರುಗಲಿಲ್ಲ. ಸಾಹಸಿಯಾಗಿ ಅವನು ಹೋರಾಡಿದರೂ ಕೋಟೆ ಆತನ ಕೈವಶವಾಗಲಿಲ್ಲ. ಆತ ದುರ್ಗಕ್ಕೆ ಹಿಂದಿರುಗದೆ ರಣರಂಗದಲ್ಲಿಯೇ ಮೃತ್ಯುವನ್ನು ಆಹ್ವಾನಿಸಿದ. ಇದನ್ನು ಕವಿಗಳು ಬೇರೆ ಬೇರೆ ರೀತಿಯಲ್ಲಿ ವರ್ಣಿಸಿದ್ದಾರೆ.

ಹೋದೋನೆ ಸತ್ತರಿಕೆ ಹೋದೋನೆ ಪಲ್ಲಕ್ಕಿ
ಹಿಂದಿರುಗಿ ದುರ್ಗಕ್ಕೆ ಬಂದಾವೋ
ತಾಯೀನೆ ಚಿನ್ನಮ್ಮ ಏನೆಂದು ಅಳುತಾಳೆ
ಹೋದಾನೆ ಕಂದಮ್ಮ ಬರಲಿಲ್ಲ.
ಸುದ್ದಿ ತಂದಣ್ಣಾಗೆ ಮಜ್ಜಿಗೆ ಬಾನಾ ಇಟ್ಟು
ಏನು ಸುದ್ದಿಯ್ಯಾ ರಣದೊಳಗೆ
ಏನು ಸುದ್ದಿ ಇಲ್ಲ ಏನು ಗದ್ದಲವಿಲ್ಲ
ಧೀರ ಮದಕೇರಿ ಮಡಿಹೋದ

ಮದಕರಿ ಆನೆಯ ಮೇಲೆ ಕುಳಿತೇ ಮರಣವನ್ನು ಅಪ್ಪಿದ ದೃಶ್ಯ ಅತ್ಯಂತ ದಾರುಣವಾದದ್ದು. ಮುಂಗೋಳಿ ಕೂಗಿ ಮೋಡ ಕೆಂಪೇರಿದಾಗ ಮಾಯಕೊಂಡದ ಬಾಗಿಲನ್ನು ತೆರೆದು ನೋಡಿದ ಶತ್ರುಗಳಿಗೆ ಆನೆ ಕಣ್ಣ ಮುಂದೆ ತೋರಿತು. ಅವರು ಹೆದರಿ ಮತ್ತೆ ಬಾಗಿಲನ್ನು ಹಾಕಿಕೊಂಡರು. ಮದಕರಿ ನಾಯಕ ನೆಲ್ಲಕ್ಕುರುಳಿದ ರೀತಿಯನ್ನು ಜನಪದ ಕವಿ ಪರಿಣಾಮಕಾರಿಯಾಗಿ ಹೀಗೆ ವರ್ಣಿಸಿದ್ದಾನೆ.
ಬಿದ್ದಾನೆ ಮದಕೇರಿ ಬಿಳಿಯಂಗಿ ಮೇಲಾಗಿ
ವಜ್ಜುರದ ಬಾಕು ಅಡಿಯಾಗಿ
ವಜ್ಜುರ ಬಾಕು ಅಡಿಯಾಗಿ ಮದಕೇರಣ್ಣ
ಸೊರಿದಿಗೆ ಮುಖ ಎದುರಾಗಿ

– (ಅಪ್ರಕಟಿತ) ಜಯಮ್ಮ ಸಂಗಡಿಗರು ಚಿತ್ರದುರ್ಗ, – ಸಂಗ್ರಹ: ಶ್ರೀಮತಿ ಜಯಲಕ್ಷ್ಮಿ ಸೀತಾಪುರ.

3 comments:

Anonymous said...

'shrama' samskruthiyalli beru ittukondiruva neenu ninna purvikarige nenesikondu olle kelasa madidiya. ninna 'kainkarya' heege sagali.
- bandekallu

Anonymous said...

chennagide swamy. durgada itihasada bagge hosa nota.. intha lekhana hecchu bareyiri..

Unknown said...

ಮಾನ್ಯರೆ, ಕ.ರಾ.ಕೃಷ್ಣಸ್ವಾಮಿ ಅವರ ಪೋನ್ ನಂಬರ್ ಮತ್ತು ವಿಳಾಸ ಗೊತ್ತಿದ್ದರೆ ದಯಮಾಡಿ ಈ-ಮೇಲ್ ಮಾಡಿ. satya_nbr@yahoo.com